ಸೋಮವಾರ, ಜುಲೈ 26, 2021
26 °C
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ, ಮುಂಜಾಗ್ರತಾ ಕ್ರಮ ‍ಪಾಲನೆಗೆ ಸೂಚನೆ

ತಮಿಳುನಾಡಿನ ಭಕ್ತರಿಗೆ ಮಾದಪ್ಪನ ದರ್ಶನ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇದೇ 8ರಿಂದ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುತ್ತಿದ್ದು, ಸದ್ಯ, ತಮಿಳುನಾಡು ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ನೀಡದಿರಲು ಜಿಲ್ಲಾಡಳಿತ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಇದರ ಜೊತೆಗೆ ಭಕ್ತರಿಗೆ ಹಲವು ಷರತ್ತುಗಳನ್ನು ಒಡ್ಡಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.  

ತಮಿಳುನಾಡಿನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ತಮಿಳುನಾಡಿನಿಂದ ಬಂದವರನ್ನು ಗಡಿ ಭಾಗದಿಂದಲೇ ವಾಪಸ್‌ ಕಳುಹಿಸಲು ತೀರ್ಮಾನಿಸಲಾಗಿದೆ. 

ಕೋವಿಡ್‌–19 ತಡೆಗೆ ಸರ್ಕಾರ ಸೂಚಿಸಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯ. ಮಾಸ್ಕ್‌ ಧರಿಸಿದವರಿಗೆ ಮಾತ್ರ ದೇವಾಲಯದ ಒಳಕ್ಕೆ ಪ್ರವೇಶ ಸಿಗಲಿದೆ. ದೇವರ ದರ್ಶನಕ್ಕೂ ಮೊದಲು ಸ್ಯಾನಿಟೈಸರ್‌ ಬಳಕೆಯನ್ನೂ ಕಡ್ಡಾಯಗೊಳಿಸಲಾಗಿದೆ. 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬರುವಂತಿಲ್ಲ. ಕೆಮ್ಮು ನೆಗಡಿ, ಜ್ವರದಿಂದ ಬಳಲುತ್ತಿರುವವರಿಗೂ ಪ್ರವೇಶ ನೀಡುವುದಿಲ್ಲ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.  

ಯಾವುದೇ ತೇರುಗಳ ಉತ್ಸವವೂ ಇರುವುದಿಲ್ಲ. ಬೆಳಿಗ್ಗೆ ಅಭಿಷೇಕ ಟಿಕೆಟ್ ನೀಡುವ ವ್ಯವಸ್ಥೆ ಇಲ್ಲ. ಸಾಂಪ್ರದಾಯಿಕವಾಗಿ ಅಭಿಷೇಕ ನಡೆಯಲಿದೆ. ಲಾಡು ಮತ್ತು ಮಿಶ್ರ ಪ್ರಸಾದ ಪ್ರಸಾದ ಮಾರಾಟ ಇರಲಿದೆ. ತೀರ್ಥ ಮತ್ತು ನೈವೇದ್ಯ ಪ್ರಸಾದ ಇರುವುದಿಲ್ಲ. ಭಕ್ತರು ಕೈಗೆ ಸ್ಯಾನಿಟೈಸರ್‌ ಹಾಕುವುದರಿಂದ ಮಹಾಮಂಗಳಾರತಿ ದೀಪ ಮುಟ್ಟುವಂತಿಲ್ಲ. ದೂರದಿಂದ ದೀಪಕ್ಕೆ ನಮಸ್ಕರಿಸಿ ಕಾಣಿಕೆ ಹಾಕಬಹುದು.

ದಾಸೋಹದಲ್ಲಿ ಅಂತರ ಕಾಪಾಡುವುದು ಕಷ್ಟವಾಗುವುದರಿಂದ ಊಟದ ವ್ಯವಸ್ಥೆ ಇರುವುದಿಲ್ಲ. ವಿಶೇಷ ದಾಸೋಹದ ಹಾಲ್‌ನಲ್ಲಿ ತಿಂಡಿ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಜಯವಿಭವಸ್ವಾಮಿ ಹೇಳಿದ್ದಾರೆ.

 ಬೆಟ್ಟದಲ್ಲಿ ಇರುವ ಎಲ್ಲ ಅಂಗಡಿಗಳು ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.  ಹೋಟೆಲ್‌ಗಳು ಪಾರ್ಸೆಲ್‌ ಊಟ ತಿಂಡಿ ಮಾತ್ರ ನೀಡಬಹುದು.

 ‘ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸಿಕೊಂಡು ಹಂತಹಂತವಾಗಿ ಸಡಿಲಿಕೆ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಜಯವಿಭಸ್ವಾಮಿ ಅವರು ಹೇಳಿದ್ದಾರೆ. 

ರಾತ್ರಿ ತಂಗುವುದಕ್ಕೆ ನಿರ್ಬಂಧ

ಬೆಟ್ಟದಲ್ಲಿ ಭಕ್ತರು ರಾತ್ರಿ ತಂಗುವುದಕ್ಕೆ ಸದ್ಯದ ಮಟ್ಟಿಗೆ ನಿರ್ಬಂಧ ವಿಧಿಸಿದೆ. ಬೆಳಿಗ್ಗೆ 5.30ರಿಂದ ಸಂಜೆ 7 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ಸಂಜೆ 7 ಗಂಟೆಯ ನಂತರ ಹೊರ‌ಗೆ ದರ್ಶನಕ್ಕಾಗಿ ಕಾಯುತ್ತಿದ್ದರೆ, ಅವರನ್ನು ವಾಪಸ್‌ ಕಳುಹಿಸಲಾಗುತ್ತದೆ. ರಾತ್ರಿ 8 ಗಂಟೆಯವರೆಗೆ ಬಸ್‌ ಸೌಲಭ್ಯ ಇರಲಿದೆ. 

ಲಗೇಜ್ ಆಟೋ, ಯಾವುದೇ ಗೂಡ್ಸ್ ವಾಹನದಲ್ಲಿ, ಲಾರಿಗಳಲ್ಲಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಭಕ್ತಾದಿಗಳು ಬರುವುದನ್ನು ನಿಷೇಧಿಸಲಾಗಿದೆ. ಅಂತಹವನ್ನು ತಾಳಬೆಟ್ಟದಲ್ಲಿ ತಡೆದು ವಾಪಸ್ ಕಳಿಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. 

ಮುಂದಿನ ಆದೇಶದವರೆಗೆ ಮುಡಿ ಷೆಡ್ ತೆರೆಯುವುದಿಲ್ಲ. ಅಂತರಗಂಗೆ ಪ್ರವೇಶವನ್ನೂ ನಿಷೇಧಿಸಲಾಗಿದೆ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.