ಶನಿವಾರ, ಜನವರಿ 28, 2023
15 °C

ಪ್ರಜಾವಾಣಿ ವರದಿ ಪರಿಣಾಮ: ಕಾವೇರಿ ವನ್ಯಧಾಮದಲ್ಲಿ ಅಕ್ರಮ ಮರಳು ಸಾಗಣೆಗೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನೂರು: ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಂಡಳ್ಳಿ ಗ್ರಾಮದ ಅಣ್ಣಾದೊರೈ ಎಂಬುವವರನ್ನು ಅರಣ್ಯಾಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಕೊತ್ತನೂರು ವನ್ಯಜೀವಿ ವಲಯದ ಸಿಪಿಟಿ 30ರಲ್ಲಿ ಅಕ್ರಮವಾಗಿ ಮರಳು ಸಾಗಣೆಯಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಸೆ.6ರ ಸಂಚಿಕೆಯಲ್ಲಿ ‘ಮರಳು ದಂಧೆ ಅವ್ಯಾಹತ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. 

ವರದಿಗೆ ಸ್ಪಂದಿಸಿದ್ದ ಕಾವೇರಿ ವನ್ಯಧಾಮದ ಹಿರಿಯ ಅರಣ್ಯಾಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದರು. ಮೂರು ದಿನಗಳ ಬಳಿಕ, ಬುಧವಾರ ಮಧ್ಯರಾತ್ರಿ ವೇಳೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಳು ಸಾಗಣೆ ಮಾಡುತ್ತಿದ್ದಾಗ ದಾಳಿ ನಡೆಸಿ ಟ್ರ್ಯಾಕ್ಟರ್ ಸಮೇತ ವ್ಯಕ್ತಿಯನ್ನು ಬಂಧಿಸಿದ್ದಾರೆ.

‘ಪ್ರಜಾವಾಣಿ’ಯ ವರದಿಯನ್ನು ನೋಡಿದ್ದ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಅಕ್ರಮವಾಗಿ ಮರಳು ಸಾಗಣೆಯಾಗುತ್ತಿರುವ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು. ಅದರಂತೆ ಬುಧವಾರ ರಾತ್ರಿ ಬಂಡಳ್ಳಿ ಗ್ರಾಮದ ಅಣ್ಣಾದೊರೈ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮರಳು ಸಂಗ್ರಹಣೆ ಮಾಡುವ ವೇಳೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ ಎಂದು ಪ್ರಭಾರ ವಲಯ ಅರಣ್ಯಾಧಿಕಾರಿ ಹೇಳಿದ್ದಾರೆ.  

‘ಬಂಧಿತ ವ್ಯಕ್ತಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಅರಣ್ಯದ ಸುತ್ತಲೂ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಯನ್ನು ನಾಶಪಡಿಸಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಪ್ರಕರಣ  ದಾಖಲಿಸಿಕೊಂಡು ಆತನನ್ನು ನ್ಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.  

ಕಾರ್ಯಾಚರಣೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್‌.ರಮೇಶ್‌ ಅವರು, ‘ಈಗ ಬಂಧಿತನಾಗಿರುವ ಆರೋಪಿಯಲ್ಲದೇ ಇನ್ನು ಕೆಲವು ಸ್ಥಳೀಯರು ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು’ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು