ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬವಣೆ

ಮಹದೇಶ್ವರ ಬೆಟ್ಟ:ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಬತ್ತಿವೆ ಜಲಮೂಲಗಳು, ಗ್ರಾಮಸ್ಥರ ಆತಂಕ
ಬಿ.ಬಸವರಾಜು
Published 5 ಫೆಬ್ರುವರಿ 2024, 18:43 IST
Last Updated 5 ಫೆಬ್ರುವರಿ 2024, 18:43 IST
ಅಕ್ಷರ ಗಾತ್ರ

ಹನೂರು (ಚಾಮರಾಜನಗರ): ‌‌ತಾಲ್ಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಅಭಾವ ತಲೆದೋರಿದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್‌ನಲ್ಲಿ ಸಮಸ್ಯೆ ಕಂಡುಬರುತ್ತಿತ್ತು.

ಮಹದೇಶ್ವರ ಬೆಟ್ಟ ವ್ಯಾಪ್ತಿಯ ತೋಕೆರೆ, ದೊಡ್ಡಾಣೆ, ಕೊಕ್ಬರೆ, ಇಂಡಿಗನತ್ತ, ಪಡಸಲನತ್ತ, ತುಳಸಿಕೆರೆ ಹಾಗೂ ಮೀಣ್ಯಂ ಗ್ರಾಮಪಂಚಾಯಿತಿಯ ನಕ್ಕಂದಿ ಗ್ರಾಮದಲ್ಲಿ ಈಗಾಗಲೇ ಸಮಸ್ಯೆ ಉಂಟಾಗಿದೆ. ಕೆರೆಗಳು, ತೋಡುಬಾವಿಗಳಲ್ಲಿ ನೀರು ಬತ್ತುತ್ತಿದೆ. ಕೈ‌ಪಂಪುಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ‌. 

ಬೆಟ್ಟ ವ್ಯಾಪ್ತಿಯ 18 ಗ್ರಾಮಗಳಿಗೆ ಕೆರೆಕಟ್ಟೆಗಳು, ತೋಡುಬಾವಿಗಳೇ ನೀರಿನ ಮೂಲ. ಕೈ ಪಂಪುಗಳಲ್ಲಿ ನೀರು ಬರುವುದು ನಿಂತರೆ, ಕೆರೆ, ತೋಡುಬಾವಿ ನೀರನ್ನೇ ಶುದ್ಧೀಕರಿಸಿ ಕುಡಿಯಬೇಕು. ಸದ್ಯ, ನಕ್ಕುಂದಿಯಲ್ಲಿ ಜನ 1.5 ಕಿ.ಮೀ ದೂರದ ಖಾಸಗಿ ಜಮೀನಿಗೆ ಹೋಗಿ ಕುಡಿಯುವ ನೀರು ತರಬೇಕಾಗಿದೆ.

‘ತುಳಸಿಕೆರೆಯಲ್ಲಿ ನೀರು ಬತ್ತತೊಡಗಿದೆ. ಕೈಪಂಪಿನಲ್ಲೂ ನೀರಿಲ್ಲ. ತೋಡುಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದೆ. ಗ್ರಾಮ ಪಂಚಾಯಿತಿಯು ಹೂಳೆತ್ತಿದರೆ ಮಾತ್ರ ನೀರು ಹೆಚ್ಚಿ ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಮಹದೇಶ್ವರ ಬೆಟ್ಟ ಪಂಚಾಯಿತಿಯ ಪಿಡಿಒ ಕಿರಣ್‌, ‘ಕೊಕ್ಬರೆಯಲ್ಲಿ ಕೈಪಂಪು ಕೆಟ್ಟಿರುವ ದೂರುಗಳಿದ್ದು, ಶೀಘ್ರದಲ್ಲೇ ದುರಸ್ತಿಪಡಿಸಲಾಗುವುದು. ಉಳಿದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಿಲ್ಲ’ ಎಂದರು. 

ತಾಲ್ಲೂಕನ್ನು ಸಾಮಾನ್ಯ ಬರಪೀಡಿತ ಪ್ರದೇಶ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು. ‘ಮಾರ್ಚ್ ಬಳಿಕ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು’ ಎಂದು ಅಂದಾಜಿಸಿ, ಜನವರಿಯಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು.

ಕೊಕ್ಬರೆ ಗ್ರಾಮದಲ್ಲಿರುವ ಕೈಪಂಪಿನಲ್ಲಿ ನೀರು ಬರುತ್ತಿಲ್ಲ
ಕೊಕ್ಬರೆ ಗ್ರಾಮದಲ್ಲಿರುವ ಕೈಪಂಪಿನಲ್ಲಿ ನೀರು ಬರುತ್ತಿಲ್ಲ

Highlights - ಹೆಚ್ಚಿದ ಬಿಸಿಲಿನ ಝಳ ಕೆರೆಗಳ ನೀರಿನ ಮಟ್ಟ ಕುಸಿತ ಕಾರ್ಯನಿರ್ವಹಿಸದ ಕೈಪಂಪು

Cut-off box - ನೀರು ಪೂರೈಕೆಗೆ ₹ 25 ಲಕ್ಷ ಅನುದಾನ: ಸಿಇಒ ‘ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮಸ್ಯೆ ಉಂಟಾದರೆ ನಿವಾರಿಸಲು ಕ್ರಿಯಾಯೋಜನೆ ರೂಪಿಸಿದ್ದು ಅದರಂತೆಯೇ ಕೆಲಸ ನಡೆದಿದೆ. ಈ ಉದ್ದೇಶಕ್ಕಾಗಿ ₹25 ಲಕ್ಷ ಅನುದಾನವು ಬಂದಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT