ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ, ಸಂಸ್ಕೃತಿ ಪ್ರೀತಿಸಿ: ರಾಜು ವರ್ಗೀಸ್‌

ಚಾಮರಾಜನಗರ ಜಿಲ್ಲಾ ಮಲಯಾಳಿ ಸಮಾಜದಿಂದ ಓಣಂ ಸಂಭ್ರಮ
Last Updated 6 ನವೆಂಬರ್ 2022, 14:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ನೆಲೆಸಿರುವ ಕೇರಳ ಮೂಲದ ಮಲಯಾಳಿಗಳೆಲ್ಲ ಅಲ್ಲಿ ನೆರೆದಿದ್ದರು. ಓಣಂ ಹಬ್ಬದ ವಿಶೇಷ ಹೂವಿನ ರಂಗೋಲಿ (ಪೂಕಳಂ) ಬಿಡಿಸಿದರು. ಮಹಿಳೆಯರು ಓಣಂ ನೃತ್ಯ ಮಾಡಿದರು. ಸಿಂಗಾರಿ ಮೇಳದಲ್ಲಿ ಕೇರಳದ ಚೆಂಡೆಯ ಲಯ ಬದ್ಧ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ಕೇರಳ ಶೈಲಿಯ ಹಬ್ಬದ ಊಟ ಸವಿದರು...

–ಜಿಲ್ಲಾ ಮಲಯಾಳಿ ಸಮಾಜವು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಓಣಾಘೋಶಂ’ನಲ್ಲಿ ಕಂಡು ಬಂದ ದೃಶ್ಯಗಳಿವು.

ಕೇರಳ ಪ್ರವಾಹ, ಕೋವಿಡ್‌ ಕಾರಣದಿಂದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ.

ಕನ್ನಡ ಪ್ರೀತಿಸಿ: ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಾಜು ವರ್ಗೀಸ್‌, ‘1975ರಲ್ಲಿ ನಾನು ಚಾಮರಾಜನಗರಕ್ಕೆ ಬರುವಾಗ ಒಂದೆರಡು ಮಲಯಾಳಿ ಕುಟುಂಬಗಳಿದ್ದವು. ಈಗ ಬಹಳಷ್ಟು ಕುಟುಂಬಗಳಿವೆ. ಮಲಯಾಳಿ ಸಮಾಜದವರು ಒಟ್ಟಾಗಿರಬೇಕು. ಕಷ್ಟ, ತೊಂದರೆಗೆ ಸಿಲುಕಿದಾಗ ಒಬ್ಬರಿಗೊಬ್ಬರು ನೆರವಾಗಬೇಕು ಎಂಬ ಉದ್ದೇಶದಿಂದ 2008ರಲ್ಲಿ ಈ ಸಂಘಟನೆ ಆರಂಭಿಸಲಾಯಿತು. 2018ರಲ್ಲಿ ಸರ್ಕಾರದಲ್ಲಿ ನೋಂದಣಿ ಮಾಡಲಾಯಿತು’ ಎಂದರು.

ಕೇರಳದಿಂದ ಬಂದು ಇಲ್ಲಿ ನೆಲೆಸಿರುವ ಎಲ್ಲರನ್ನೂ ಸಂಘಟಿಸುವ ಕೆಲಸ ಆಗಬೇಕು. ನಾವು ಮೂಲತಃ ಕೇರಳದವರಾದರೂ ಈಗ ಕರ್ನಾಟಕದಲ್ಲಿದ್ದೇವೆ. ಹಾಗಾಗಿ, ನಾವು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿಯಬೇಕು, ಬೆರೆಯಬೇಕು. ಅವುಗಳನ್ನು ಪ್ರೀತಿಸಬೇಕು’ ಎಂದರು.

ಸಮಾಜದ ಆಶ್ರಯದಲ್ಲಿ ಪ್ರತಿ ವರ್ಷ ಓಣಂ ಆಚರಿಸಿಕೊಂಡು ಬರುತ್ತಿದ್ದೇವೆ. ಕೇರಳದ ಪ್ರವಾಹ ಹಾಗೂ ಕೋವಿಡ್‌ ಕಾರಣದಿಂದ ನಾಲ್ಕು ವರ್ಷಗಳಿಂದ ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ಮತ್ತೆ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಸಮಾಜದ ವತಿಯಿಂದ ವಿವಿಧ ಸೇವಾ ಕಾರ್ಯಗಳನ್ನೂ ನಡೆಸುತ್ತಿದ್ದೇವೆ’ ಎಂದರು.

ಸನ್ಮಾನ: ಕಾರ್ಯಕ್ರಮದಲ್ಲಿ ನಗರದಲ್ಲಿ ಮೂಡಲಧ್ವನಿ ವೃದ್ಧಾಶ್ರಮ ನಡೆಸುತ್ತಿರುವ ಶಂಕರ್‌ ಅವರ ಸಮಾಜಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಕರ್‌, ‘ಅಂಗವಿಕಲರು, ವೃದ್ಧರು ಹಾಗೂ ನಿರ್ಗತಿಕರಿಗೆ ಆಶ್ರಯ ನೀಡುವ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಒಬ್ಬನಿಂದ ಆಗುವ ಕೆಲಸ ಅಲ್ಲ. ಹಲವು ಸಂಘ ಸಂಸ್ಥೆಗಳು ಸಹಕಾರದಿಂದ ನಡೆಯುತ್ತಿದೆ.

ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಸಿರುವ ಕೇರಳದವರಾದ ಗೋಪಕುಮಾರ್‌, ಸ್ವಾಮಿನಾಥನ್‌, ಸ್ವಾಮಿನಾಥ ಅಯ್ಯರ್‌, ಸುಬ್ರಹ್ಮಣ್ಯ ವೇಣುಗೋಪಾಲ್‌, ರಾಜಮ್ಮ ಗಂಗಾಧರನ್‌, ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಕಾರ್ಯದರ್ಶಿ ಸೆಬಾಸ್ಟಿಯನ್ ಜೋಕಿಂ, ಸಿ.ಆರ್.ಹರೀಶ್, ಕೆ.ಕೆ.ಮೊಹಮ್ಮದ್ ಆಲಿ, ಸುಧಾ ರವಿ, ವಿಜಯಕುಮಾರ್‌, ಗಫೂರ್‌, ರಾಬರ್ಟ್‌ ಇತರರು ಇದ್ದರು.

ಗಮನ ಸೆಳೆದ ನೃತ್ಯ, ಸಿಂಗಾರಿ ಮೇಳ: ಸಮಾರಂಭದ ಬಳಿಕ ಕೇರಳ ಶೈಲಿಯ ಬಿಳಿ ಸೀರೆ ಉಟ್ಟಿದ್ದ ಮಹಿಳೆಯರು ವೇದಿಕೆ ಮಧ್ಯದಲ್ಲಿ ದೀಪ ಇರಿಸಿ ಅದರ ಸುತ್ತಲೂ ನಡೆಸಿದ ಓಣಂ ನೃತ್ಯ ಗಮನ ಸೆಳೆಯಿತು.

ಕೇರಳದಿಂದ ಬಂದಿದ್ದ ಸಿಂಗಾರಿ ಮೇಳ ತಂಡದ ಪ್ರದರ್ಶನ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಸಿತು. ಚೆಂಡೆಯ ಸದ್ದಿಗೆ ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರೂ ಕುಣಿದು ಕುಪ್ಪಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT