ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ರಾಜಕೀಯ ಅಧಿಕಾರ: ಮಹಿಳೆಯರಿಗಿಲ್ಲ ಆದ್ಯತೆ

ಜಿಲ್ಲೆಯಲ್ಲಿ ಈವರೆಗೆ ನಾಲ್ವರು ಮಹಿಳಾ ಶಾಸಕಿಯರು, ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರೇ ಮಹಿಳೆ
Last Updated 8 ಮಾರ್ಚ್ 2023, 6:39 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುತ್ತಿಲ್ಲ. ಇದುವರೆಗಿನ ಅಂಕಿ ಅಂಶಗಳೇ ಇದನ್ನೇ ಹೇಳುತ್ತಿವೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಇದೇ ಚಿತ್ರಣ ಕಂಡುಬರುತ್ತಿದೆ.ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಪೈಕಿ ಒಬ್ಬ ಮಹಿಳೆ ಮಾತ್ರ ಮುಂಚೂಣಿಯಲ್ಲಿ ಕಂಡು ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ನಾಲ್ವರು ಮಾತ್ರ ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಸಂಸದರಾಗಿ ಯಾರೂ ಸ್ಪರ್ಧಿಸಿಲ್ಲ. ಆಯ್ಕೆಯೂ ಆಗಿಲ್ಲ.

1957ರಲ್ಲಿ ಕೊಳ್ಳೇಗಾಲದ ದ್ವಿಸದಸ್ಯ ಕ್ಷೇತ್ರದಲ್ಲಿ ಕೆಂಪಮ್ಮ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಿಂದ ಕೆ.ಎಸ್‌.ನಾಗರತ್ನಮ್ಮ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಸಚಿವರಾಗಿಯೂ, ವಿಧಾನಸಭಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಆರು ವರ್ಷಗಳ ಹಿಂದೆ ಎಂ.ಸಿ.ಮೋಹನಕುಮಾರಿ ಅವರು ಶಾಸಕಿಯಾಗಿ ಆಯ್ಕೆಯಾಗಿ, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಈ ಪೈಕಿ ಪರಿಮಳಾ ನಾಗಪ್ಪ ಮತ್ತು ಎಂ.ಸಿ.ಮೋಹನಕುಮಾರಿ ಅವರು ಅನುಕಂಪದ ಆಧಾರದಲ್ಲಿ ಟಿಕೆಟ್‌ ಪಡೆದು ಗೆದ್ದವರು. ಎಚ್‌.ನಾಗಪ್ಪ ನಿಧನರಾದ ಬಳಿಕ ಪರಿಮಳಾ ನಾಗಪ್ಪ ಸ್ಪರ್ಧಿಸಿದ್ದರೆ, ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಹಠಾತ್‌ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಅವರನ್ನು ಕಣಕ್ಕಿಳಿಸಿತ್ತು. 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಸೋಲು ಅನುಭವಿಸಿದ್ದರು.

ಈ ನಾಲ್ಕು ಉದಾಹರಣೆಗಳನ್ನು ಬಿಟ್ಟರೆ, ಜಿಲ್ಲೆಯಿಂದ ನಾಲ್ಕು ಕ್ಷೇತ್ರಗಳಿಂದ ವಿಧಾನಸಭೆಗೆ ಆಯ್ಕೆಯಾದ ಮಹಿಳೆಯರಿಲ್ಲ. ಟಿಕೆಟ್‌ ಹಂಚಿಕೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಮಣೆಹಾಕಿರುವ ನಿದರ್ಶನಗಳೂ ಕಡಿಮೆಯೇ.

ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ಬಿಟ್ಟರೆ ಉಳಿದ ಕಡೆಗಳಲ್ಲಿ ಮಹಿಳಾ ಟಿಕೆಟ್‌ ಆಕಾಂಕ್ಷಿಗಳೇ ಇಲ್ಲ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ನಾಗಶ್ರೀ ಪ್ರತಾಪ್‌ ಅವರೊಬ್ಬರೇ ಮಹಿಳಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇನ್ನಿಬ್ಬರು ಮಹಿಳೆಯರು (ಜ್ಯೋತಿ ಮತ್ತು ನಾಗು ರಮೇಶ್‌) ಬಿಜೆಪಿಯಿಂದಲೇ ಟಿಕೆಟ್‌ ಬಯಸಿದ್ದರಾದರೂ, ಅವರು ಮುಂಚೂಣಿಯಲ್ಲಿಲ್ಲ. ಉಳಿದಂತೆ ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಯಾವ ಪಕ್ಷಗಳಿಂದಲೂ ಮಹಿಳಾ ಟಿಕೆಟ್‌ ಆಕಾಂಕ್ಷಿಗಳಿಲ್ಲ.

ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮೀಸಲಾತಿ: ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ 50ರಷ್ಟು ಮೀಸಲಾತಿ ಇರುವುದರಿಂದ ಮಹಿಳೆಯರು ಆಯ್ಕೆಯಾಗುತ್ತಿದ್ದಾರೆ. ಆದರೆ, ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ.

‘ಹೆಣ್ಣುಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕಿದೆ’

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ನಾಗಶ್ರೀ ಪ್ರತಾಪ್‌, ‘ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ವಿಚಾರ ಬಿಟ್ಟು ಬಿಡೋಣ. ಸಾಮಾನ್ಯ ಸಂದರ್ಭದಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವಂತಾಗಬೇಕು. ಇದಕ್ಕೆ ಮನೆಗಳಲ್ಲಿ ಹೆಣ್ಣುಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಬಹುತೇಕ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಪೋಷಕರು ಒಂದು ಚೌಕಟ್ಟು ಹಾಕಿರುತ್ತಾರೆ. ಅದನ್ನು ಮೀರುವುದಕ್ಕೆ ಅವಕಾಶ ಕೊಡುವುದಿಲ್ಲ. ಅತಿ ಹೆಚ್ಚು ಎಂದರೆ, ಉದ್ಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬನೆಯಾಗುವುದಕ್ಕೆ ಅವಕಾಶ ನೀಡುತ್ತಾರೆ’ ಎಂದರು.

‘ಮಹಿಳೆಯರು ಕೂಡ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಯಾರ ನೆರವೂ ಇಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಪೋಷಕರು ಮನೆಗಳಲ್ಲಿ ಸೃಷ್ಟಿಸಬೇಕು. ಚಿಕ್ಕ ವಯಸ್ಸಿನಿಂದಲೇ ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಪ್ರೇರೇಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜಕೀಯಕ್ಕೆ ಬಂದರೂ ಅವರಿಗೆ ಸ್ವಂತ ನಿರ್ಧಾರ ಕೈಗೊಳ್ಳುವುದಕ್ಕೆ ಆಗುವುದಿಲ್ಲ. ಇನ್ನೊಬ್ಬರ, ಬಹುತೇಕ ಸಂದರ್ಭಗಳ ಗಂಡನ ಪ್ರಭಾವದ ನೆರಳಿನಲ್ಲಿ ಕೆಲಸ ಮಾಡಬೇಕಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT