ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ 2022ಕ್ಕೆ ಸರಳ, ಸಂಭ್ರಮದ ಸ್ವಾಗತ

ದೇವಾಲಯ, ಪ್ರವಾಸಿ ತಾಣಗಳಲ್ಲಿ ಭಕ್ತರು, ಜನರ ದಂಡು
Last Updated 1 ಜನವರಿ 2022, 17:29 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು/ಮಹದೇಶ್ವರ ಬೆಟ್ಟ: ಜಿಲ್ಲೆಯ ಜನರುಹೊಸ 2022 ಅನ್ನು ಸರಳವಾಗಿ, ಸಂಭ್ರಮದಿಂದ ಸ್ವಾಗತಿಸಿದರು.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದುದರಿಂದ ಹಾಗೂ ಸಂಭ್ರಮಾಚರಣೆಗೆ ನಿರ್ಬಂಧಗಳಿದ್ದುದರಿಂದ ಜನರು ಹೆಚ್ಚು ಮೋಜು ಮಸ್ತಿಗೆ ಮೊರೆ ಹೋಗದೆ ಸರಳವಾಗಿ ಸ್ನೇಹಿತರೊಡಗೂಡಿ, ಕೇಕ್‌ ಕತ್ತರಿಸಿ, ಪರಸ್ಪರ ಸಿಹಿ ಹಂಚಿ ಹೊಸ ವರ್ಷವನ್ನು ಬರಮಾಡಿಕೊಂಡರು.

ಶನಿವಾರ ಬೆಳಿಗ್ಗೆ ಜನರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಮಯ ಕಳೆದರು. ಸ್ನೇಹಿತರು, ನೆಂಟರಿಷ್ಟರು, ಸಹೋದ್ಯೋಗಿಗಳಿಗೆ ದೂರವಾಣಿ ಕರೆ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಸಂದೇಶಗಳ ಮೂಲಕ ಶುಭಾಶಯ ಕೋರಿದರು.

ಸರ್ಕಾರಿ ಕಚೇರಿಗಳಲ್ಲಿ ಕೆಳ ಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಪುಷ್ಪಗುಚ್ಛ ನೀಡಿ ಹೊಸ ವರ್ಷದ ಶುಭಾಶಯ ಕೋರಿದರು.

ದೇವಾಲಯಗಳಲ್ಲಿ ಭಕ್ತಸಾಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯ, ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಹಿಮವದ್‌ಗೋಪಾಲಸ್ವಾಮಿ ಬೆಟ್ಟ, ಹರಳುಕೋಟೆ ಜನಾರ್ದನಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು, ದೇವರ ದರ್ಶನದ ಜೊತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಬಂಡೀಪುರ, ಕೆ.ಗುಡಿ, ಭರಚುಕ್ಕಿ ಜಲಪಾತ ಸೇರಿದಂತೆ ಪ್ರವಾಸಿ ತಾಣಗಳಲ್ಲೂ ಜನ ಸಂದಣಿ ಕಂಡು ಬಂತು.

ಮಹದೇಶ್ವರ ಬೆಟ್ಟ ವರದಿ: ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಜನರ ಸಂಖ್ಯೆ ಕಡಿಮೆ ಇತ್ತು. ಆದರೆ, ವರ್ಷದ ಮೊದಲ ದಿನವಾದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಸಾಮಾನ್ಯವಾಗಿ ವರ್ಷದ ಕೊನೆಯ ದಿನವೇ ರಾತ್ರಿ ಬೆಟ್ಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಾರೆ. ಕರ್ನಾಟಕ ಬಂದ್‌ನ ಗೊಂದಲದ ಕಾರಣಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಶನಿವಾರ ಮುಂಜಾನೆಯಿಂದಲೇ ಜಿಲ್ಲೆ, ಹೊರ ಜಿಲ್ಲೆ , ಹೊರ ರಾಜ್ಯಗಳಿಂದ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಸ್ವಾಮಿಗೆ ಹರಕೆ, ಕಾಣಿಕೆ ಅರ್ಪಿಸಿದರು.

ದೇವಾಲಯ ಹಾಗೂ ಸುತ್ತ ಮುತ್ತಲಿನ ಪ್ರದೇಶಕ್ಕೆ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ದಾಸೋಹ, ವಿವಿದ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿತ್ತು.

ವಿಶೇಷ ಪೂಜೆ:ಹೊಸ ವರ್ಷ ಹಾಗೂ ಧನುರ್ಮಾಸದ ಪ್ರಯುಕ್ತವಾಗಿ ಮಹದೇಶ್ವರ ಸ್ವಾಮಿಗೆ ಶನಿವಾರ ವಿಶೇಷ ಪೂಜೆ ನೆರವೇರಿಸಲಾಯಿತು. ನಸುಕಿನಲ್ಲಿಯೇ ದೀಪಾಲಂಕಾರ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಗಂಧಾಭಿಷೇಕ ಹಾಗೂ ರುದ್ರಾಭಿಷೇಕವನ್ನು ನೆರವೇರಿಸಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಯಿತು.

ಯಳಂದೂರು ವರದಿ:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಶನಿವಾರ ಸಾವಿರಾರುಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಮುಂಜಾನೆಯಿಂದಲೇ ಭಕ್ತಾಧಿಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಸರದಿ ಸಾಲಿನಲ್ಲಿ ನಿಂತು ದೇವರನ್ನು ಕಣ್ತುಂಬಿಕೊಂಡರು.
ಮುಂಜಾನೆ ರಂಗನಾಥನ ಮೂರ್ತಿಗೆ ಬಗೆಬಗೆ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಳದ ಮುಂಭಾಗದಲ್ಲಿ ಭಕ್ತರು ಅರಿಶಿನ ಮತ್ತು ಚಂದನದಿಂದ ಪೂಜಿಸಿ ಹಣ್ಣು-ಕಾಯಿ ಮಾಡಿಸಿಕರ್ಪೂರ ಬೆಳಗಿದರು. ಹರಕೆ ಹೊತ್ತವರು ಬ್ಯಾಟಮಣೆ ಉತ್ಸವ ನೆರವೇರಿಸಿದರು. ದಾಸರುರಂಗನಾಥನ ಮುಖವಾಡ ಇಟ್ಟು. ಅಪಾರಾಕ್ ಗೋಪಾರಕ್ ಆಚರಣೆ ನೆರವೇರಿಸಿದರು. ವಿವಿಧಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಹರಕೆ ತೀರಿಸಿದರು. ತೀರ್ಥ ಪ್ರಸಾದ ವಿನಿಯೋಗ
ನಡೆಯಿತು.

ಬಂಡೀಪುರ ಸಫಾರಿಗೆ ಬೇಡಿಕೆ

ಗುಂಡ್ಲುಪೇಟೆ: ವರ್ಷದ ಮೊದಲ ದಿನವಾದ ಶನಿವಾರ ತಾಲ್ಲೂಕಿನ ಪ್ರವಾಸಿತಾಣ, ದೇವಸ್ಥಾನ ಹಾಗೂ ಹೋಟೆಲ್‌ಗಳಲ್ಲಿ ಹೆಚ್ಚು ಜನರು ಕಂಡು ಬಂದರು.
ಬಂಡೀಪುರ ಸಫಾರಿಗೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಜಂಗಲ್ ಲಾಡ್ಜ್ ಸೇರಿದಂತೆ ಇತರೆ ಖಾಸಗಿ ವಸತಿ ಗೃಹಗಳು ತುಂಬಿರುವುದರಿಂದ ಸಫಾರಿಗೆ ಹೆಚ್ಚಿನ ಬೇಡಿಕೆ ಇತ್ತು. ಅರಣ್ಯ ಇಲಾಖೆಯ ವಸತಿ ಗೃಹಗಳನ್ನು ಕಾಯ್ದಿರಿಸಲು ಅವಕಾಶ ಇರಲಿಲ್ಲ.

ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಬೆಳಿಗ್ಗೆಯಿಂದಲೇ ಹೆಚ್ಚಿನ ವಾಹನಗಳ ಸಂಚಾರವಿತ್ತು. ಹೆದ್ದಾರಿ ಬದಿಯ ಅಂಗಡಿ ಮತ್ತು ಹೋಟೆಲ್‌ಗಳಿಗೂ ಉತ್ತಮ ವ್ಯಾಪಾರ ನಡೆದಿದೆ.

ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ನೂರಾರು ಭಕ್ತರು ಭೇಟಿ ನೀಡಿದ್ದರು.

‘ಹೊಸ ವರ್ಷದ ದಿನಾಚರಣೆ ನೆಪದಲ್ಲಿ ಸಫಾರಿಗೆ ಹೆಚ್ಚು ಪ್ರವಾಸಿಗರು ಬಂದಿದ್ದರು. ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ಅಂಥವರು ಭಾನುವಾರ ಬರುವ ಸಾಧ್ಯತೆ ಇದೆ’ ಎಂದು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT