ಅವಿನ್ ಪ್ರಕಾಶ್ ವಿ.
ಕೊಳ್ಳೇಗಾಲ: ಮುಂಗಾರು ಮಳೆ ವಿಳಂಬ, ಮಳೆಯ ಕೊರತೆಯಿಂದ ಕಾವೇರಿ ನದಿ ತುಂಬಿ ಹರಿಯದಿಲ್ಲ. ಹೀಗಾಗಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತಕ್ಕೆ ಇನ್ನೂ ಜೀವ ಕಳೆ ಬಂದಿಲ್ಲ. ಕಡು ಬೇಸಿಗೆಯಲ್ಲಿ ಕಾಣಿಸುವಂತೆ ಕಲ್ಲು ಕೊರಕಲು ಮಾತ್ರ ಕಾಣುತ್ತಿದೆ.
ಪ್ರತಿವರ್ಷ, ಕೇರಳದ ವಯನಾಡು, ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಹಾಗೂ ಜೂನ್‌ನಲ್ಲಿ ಮುಂಗಾರು ಮಳೆಯಿಂದಾಗಿ ಕಾವೇರಿ ನದಿ ಮೈತುಂಬಿ ಹರಿಯುತ್ತದೆ. ಕಬಿನಿ ಮತ್ತು ಕೆಎಆರ್‌ಎಸ್ ಅಣೆಕಟ್ಟೆಗಳೂ ಬಹುತೇಕ ಭರ್ತಿಯಾಗಿ ಹೆಚ್ಚುವರಿ ನೀರು ನದಿಗೆ ಬಿಟ್ಟ ಸಮಯದಲ್ಲಿ ಜಲಪಾತ ಭೋರ್ಗರೆಯುತ್ತದೆ. ವರ್ಷಂಪ್ರತಿ ಜೂನ್‌ನಿಂದಲೇ ಈ ಜಲಪಾತಕ್ಕೆ ಜೀವಕಳೆ ಬರುತ್ತದೆ. ಜುಲೈ–ಆಗಸ್ಟ್ ವೇಳೆಗೆ ಭಾರಿ ಪ್ರಮಾಣದಲ್ಲಿ ನೀರು ಧುಮ್ಮಿಕ್ಕಿ ರುದ್ರರಮಣೀಯವಾಗಿ ಕಂಗೊಳಿಸುತ್ತದೆ.
ಈ ವರ್ಷ ಜೂನ್ ಪೂರ್ಣಗೊಂಡು ಜುಲೈ ತಿಂಗಳು ಅರ್ಧ ಕಳೆಯುತ್ತಿದ್ದರೂ, ಜಲಪಾತದಲ್ಲಿ ಸಣ್ಣ ಝರಿಯಷ್ಟೇ ಕಾಣಿಸುತ್ತಿದೆ. ಖಾಲಿ ಬಂಡೆಗಳ ದರ್ಶನದಿಂದ ಭಣಗುಡುತ್ತಿದೆ.
ವಾರದಿಂದ ಕೇರಳ, ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದರೂ, ಅಣೆಕಟ್ಟೆಗೆ ನೀರಿನ ಒಳಹರಿವು ಏರಬೇಕಷ್ಟೆ. ಕಾವೇರಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿಲ್ಲ. ಹೀಗಾಗಿ, ಕಾವೇರಿ ನದಿಯಲ್ಲೂ ಹೆಚ್ಚು ನೀರಿಲ್ಲ. ಕಳೆದ ವರ್ಷ ಈ ಸಮಯದಲ್ಲಿ ಕಾವೇರಿ ತುಂಬಿ ಹರಿದಿತ್ತು. ಜಲಪಾತ ಮೈತುಂಬಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆದಿತ್ತು.
ಪ್ರವಾಸಿಗರಿಗೆ ನಿರಾಸೆ: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿರುವುದರಿಂದ ವಾರಾಂತ್ಯದಲ್ಲಿ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಬಂದವರಿಗೆ ಜಲಪಾತದ ಸೌಂದರ್ಯ ಸವಿಯಲು ಆಗುತ್ತಿಲ್ಲ. ಜಲಪಾತದಲ್ಲಿ ನೀರಿಲ್ಲದಿರುವುದರಿಂದ ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿಲ್ಲ ಎಂದು ಪ್ರವಾಸಿಗರು ತಿಳಿಸಿದರು.
‘ಜೀವ ನದಿ ಕಾವೇರಿಯಲ್ಲಿ ನೀರು ಕಡಿಮೆಯಾಗಿ ಭರಚುಕ್ಕಿಯ ಸೊಬಗು ಕಳೆಗುಂದಿದೆ. ಕೇವಲ ಭರಚುಕ್ಕಿಯಷ್ಟೇ ಅಲ್ಲ ಗಗನಚುಕ್ಕಿ ಜಲಪಾತವೂ ನೀರಿಲ್ಲದೆ ಸೊರಗಿದೆ. ಈ ಎರಡೂ ಜಲಪಾತಗಳಲ್ಲಿ ಕಾವೇರಿಯ ಜಲವೈಭವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಭಾನುವಾರ ಭರಚುಕ್ಕಿಗೆ ಭೇಟಿ ನೀಡಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿಯ ನಿವಾಸಿ ನಂಜುಂಡೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ವ್ಯಾಪಾರಿಗಳು ಕಂಗಾಲು: ಭರಚುಕ್ಕಿಯಲ್ಲಿ 30ಕ್ಕೂ ಹೆಚ್ಚು ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿದ್ದಾರೆ. ಎಲ್ಲರ ಕುಟುಂಬಗಳೂ ಇಲ್ಲಿನ ವ್ಯಾಪಾರವನ್ನೇ ನಂಬಿವೆ. ಮೂರು ತಿಂಗಳಿಂದ ಜಲಪಾತದಲ್ಲಿ ನೀರಿಲ್ಲದ ಕಾರಣ ಪ್ರವಾಸಿಗರು ಸರಿಯಾಗಿ ಬರುತ್ತಿಲ್ಲ. ಹಾಗಾಗಿ ಇವರ ಆದಾಯ ಕುಸಿದಿದೆೆ.
‘ಜಲಪಾತದಲ್ಲಿ ನೀರು ಬಂದರೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಆಗ ನಮ್ಮ ವ್ಯಾಪಾರವೂ ಜೋರಾಗಿ ನಡೆಯುತ್ತದೆ. ಈಗ ನೀರಿಲ್ಲದೆ ಕಾರಣ ವ್ಯಾಪಾರ ಆಗುತ್ತಿಲ್ಲ’ ಎಂದು ವ್ಯಾಪಾರಿ ನಂಜಮ್ಮ ಹೇಳಿದರು.
ಜಲಪಾತ ವೀಕ್ಷಣೆಗೆ ಪ್ರತಿ ವರ್ಷ ಜುಲೈನಲ್ಲಿ ಕುಟುಂಬ ಸಮೇತವಾಗಿ ಬರುತ್ತೇವೆ. ಈ ಬಾರಿ ನೀರಿಲ್ಲದ ಕಾರಣ ನಮಗೆ ನಿರಾಸೆಯಾಗಿದೆ.ಶಾಲಿನಿ ಚಿಕ್ಕಬಳ್ಳಾಪುರ
ಬತ್ತಿದ ಕಾವೇರಿ... ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತದೆ. ಮಳೆಯ ಕಾರಣಕ್ಕೆ ಈ ಬಾರಿ ಇನ್ನೂ ನೀರು ಹರಿದಿಲ್ಲ. ಮೈದುಂಬಿ ಹರಿಯುನ ಕಾವೇರಿ ನದಿಯನ್ನು ನೋಡುವುದೇ ಚೆಂದ. ಬತ್ತಿದ ನದಿಯನ್ನು ನೋಡಲು ಇಷ್ಟವಿಲ್ಲ ಎಂದು ಹೇಳುತ್ತಾರೆ ನದಿ ದಂಡೆಯ ಗ್ರಾಮಸ್ಥರು. ‘ಜುಲೈನಲ್ಲಿ ನದಿ ಕೆಂಪು ಬಣ್ಣದ ನೀರಿನಿಂದ ಹರಿಯುತ್ತದೆ. ಆದರೆ ಮುಂಗಾರು ತಡವಾಗಿರುವುದರಿಂದ ಕಾವೇರಿಯಲ್ಲಿ ನೀರು ಹರಿಯುತ್ತಿಲ್ಲ. ಈ ಬಾರಿ ಮಳೆ ಸರಿಯಾಗಿ ಬಾರದೆ ಹೋದರೆ ಬರಗಾಲ ಉಂಟಾಗುವುದು ಖಚಿತ. ಪ್ರವಾಹ ಬಂದರೂ ತೊಂದರೆ ಇಲ್ಲ. ಆದರೆ ಬರಗಾಲ ಮಾತ್ರ ಬರಬಾರದು’ ಎಂದು ದಾಸನಪುರ ಗ್ರಾಮದ ರಾಜಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.