ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಹಿಳಾ ಶಕ್ತಿ!

Published 21 ಸೆಪ್ಟೆಂಬರ್ 2023, 19:51 IST
Last Updated 21 ಸೆಪ್ಟೆಂಬರ್ 2023, 19:51 IST
ಅಕ್ಷರ ಗಾತ್ರ

‘ರೀ... ನಂಗೆ ಅರ್ಜೆಂಟ್ ಒಂದು ಡಜನ್ ಖಾದಿ ಸೀರೆ ಬೇಕು’ ಹೆಂಡ್ತಿ ಪಮ್ಮಿ ಬೇಡಿಕೆ ಇಟ್ಟಾಗ ಕಕ್ಕಾಬಿಕ್ಕಿಯಾದ ತೆಪರೇಸಿ, ‘ಒಂದ್ ಡಜನ್ನಾ? ಯಾಕೆ?’ ಎಂದ.

‘ಅವನ್ನೆಲ್ಲ ಈಗ್ಲೇ ಒಗೆದು, ಗಂಜಿ ಹಾಕಿ, ಇಸ್ತ್ರಿ ಮಾಡಿ ಇಟ್ಕಾಬೇಕು’.

‘ಅದೇ ಯಾಕೆ ಅಂದೆ’.

‘ಎಂ.ಪಿ. ಎಲೆಕ್ಷನ್‌ಗೆ ರೆಡಿಯಾಗಬೇಕು ಕಣ್ರೀ, ಮಹಿಳಾ ಮೀಸಲಾತಿ ಬರ್ತಿದೆಯಲ್ಲ, ನಾನೂ ಟಿಕೆಟ್ ಕೇಳ್ತಿದೀನಿ’.

‘ಹೌದಾ? ನಿಂಗ್ಯಾರು ಟಿಕೆಟ್ ಕೊಡ್ತಾರೆ? ಯಾರಾದ್ರು ಸ್ವಾಮಿ ಗೀಮಿ ಬುಕ್‌ ಮಾಡ್ಕಂಡಿದೀಯ ಹೆಂಗೆ?’ ತೆಪರೇಸಿ ನಕ್ಕ.

‘ಹೆಂಗೋ ತಗೋತೀನಿ, ನನ್ ಹತ್ರ ಮಹಿಳಾ ಫೈರ್ ಬ್ರ್ಯಾಂಡ್‌ಗಳಿದಾವೆ, ಟಿಕೆಟ್ ತರ್ತೀನಿ, ಡೆಲ್ಲಿಗೆ ಹೋಗ್ತೀನಿ’.

‘ನೀ ಡೆಲ್ಲಿಗೆ ಹೋದ್ರೆ ಇಲ್ಲಿ ನನ್ ಊಟದ ಗತಿ?’

‘ನಿಮ್ಗೆ ಮಂಜಮ್ಮನ ಹೋಟ್ಲು ಐತಲ್ಲ’.

‘ಹೋಟ್ಲು ಊಟ ದಿನಾ ತಿನ್ನೋಕಾಗುತ್ತಾ?’

‘ಇಲ್ಲಾಂದ್ರೆ ಮನೇಲಿ ಅಡುಗೆ ಮಾಡ್ಕಳಿ, ಇಷ್ಟು ದಿನ ನಾವು ಮಾಡಿಲ್ವಾ?’

‘ಇದೊಳ್ಳೆ ಕತಿಯಾತಪ, ಈ ಮಹಿಳಾ ಮೀಸಲಾತಿ ಯಾಕಾದ್ರು ಬರುತ್ತೋ’ ತೆಪರೇಸಿ ಗೊಣಗಿದ.

ಅಷ್ಟರಲ್ಲಿ ಅಲ್ಲಿಗೆ ಬಂದ ಗುಡ್ಡೆ ‘ಏನೋ ದೋಸ್ತಾ... ಏನೋ ಗೊಣಗ್ತಿದ್ದೆ?’ ಅಂದ.

‘ನೋಡು ಗುಡ್ಡೆ, ಇವರಿಗೆ ಮಹಿಳಾ ಮೀಸಲಾತಿ ಕುತ್ತಿಗೆಗೆ ಬಂದೇತಿ. ನಾವು ಎಂ.ಪಿ, ಎಮ್ಮೆಲ್ಲೆ ಆಗೋದು ಬ್ಯಾಡ್ವಾ? ಬರೀ ಇವರ ಚಾಕರಿ ಮಾಡ್ಕಂಡು ಬಿದ್ದಿರ್ಬೇಕಾ?’ ಪಮ್ಮಿ ಆಕ್ಷೇಪಿಸಿದಳು.

‘ಲೇ ತೆಪರ, ಈಗ್ಲೇ ಯಾಕೆ ತೆಲಿ ಕೆಡಿಸ್ಕಂತಿಯಲೆ. ಮೀಸಲಾತಿ ಬಂದು, ಟಿಕೆಟ್ ಸಿಕ್ಕು ಪಮ್ಮಕ್ಕ ಆಗ್ಲೇ ಎಂ.ಪಿ. ಆಗಿಬಿಟ್ಲಾ? ಅಕಸ್ಮಾತ್ ಎಂ.ಪಿ. ಆದ್ಲು ಅಂತಿಟ್ಕಾ, ನೀ ಪಮ್ಮಕ್ಕನ ಪಿ.ಎ. ಆಗಿಬಿಡು. ನಿನ್ನ ಊಟ, ಮನಿ ಸಮಸ್ಯಿ ಎಲ್ಲ ಒಟ್ಟಿಗೇ ಬಗೆಹರೀತಾವು... ಹೆಂಗೆ?’ ಎಂದ ನಗುತ್ತ. ಗುಡ್ಡೆ ಜೊತೆಗೆ ಪಮ್ಮಿಗೂ ನಗು ತಡೆಯಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT