ಶುಕ್ರವಾರ, ಮೇ 14, 2021
32 °C

99 ಮಂದಿಗೆ ಸೋಂಕು, ಒಬ್ಬರು ಸಾವು, 56 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 99 ಮಂದಿಗೆ ಕೋವಿಡ್‌ ಇರುವುದು ಖಚಿತವಾಗಿದೆ. ಒಬ್ಬರು ಮೃತಪಟ್ಟಿದ್ದಾರೆ. 56 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 493ಕ್ಕೆ ಏರಿದೆ. ಸೋಂಕಿತರಲ್ಲಿ 317 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 15 ಮಂದಿ ಐಸಿಯುನಲ್ಲಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಬಸ್ತಿಪುರ ಗ್ರಾಮದ 48 ವರ್ಷ ಮಹಿಳೆ ಸೋಂಕಿಗೆ ಬಲಿಯಾದವರು. 15ರಂದು ಅವರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದಾಗಿ ನಿಧನರಾದವರ ಸಂಖ್ಯೆ 118ಕ್ಕೆ ಏರಿದೆ. ಬೇರೆ ಅನಾರೋಗ್ಯದಿಂದಾಗಿ 20 ಮಂದಿ ಕೊನೆಯುಸಿರೆಳೆದಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ 7,859 ಮಂದಿಗೆ ಕೋವಿಡ್‌ ದೃಢಪಟ್ಟಿದೆ. 7,228 ಮಂದಿ ಗುಣಮುಖರಾಗಿದ್ದಾರೆ.

ಭಾನುವಾರ 1,591 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,493 ವರದಿಗಳು ನೆಗೆಟಿವ್‌ ಬಂದಿವೆ. 98 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ. 

99 ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 52, ಹನೂರಿನ 17, ಗುಂಡ್ಲುಪೇಟೆಯ 14, ಕೊಳ್ಳೇಗಾಲದ 12 ಹಾಗೂ ಯಳಂದೂರು ತಾಲ್ಲೂಕಿನ ನಾಲ್ವರು ಇದ್ದಾರೆ. 

ಜಿಲ್ಲಾಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತನೆ

ಚಾಮರಾಜನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆ ಇಲ್ಲ. ಜಿಲ್ಲಾಸ್ಪತ್ರೆ ಮಾತ್ರವಲ್ಲದೇ, ತಾಲ್ಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಸ್ಪತ್ರೆಯನ್ನು ಪೂರ್ತಿಯಾಗಿ ಕೋವಿಡ್‌ ಆಸ್ಪತ್ರೆ ಮಾಡಲಾಗುವುದು. ಆಗ ಹೆಚ್ಚವರಿಯಾಗಿ 150 ಹಾಸಿಗೆಗಳು ಸಿಗುತ್ತವೆ. ಕೋವಿಡ್‌ಯೇತರ ರೋಗಿಗಳಿಗೆ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಸಂಬಂಧ ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು’ ಎಂದರು. 

‘ರೋಗ ಲಕ್ಷಣಗಳಿಲ್ಲದವರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗುತ್ತಿದೆ. ಹಾಗಾಗಿ, ಹಾಸಿಗೆಗಳ ಕೊರತೆ ಕಾಡದು. ಮುನ್ನೆಚ್ಚರಿಕೆ ಕ್ರಮವಾಗಿ 80 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರವನ್ನು ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕಟ್ಟಡದಲ್ಲಿ ಸ್ಥಾಪಿಸಲಾಗುತ್ತಿದೆ. ಇನ್ನು ಒಂದೆರಡು ದಿನಗಳಲ್ಲಿ ಅಲ್ಲಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘ಆಮ್ಲಜನಕದ ಕೊರತೆ ಕಂಡು ಬಂದಿಲ್ಲ. 10 ಕಿಲೋ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ’ ಎಂದರು. 

ರೆಮ್‌ಡೆವಿಸಿರ್‌ ಚುಚ್ಚುಮದ್ದಿನ ಕೊರತೆಯ ಬಗ್ಗೆ ಕೇಳಿದ್ದಕ್ಕೆ, ‘ನಮ್ಮಲ್ಲಿ ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಕೊರತೆ ಇದೆ. ಶುಕ್ರವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ನಮಗೆ ಎಷ್ಟು ಅಗತ್ಯವಿದೆ ಎಂದು ಹೇಳಿದ್ದೇವೆ. ಸೋಮವಾರದ ಒಳಗಾಗಿ ಅಗತ್ಯಕ್ಕೆ ಬೇಕಾದಷ್ಟು ಪೂರೈಕೆಯಾಗಲಿದೆ. ಸದ್ಯ ನಮ್ಮಲ್ಲಿ ಪ್ರತಿದಿನ 40 ರಿಂದ 45 ವಯಲ್ಸ್‌ಗಳು ಬೇಕಾಗುತ್ತದೆ. ಈಗ 100 ವಯಲ್‌ಗಳು ದಾಸ್ತಾನು ಇದೆ’ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು