ಬುಧವಾರ, ಜೂಲೈ 8, 2020
28 °C
ಕೊಳ್ಳೇಗಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿಕೆ

ಆನ್‌ಲೈನ್‌ ತರಗತಿ ಶನಿವಾರ ಆದೇಶ: ಎಸ್‌.ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ‘ಶಾಲಾ ಮಕ್ಕಳಿಗೆ ಆನ್‌ಲೈನ್‌ನಲ್ಲಿ‌ ತರಗತಿಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಶನಿವಾರ ಆದೇಶ ಹೊರಡಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಆನ್‌ಲೈನ್‌ ಶಿಕ್ಷಣದ ಬಗ್ಗೆ ಪೋಷಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಆನ್‌ಲೈನ್‌ ಪಾಠ ಮಾಡುವುದಕ್ಕೆ ಹಾಗೂ ಸದ್ಯದಲ್ಲೇ ಶಾಲೆ ಆರಂಭ ಮಾಡುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದರು. 

‘ಆನ್‌ಲೈನ್‌ ಶಿಕ್ಷಣದಿಂದ ಚಿಕ್ಕ ಮಕ್ಕಳ ಮೇಲೆ ಆಗುವ ಪರಿಣಾಮದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ನಿಮ್ಹಾನ್ಸ್‌ನ ನಿರ್ದೇಶಕರಿಗೆ ಪತ್ರ ಬರೆದಿದ್ದೆವು. ಅವರು ಸಮಗ್ರವಾದ ವಿವರಣೆ ನೀಡಿದ್ದಾರೆ. ಮಗುವಿಗೆ ಆರು ವರ್ಷ ವಯಸ್ಸಾಗುವವರೆಗೂ ಆನ್‌ಲೈನ್‌ ಪಾಠ ಮಾಡುವುದು ಒಳ್ಳೆಯದಲ್ಲ; ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ‍ ಎಂದು ಅವರು ಹೇಳಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಆನ್‌ಲೈನ್‌ ತರಗತಿಗಳನ್ನು ಹೇಗೆ ನಡೆಸಬೇಕು, ಯಾವ ರೀತಿ ಮಾಡಬಾರದು ಎಂಬ ಬಗ್ಗೆ ಶನಿವಾರ ಆದೇಶ ಹೊರಡಿಸುತ್ತೇವೆ’ ಎಂದು ಸಚಿವರು ಹೇಳಿದರು. 

ಮತ್ತೆ ಸ್ಪಷ್ಟನೆ: ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಮತ್ತೆ ಸ್ಪಷ್ಟಪಡಿಸಿದರು. 

‘ಕೇಂದ್ರ ಸರ್ಕಾರದ ಆದೇಶದಂತೆ ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ರಾಜ್ಯದಾದ್ಯಂತ ಆಯಾ ಶಾಲೆಗಳಲ್ಲಿ ಜೂನ್ 10, 11, 12ರಂದು ಪೋಷಕರ ಸಭೆ ನಡೆಸಲಾಗುವುದು. ಅವರ ಅಭಿಪ್ರಾಯ ಪಡೆದೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚು

ರಾಜ್ಯದ ಕೋವಿಡ್‌–19 ಸ್ಥಿತಿಗತಿಗಳ ಬಗ್ಗೆಯೂ ಪ್ರಸ್ತಾಪಿಸಿದ, ಕೋವಿಡ್‌–19 ವಕ್ತಾರರೂ ಆಗಿರುವ ಸುರೇಶ್‌ಕುಮಾರ್‌, ‘ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದರು. 

‘ಇಡೀ ರಾಜ್ಯದಲ್ಲಿ 16 ಮಂದಿ ಮಾತ್ರ ಐಸಿಯುನಲ್ಲಿ ಇದ್ದಾರೆ. ನಮ್ಮಲ್ಲಿ 900 ವೆಂಟಿಲೇಟರ್‌ ವ್ಯವಸ್ಥೆ ಇದ್ದು, ಒಬ್ಬರೂ ವೆಂಟಿಲೇಟರ್‌ನಲ್ಲಿ ಇಲ್ಲ. ಸಾವಿನ ಪ್ರಮಾಣ ಶೇ 1ರಷ್ಟಿದೆ. ಕೋವಿಡ್‌–19 ಉದ್ದೇಶಕ್ಕೆ ಮೀಸಲಿಟ್ಟಿರುವ ಹಾಸಿಗಳಲ್ಲಿ ಶೇ 7ರಷ್ಟು ರೋಗಿಗಳು ಮಾತ್ರ ಇದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು