ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಸಕಾಲದಲ್ಲಿ ಸಿಗದ ಆಂಬುಲೆನ್ಸ್‌ ಸೇವೆ

ಮೂರು ತಿಂಗಳ ಹಿಂದೆ ಅರಣ್ಯ ಇಲಾಖೆಯಿಂದ ಆರಂಭ, ಸಿಗದ ಸಮರ್ಪಕ ಸ್ಪಂದನೆ
Published 9 ಏಪ್ರಿಲ್ 2024, 7:06 IST
Last Updated 9 ಏಪ್ರಿಲ್ 2024, 7:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಗಿರಿಜನ ಕಾಲೊನಿಗಳು ಹಾಗೂ ಕಾಡಂಚಿನ ಗ್ರಾಮಗಳ ಜನರಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗಲೆಂದು ಆರಂಭಿಸಿದ್ದ ಅಂಬುಲೆನ್ಸ್‌ ಸೇವೆ ಸಕಾಲದಲ್ಲಿ ಜನರ ನೆರವಿಗೆ ಬರುತ್ತಿಲ್ಲ.  

ಚಾಲಕರಿಗೆ ವೇತನ ವಾಗಿಲ್ಲ ಎಂಬ ‌ಕಾರಣಕ್ಕೆ ತುರ್ತು ಸಂದರ್ಭಗಳಲ್ಲಿ ಸೇವೆ ಸಿಗುತ್ತಿಲ್ಲ, ಇದರಿಂದಾಗಿ ಈ ಆಂಬುಲೆನ್ಸ್‌ಗಳು ಇದ್ದೂ ಇಲ್ಲಂದಾಗಿದೆ. 

ಏ.4ರಂದು ರಾತ್ರಿ 8.30 ರ ಸಮಯದಲ್ಲಿ ಕಲ್ಲಿಗೌಡನಹಳ್ಳಿ ಗೇಟ್ ಬಳಿಯ ಮಗುವಿನಹಳ್ಲಿ ಗಿರಿಜನ ಹಾಡಿಯ ಯುವಕನೊಬ್ಬನಿಗೆ ಅಪರಿಚಿತ ವಾಹನ ಡಿಕ್ಕಿ  ಹೊಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರು ಶೀಘ್ರವಾಗಿ ಯುವಕನನ್ನು ಆಸ್ಪತ್ರೆಗೆ ಸಾಗಿಸಲು (9481995226) ಆಂಬುಲೆನ್ಸ್‌ಗೆ ಕರೆ ಮಾಡಿದರೆ ಈ ನಂಬರ್ ಸ್ವಿಚ್ ಆಫ್ ಆಗಿತ್ತು. ಬಳಿಕ ಉನ್ನತ ಅಧಿಕಾರಿಗಳಿಗೆ ಕರೆ ಮಾಡಿದಾಗ, ಅವರೂ ಸಂಪರ್ಕಕ್ಕೆ ಸಿಗಲಿಲಿಲ್ಲ.

ಬಂಡೀಪುರ ವಲಯದ ಅರಣ್ಯಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಆಂಬುಲೆನ್ಸ್‌ ಚಾಲಕನಿಗೆ ಸಂಬಳ ಆಗದ್ದರಿಂದ  ಚಾಲಕ ಬಂದಿಲ್ಲ ಎಂಬ ಕಾರಣ ಹೇಳಿದರು. ನಂತರ ಸ್ಥಳೀಯರು ಖಾಸಗಿ ಆಟೊವೊಂದರಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು.

‘ಇಲಾಖೆಯ ಸಿಬ್ಬಂದಿಗೆ ಏನಾದರೂ ತುರ್ತು ಪರಿಸ್ಥಿತಿ ಎದುರಾದಾಗ ಆಂಬುಲೆನ್ಸ್‌ಗೆ ಚಾಲಕ ಇಲ್ಲ ಎಂಬ ಕಾರಣ ಹೇಳಿ ಸುಮ್ಮನಾಗುತ್ತಾರಾ? ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಯಾರನ್ನಾದರೂ ವಾಹನ ಚಾಲನೆ ಮಾಡಲು ಕಳುಹಿಸಬಹುದಿತ್ತು. ಆದರೆ ಅಧಿಕಾರಿಗಳು ಚಾಲಕ ಇಲ್ಲ ಎಂದು ಕೈ ತೊಳೆದುಕೊಂಡಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಹಂಗಳ ಗ್ರಾಮದ ನಾಗರಾಜು  ‘ಪ್ರಜಾವಾಣಿ’ಗೆ ತಿಳಿಸಿದರು. 

ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ಎರಡು ಆಂಬುಲೆನ್ಸ್‌ ಖರೀದಿಸಲಾಗಿತ್ತು. ಜನವರಿ ತಿಂಗಳಲ್ಲಿ ಆಂಬುಲೆನ್ಸ್‌ಗಳ ಸೇವೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಚಾಲನೆ ನೀಡಿದ್ದರು. 

ಅಂಬುಲೆನ್ಸ್‌ಗಳ ನಿರ್ವಹಣಾ ವೆಚ್ಚ ತಿಂಗಳಿಗೆ ಸುಮಾರು ₹1.20 ಲಕ್ಷ ಆಗುತ್ತದೆ. ಇದನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರತಿಷ್ಠಾನದಿಂದ ಭರಿಸಲಾಗುತ್ತದೆ ಎಂದು ಅಂದಿನ ಹುಲಿ ಯೋಜನಾ ನಿರ್ದೇಶಕ ಪಿ.ರಮೇಶ್ ಕುಮಾರ್ ಅವರು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನೂತನ ನಿರ್ದೇಶಕ ಪ್ರಭಾಕರನ್ ಹಾಗೂ ಎಸಿಎಫ್ ಅವರಿಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಲಿಲ್ಲ. 

 ‘ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ಆಂಬುಲೆನ್ಸ್‌ ಚಾಲಕ ಬಂದಿಲ್ಲ, ಚಾಲಕರಿಗೆ ಹಿಂದಿನ ಯೋಜನಾ ನಿರ್ದೇಶಕರು ಹೇಗೆ ವೇತನ ನೀಡುತ್ತಿದ್ದರು ಎಂಬುದು ತಿಳಿದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

'ಜನರ ಹಣ ಪೋಲು’ ‘ಸೇವಾ ಉದ್ದೇಶದಿಂದ  ಚಾಲನೆ ನೀಡಿದ ಯೋಜನೆಯೊಂದು  ಮೂರೇ ತಿಂಗಳಿಗೆ ಹಳ್ಳ ಹಿಡಿದಿದೆ ಎಂದರೆ ಹೇಗೆ? ಬಂಡೀಪುರದಲ್ಲಿ  ಅಧಿಕಾರಿಗಳು ಬಂದಾಗಲೆಲ್ಲ ಹೊಸತಾಗಿ ಮಾಡುತ್ತೇವೆಂದು  ಏನಾದರೂ ಕೆಲಸ ಮಾಡುತ್ತಾರೆ. ಅವರು ವರ್ಗಾವಣೆ ಆಗಿ ಬೇರೋಬ್ಬರು ಬಂದರೆ ಆ ಯೋಜನೆ ಅಲ್ಲಿಗೆ ನಿಂತುಹೋಗುತ್ತದೆ. ಸರ್ಕಾರದ ಅನುದಾನ ಮತ್ತು ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದು ಹೀಗೆ’  ಎಂದು  ವನ್ಯಜೀವಿ ಛಾಯಾಗ್ರಾಹಕ ರಾಬಿನ್ಸನ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT