ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು | ಒಡೆಯರಪಾಳ್ಯ ಕೆರೆ; ಶುಚಿತ್ವ ಮರೀಚಿಕೆ

ಹನೂರು: ಒತ್ತುವರಿ ತೆರವುಗೊಳಿಸಲು ಸೀಮಿತವಾದ ಕೆರೆ ಅಭಿವೃದ್ಧಿ 
Published 29 ಮೇ 2024, 5:34 IST
Last Updated 29 ಮೇ 2024, 5:34 IST
ಅಕ್ಷರ ಗಾತ್ರ

ಹನೂರು: ಕಳೆದ ವರ್ಷವಷ್ಟೇ ಒತ್ತುವರಿಯಿಂದ ಮುಕ್ತಗೊಂಡು ಅಭಿವೃದ್ಧಿಯ ಕನಸು ಕಾಣುತ್ತಿದ್ದ ಒಡೆಯರಪಾಳ್ಯದ ಕೆರೆ ಈಗ ಅಕ್ಷರಶಃ ಕಲುಷಿತ ನೀರಿನ ಗುಂಡಿಯಾಗಿ ಮಾರ್ಪಟ್ಟಿದೆ!

ತಾಲ್ಲೂಕಿನ ಒಡೆಯರಪಾಳ್ಯ ಗ್ರಾಮದ ಹೃದಯಭಾಗದಲ್ಲಿರುವ ಈ ಕೆರೆಯು ಒತ್ತುವರಿಯಿಂದ ನಲುಗಿತ್ತು. 30 ವರ್ಷಗಳ ಹಿಂದೆ ಈ ಕೆರೆಯ ವಿಸ್ತೀರ್ಣ 8.90 ಎಕರೆಯಷ್ಟಿತ್ತು. ಒತ್ತುವರಿಯಿಂದಾಗಿ ಕೆರೆಯ ವ್ಯಾಪ್ತಿ ಎರಡು ಎಕರೆಗೆ ಕುಗ್ಗಿತ್ತು. 

ಎರಡು ದಶಕಗಳ ಹಿಂದೆ ಕೆರೆ ಸುತ್ತ ಮುತ್ತ ವಿಶಾಲ ಜಾಗ ಇತ್ತು. ಮಳೆ ಬಂದಾಗ ಕೆರೆ ತುಂಬಿ ತುಳುಕುತ್ತಿತ್ತು. ಜನರು ಇದರ ನೀರನ್ನು ಮನೆ ಬಳಕೆಗೆ ಬಳಸುತ್ತಿದ್ದರು. ಬಟ್ಟೆ ಒಗೆಯಲು , ದನ ಕರುಗಳಿಗೆ ನೀರುಣಿಸಲು ಸ್ಥಳೀಯರು ಇದೇ ಕೆರೆಯನ್ನು ಆಶ್ರಯಿಸಿದ್ದರು. ಕಾಲ ಕ್ರಮೇಣ ಕೆರೆ ಸುತ್ತು ಮುತ್ತಲ ಏರಿ (ದಡ) ಮಾಯವಾಗಿ ಮನೆ, ಅಂಗಡಿಗಳು, ಕಟ್ಟಡಗಳು ನಿರ್ಮಾಣವಾಗಿದ್ದವು.

ಗ್ರಾಮದ ಮೂಲಕ ಹಾದು ಹೋಗುವ ರಸ್ತೆ ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿರುವುದರಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ  ವಾಹನಗಳು ಸಂಚರಿಸುತ್ತವೆ. ಒಡೆಯರಪಾಳ್ಯದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲುತ್ತಿದುದ್ದರಿಂದ ಕೆರೆಯ ಪಕ್ಕ ಇರುವ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು ಮತ್ತು ಕೆರೆಯ ಒತ್ತುವರಿಯನ್ನು ತೆರವುಗೊಳಿಸಬೇಕು ಎಂಬ  ಕೂಗು ಕೇಳಿ ಬಂದಿತ್ತು. 

ತಾಲ್ಲೂಕು ಆಡಳಿತವು ಕಳೆದ ವರ್ಷ ಪೊಲೀಸರ ಸಹಕಾರ ಪಡೆದು ಕೆರೆ ಒತ್ತುವರಿಯನ್ನು ತೆರವುಗೊಳಿಸಿತ್ತು. 

ಸ್ವಚ್ಛಗೊಳ್ಳದ ಕೆರೆ: ಒತ್ತುವರಿ ತೆರವುಗೊಳಿಸಿರುವ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸಿ, ಉದ್ಯಾನ ಹಾಗೂ ಕೆರೆಯನ್ನು ಸ್ವಚ್ಛಗೊಳಿಸುವಂತೆ ಗ್ರಾಮಪಂಚಾಯಿತಿಗೆ ಸೂಚಿಸಲಾಗಿತ್ತು. ಆದರೆ. ಇದುವರೆಗೆ ಕೆರೆಯ ಸ್ವಚ್ಛತಾ ಕಾರ್ಯ ನಡೆದಿಲ್ಲ. ಈಚೆಗೆ ಬಿದ್ದ ಮಳೆಗೆ ಸುತ್ತಲೂ ಬಿದ್ದಿದ್ದ ತ್ಯಾಜ್ಯವೆಲ್ಲ ಕೆರೆಗೆ ಬಂದು ಸೇರಿದ್ದು ಕೆರೆ ನೀರು ದುರ್ವಾಸನೆ ಬೀರಲು ಆರಂಭವಾಗಿದೆ.

‘ಕೆರೆ ಸಂಪೂರ್ಣವಾಗಿ ಕಸ, ಕಡ್ಡಿ, ಪ್ಲಾಸ್ಟಿಕ್‌ನಿಂದ ತುಂಬಿದೆ. ಕೆರೆ ಅಭಿವೃದ್ಧಿ ಮಾಡುವ ಉದ್ದೇಶದೊಂದಿಗೆ ಒತ್ತುವರಿ ತೆರವುಗೊಳಿಸಲಾಗಿದೆ. ಆದರೆ ಸ್ಥಳೀಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕೆರೆಯನ್ನು ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು’ ಎಂದು ಗ್ರಾಮ‌ದ ಶಿವಾನಂದ್‌ ಒತ್ತಾಯಿಸಿದರು. 

‘ವಾರದೊಳಗೆ ಸ್ವಚ್ಛತಾ ಕಾರ್ಯ’

ಈ ಬಗ್ಗೆ ’ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ಅವರು ‘ಸುತ್ತಮುತ್ತಲಿನ ಅಂಗಡಿಗಳಿಂದ ಕೆರೆಗೆ ತ್ಯಾಜ್ಯ ಸೇರುತ್ತಿದೆ. ಕೆರೆಯ ಸುತ್ತ ತ್ಯಾಜ್ಯಗಳನ್ನು ಹಾಕದಂತೆ ಈಗಾಗಲೇ ಸಾಕಷ್ಟು ಬಾರಿ ತಿಳಿಸಿದರೂ ಕಸವನ್ನು ಅಲ್ಲೇ ಹಾಕುತ್ತಿದ್ದಾರೆ. ಕೆರೆಯನ್ನು ಶುಚಿಗೊಳಿಸಲು ಈಗಾಗಲೇ ದಾಸನಪುರದ ಕೂಲಿಯಾಳುಗಳನ್ನು ನಿಯೋಜಿಸಲಾಗಿದೆ. ವಾರದೊಳಗೆ ಸ್ವಚ್ಛಗೊಳಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT