ಭಾನುವಾರ, ಜೂನ್ 26, 2022
21 °C
ಆಮ್ಲಜನಕ ದುರಂತ: ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ, ತಲಾ ₹20 ಲಕ್ಷ ಪರಿಹಾರಕ್ಕೆ ಆಗ್ರಹ

ಚಾಮರಾಜನಗರ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಯಿತು.  

ಪಕ್ಷದ ಜಿಲ್ಲಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು ಹಾಗೂ ಪದಾಧಿಕಾರಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಬರೆದಿದ್ದ ಫಲಕಳನ್ನು ಪ್ರದರ್ಶಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ದುರಂತದಲ್ಲಿ 35ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ. ಹೈಕೋರ್ಟ್‌ ನ್ಯಾಯಾಂಗ ತನಿಖೆ ನಡೆಸಿ, ಸರ್ಕಾರಕ್ಕೆ ಸೂಚನೆ ನೀಡಿದ ಬಳಿಕ 24 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿ ಕೈತೊಳೆದುಕೊಂಡಿದೆ. ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ. ಆಮ್ಲಜನಕ ಕೊರತೆಯ ಬಗ್ಗೆ ಗಮನಕ್ಕೆ ತಂದಿದ್ದರೂ ಪೂರೈಕೆಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.    

‘ಆರೋಗ್ಯ ಸಚಿವರ ಉದಾಸೀನ ಮನೋಭಾವದಿಂದ ಮೃತಪಟ್ಟವರ ಕುಟುಂಬಗಳಿಗೆ ಅನ್ಯಾಯವಾಗಿದೆ. ಈ ದುರಂತದಲ್ಲಿ ಮೃತಪಟ್ಟವರಿಗೆ ತಲಾ ಕನಿಷ್ಠ ₹20 ಲಕ್ಷವಾದರೂ ಪರಿಹಾರ ರೂಪದಲ್ಲಿ ಕೊಡಬೇಕಿತ್ತು. ಆದರೆ, ಅದನ್ನು ಸಹ ಮಾಡದೆ ನಿರ್ಲಕ್ಷ್ಯ ಮಾಡಿದೆ’ ಎಂದು ತಿಳಿಸಿದರು.

‘ಘಟನೆ ನಡೆದು ಒಂದು ತಿಂಗಳು ಆಗಿದೆ. ಆದರೆ, ಸರ್ಕಾರ ಇದುವರೆಗೆ ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಿರುವ ಹೈಕೋರ್ಟ್‌ ನೇಮಿಸಿರುವ ಸಮಿತಿಯು ದುರ್ಘಟನೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಿದ್ದರೂ ಯಾವೊಬ್ಬ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೋವಿಡ್‌ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲಕವಾಗಿವೆ. ಜನರಿಗೆ ಸಕಾಲದಲ್ಲಿ ಕೋವಿಡ್‌ ಲಸಿಕೆ ತಲುಪಿಸುವಲ್ಲೂ ವಿಫಲವಾಗಿವೆ’ ಎಂದು ಪುಟ್ಟರಂಗಶೆಟ್ಟಿ ಅವರು ಹೇಳಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ‘ದುರಂತಕ್ಕೆ ಒಂದು ತಿಂಗಳಾದರೂ ಕುಟುಂಬಸ್ಥರಿಗೆ ಪರಿಹಾರ ನೀಡದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ವಂಚನೆ ಮಾಡುತ್ತಿದೆ. ದುರಂತ ನಡೆದ ನಂತರ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಭೇಟಿ ನೀಡಿ ಆಮ್ಲಜನಕ ಕೊರತೆಯಿಂದ ಕೇವಲ ಮೂರು ಜನ ಮೃತಪಟ್ಟಿದ್ದಾರೆ ಎಂದು ಹೇಳಿ ಜಿಲ್ಲೆಯ ಜನರಿಗೆ ಮೋಸ ಮಾಡಿದ್ದಾರೆ’ ಎಂದು ದೂರಿದರು. 

‘ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡಿದ್ದರೆ 36 ಮುಗ್ಧ ಜೀವಗಳು ಉಳಿಯುತ್ತಿದ್ದವು. ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈಗ 36 ಕುಟುಂಬಗಳು ಬೀದಿಪಾಲಾಗಿವೆ. ಪ್ರತಿ ಕುಟುಂಬಕ್ಕೂ ಸರ್ಕಾರ ತಲಾ ₹20 ಲಕ್ಷ ಪರಿಹಾರ ಕೊಟ್ಟು, ಅವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರಬೇಕು’ ಎಂದು ಆಗ್ರಹಿಸಿದರು. 

 ಉಚಿತ ಲಸಿಕೆ ಕೊಡಿ: ರಾಜ್ಯದಲ್ಲಿರುವ 18ರಿಂದ 45 ವರ್ಷದ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ, ಇನ್ನೂ ನೀಡಿಲ್ಲ. ಎಲ್ಲರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದರು. 

ಲಾಕ್‌ಡೌನ್‌ ನಿಯಮಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟವಾಗಿದೆ. ಅವರ ಬೆಳೆಗಳಿಗೆ ಸರ್ಕಾರ ಸರಿಯಾದ ಬೆಲೆ ನೀಡಬೇಕು ಎಂದು ಮರಿಸ್ವಾಮಿ ಆಗ್ರಹಿಸಿದರು. 

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ವಕ್ತಾರ ಕೆರೆಹಳ್ಳಿ ನವೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್, ಮುಖಂಡರಾದ ಕೆ.ಪಿ.ಸದಾಶಿವಮೂರ್ತಿ, ಆರ್.ಮಹದೇವ್, ಸಯ್ಯದ್ ರಫಿ ಇತರರು ಇದ್ದರು.

‘ಸರ್ಕಾರವೇ ನೇರ ಹೊಣೆ’

‘ಮೇ 2ರಂದು ಡೀನ್‌ ಅವರಿಗೆ ಕರೆ ಮಾಡಿ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ವಿಚಾರಿಸಿದಾಗ ಅವರು ‘ನೀವು ಜಿಲ್ಲಾಧಿಕಾರಿ ಅವರ ಜೊತೆ ಮಾತನಾಡಿ’ ಎಂದರು. ನಂತರ ಜಿಲ್ಲಾಧಿಕಾರಿಗೆ ಕರೆ ಮಾಡಿ, ಆಮ್ಲಜನಕ ಕೊರತೆಯಾಗುತ್ತಿದೆಯಂತಲ್ಲ, ಏನು ವ್ಯವಸ್ಥೆ ಮಾಡಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ‘ಮೈಸೂರು ಜಿಲ್ಲಾಧಿಕಾರಿ ಅವರು ಸರಿಯಾಗಿ ಆಮ್ಲಜನಕ ಕೊಡುತ್ತಿಲ್ಲ. ತೀವ್ರ ತೊಂದರೆಯಾಗುತ್ತಿದೆ. ನೀವು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರೊಂದಿಗೆ ಮಾತನಾಡಿ’ ಎಂದರು. ತಕ್ಷಣ ಶೆಟ್ಟರ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಪರ್ಯಾಯ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಆದರೆ, ಅವರು ಇದನ್ನು ಮರೆತಿರಬೇಕು. ನಂತರ ಜಿಲ್ಲಾಧಿಕಾರಿ ನನಗೆ ಕರೆ ಮಾಡಿ ಮುಖ್ಯ ಕಾರ್ಯದರ್ಶಿ ಅವರಿಗೆ ಕರೆ ಮಾಡಲು ಹೇಳಿದರು. ತಕ್ಷಣ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಮಾತನಾಡಿದೆ. ಅವರು ಕೂಡಲೇ ಆಮ್ಲಜನಕ ವ್ಯವಸ್ಥೆ ಮಾಡುವುದಾ‌ಗಿ ಹೇಳಿದರು. ಆದರೆ, ಇಲ್ಲಿ ವ್ಯವಸ್ಥೆ ಆಗಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ 35ಕ್ಕೂ ಹೆಚ್ಚು ಜನರು ಮೃತಪಟ್ಟರು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ದೂರಿದರು. 

4ರಂದು ಶವ ನೀಡಿದರು: ‘ಪ್ರಕರಣದಲ್ಲಿ ಸತ್ತವರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ತನಿಖಾ ಸಮಿತಿಯು 36 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ನನಗೆ ತಿಳಿದಂತೆ ಒಂದು ಪ್ರಕರಣದಲ್ಲಿ ಮೇ 2ರಂದು ರಾತ್ರಿ 12 ಗಂಟೆಗೆ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಯಾರಿಗೂ ಗೊತ್ತಾಗದಂತೆ ಇಟ್ಟು, 4ನೇ ತಾರೀಖಿನಿಂದ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಇದರ ಹಿಂದೆ ಆರೋಗ್ಯ ಸಚಿವರ ಕೈವಾಡ ಇದೆ ಎಂಬ ಅನುಮಾನ ನನಗೆ ಇದೆ’ ಎಂದು ಹೇಳಿದರು. 

‘ಜಿಲ್ಲೆಯಲ್ಲಿ ಕೋವಿಡ್‌ನಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 10 ಕೋವಿಡ್‌ ಪರೀಕ್ಷೆಗಳನ್ನು ನಡೆಸಲು ಮಾತ್ರ ಸೂಚನೆ ನೀಡಲಾಗಿದೆ’ ಎಂದು ಅವರು ಆರೋಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು