ಗುರುವಾರ , ಸೆಪ್ಟೆಂಬರ್ 23, 2021
20 °C
ವಾರದಲ್ಲಿ ಎರಡು ಪ್ರಕರಣ ದಾಖಲು, ಒಂಬತ್ತು ಜನರ ಬಂಧನ

ಬಿಆರ್‌ಟಿ: ರಾತ್ರಿ ಹೆಚ್ವಿದ ಸಿಬ್ಬಂದಿ ಗಸ್ತು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಿದ್ದು, ವನ್ಯಪ್ರಾಣಿಗಳ ಬೇಟೆ ಹಾಗೂ ಮರ ಕಡಿದು ಸಾಗಾಟ ಮಾಡುವುದರ ಮೇಲೆ ನಿಗಾ ಇಟ್ಟಿದೆ.

ತಿಂಗಳಿನಿಂದೀಚೆಗೆ ಸಿಬ್ಬಂದಿ ರಾತ್ರಿ ಸಮಯದಲ್ಲಿ ಹೆಚ್ಚು ಗಸ್ತು ನಡೆಸುತ್ತಿದ್ದು, ವಾರದ ಅವಧಿಯಲ್ಲಿ ಒಂದು ಕಳ್ಳಬೇಟೆ ಯತ್ನ ಹಾಗೂ ಇನ್ನೊಂದು, ಮೀಸಲು ಅರಣ್ಯದಿಂದ ಮರವನ್ನು ಕಡಿದು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. 

ಕಳ್ಳಬೇಟೆ ಯತ್ನ ಪ್ರಕರಣವನ್ನು ಜುಲೈ 27ರ ಮುಂಜಾವು 3 ಗಂಟೆಗೆ ಚಾಮರಾಜನಗರ ವಲಯದ ವಡ್ಗಲ್‌ಪುರದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಪತ್ತೆ ಹಚ್ಚಿದ್ದರೆ, ಇನ್ನೊಂದು ಪ್ರಕರಣ ಶನಿವಾರ (ಜುಲೈ 31) ತಡರಾತ್ರಿ ವರದಿಯಾಗಿದೆ. ತಾಲ್ಲೂಕಿನ ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮದ ವ್ಯಾಪ್ತಿಯಲ್ಲಿ ಮರ ಕಡಿದು ಸಾಗಾಟ ಮಾಡುತ್ತಿದ್ದವರನ್ನು ತಡೆದು ಸಿಬ್ಬಂದಿ ಬಂಧಿಸಿದ್ದಾರೆ.

ಪ್ರತ್ಯೇಕ ತಂಡ: ಸಿಬ್ಬಂದಿ ಮೊದಲೂ ರಾತ್ರಿ ಗಸ್ತು, ತಪಾಸಣೆ ನಡೆಸುತ್ತಿದ್ದರು. ಆದರೆ, ಅದು ನಿಯಮಿತವಾಗಿ ನಡೆಯುತ್ತಿರಲಿಲ್ಲ. ಸಿಬ್ಬಂದಿ ಕೊರತೆ, ವಾಹನಗಳ ಸೌಕರ್ಯ ಇಲ್ಲದೇ ಇದ್ದುದರಿಂದ ಇದಕ್ಕೆ ಹೆಚ್ಚು ಒತ್ತು ‌ನೀಡಲು ಸಾಧ್ಯವಾಗಿರಲಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

'ಉಪ ವಲಯ ಅರಣ್ಯಾಧಿಕಾರಿಗಳ ನೇಮಕದ ಬಳಿಕ ಸಿಬ್ಬಂದಿ ಕೊರತೆ ಕೊಂಚ ಸುಧಾರಿಸಿದೆ. ವಾಹನ ಸೌಲಭ್ಯವೂ ಸಿಕ್ಕಿದೆ. ಹಾಗಾಗಿ, ಗಸ್ತು ತಿರುಗುವ ಪ್ರಮಾಣವನ್ನು‌ ಹೆಚ್ಚಿಸಲಾಗಿದೆ' ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ, ಒಬ್ಬ ಗಾರ್ಡ್, ವಾಚರ್ ಈ ತಂಡದಲ್ಲಿದ್ದು, ಚಾಲಕ ಸಹಿತ ವಾಹನವನ್ನು ಒದಗಿಸಲಾಗಿದೆ. ವಾರಕ್ಕೊಮ್ಮೆ ತಂಡವನ್ನು‌ ಬದಲಾಯಿಸಲಾಗುತ್ತದೆ.

‘ಕಳ್ಳಬೇಟೆ ಅಥವಾ ಮರಕಡಿದು ಸಾಗಾಟ ಮಾಡುತ್ತಿರುವುದರ ಮೇಲೆ ಮಾಹಿತಿಗಳು ಬರುತ್ತಿದ್ದು, ಅದರ ಆಧಾರದಲ್ಲಿ ತಂಡವು ಕಾರ್ಯಾಚರಣೆ ನಡೆಸುತ್ತದೆ. ಒಂದೆರಡು ಪ್ರಕರಣದಲ್ಲಿ ಖುದ್ದಾಗಿ ನಾನೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆ’ ಎಂದು ಸಂತೋಷ್‌ಕುಮಾರ್‌ ಅವರು ತಿಳಿಸಿದರು. 

ಕಾಡಂಚಿನಲ್ಲಿ ಹೆಚ್ಚು ನಿಗಾ: ಚಾಮರಾಜನಗರ ಪ್ರಾದೇಶಿಕ ವಲಯ ಅರಣ್ಯ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಕಳ್ಳಬೇಟೆ ಯತ್ನ ಹಾಗೂ ಇತರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಹಾಗಾಗಿ ಈ ಪ್ರದೇಶದಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು

‘ರಾತ್ರಿ ಹೊತ್ತು ಕಾಡಿನ ಒಳಗಡೆ ಹೋಗಿ ಕಳ್ಳಬೇಟೆ ನಡೆಸಲು, ಮರಗಳನ್ನು ಕಡಿಯಲು ಸಾಧ್ಯವಿಲ್ಲ. ಆನೆ, ಹುಲಿ ಸೇರಿದಂತೆ ಇತರ ಪ್ರಾಣಿಗಳ ಭಯ ಅವರನ್ನು ಕಾಡುತ್ತದೆ. ಹಾಗಾಗಿ, ಕಾಡಂಚಿನಲ್ಲಿ ಹಾಗೂ ಪ್ರಾದೇಶಿಕ ವಲಯದಲ್ಲಿರುವ ಮೀಸಲು ಅರಣ್ಯದಲ್ಲಿ ಇಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ. ನಮಗೆ ವಿವಿಧ ಮೂಲಗಳಿಂದ ಖಚಿತ ಮಾಹಿತಿಗಳು ಬರುತ್ತಿದ್ದು, ಅರಣ್ಯ ಸಂಪತ್ತನ್ನು ಲೂಟಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಂತೋಷ್‌ಕುಮಾರ್‌ ಅವರು ಹೇಳಿದರು. 

ಮರ ಕಡಿದು ಸಾಗಾಟ: ನಾಲ್ವರ ಬಂಧನ

ಚಾಮರಾಜನಗರ ವಲಯ ಅರಣ್ಯ ವ್ಯಾಪ್ತಿಗೆ ಬರುವ ತಾಲ್ಲೂಕಿನ ಉಮ್ಮತ್ತೂರಿನ ಮೀಸಲು ಅರಣ್ಯದಲ್ಲಿ ಅಕೇಶಿಯಾ ಮರ ಕಡಿದು ಆಟೊದಲ್ಲಿ ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಾತ್ರಿ ಬಂಧಿಸಿದ್ದಾರೆ. 

ತಾಲ್ಲೂಕಿನ ಜನ್ನೂರಿನವರಾದ ಮಹೇಶ್‌, ರಾಚಪ್ಪ, ಸಂಜಯ್‌ ಹಾಗೂ ನಾಗೇಂದ್ರ ಅವರು ಬಂಧಿತರು. ಅವರ ಬಳಿಯಿಂದ ಆಟೊ ಹಾಗೂ ಒಂದು ಬೈಕ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. 

‘ಮೈಸೂರು ಜಿಲ್ಲೆಗೆ ಹೊಂದಿಕೊಂಡ ಗಡಿ ಭಾಗದಲ್ಲಿ ಇವರು ಅಕೇಶಿಯಾ ಮರವನ್ನು ಕಡಿದು ಆಟೊದಲ್ಲಿ ಹಾಕಿ ಸಾಗಣೆ ಮಾಡುತ್ತಿದ್ದರು. ಶನಿವಾರ ರಾತ್ರಿ 12.30ರ ಸುಮಾರಿಗೆ ಉಮ್ಮತ್ತೂರು ಬಳಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಆಟೊವನ್ನು ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಬಿಆರ್‌ಟಿ ಡಿಸಿಎಫ್‌ ಸಂತೋಷ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

---------

ಗಸ್ತಿನ ವೇಳೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಸ್ತು ತಿರುಗುವ ತಂಡಕ್ಕೆ ಬಂದೂಕು ಸೇರಿದಂತೆ ಇತರ ರಕ್ಷಣಾ ಪರಿಕರಗಳನ್ನು ಒದಗಿಸಲಾಗಿದೆ
ಡಾ.ಜಿ.ಸಂತೋಷ್‌ಕುಮಾರ್‌, ಬಿಆರ್‌ಟಿ ಡಿಸಿಎಫ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.