ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ಅರಣ್ಯ ಸಿಬ್ಬಂದಿ ವಿರುದ್ಧ ದೂರು

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕಡವೆ ಬೇಟೆಯಾಡಿದ ಆರೋಪಿ
Last Updated 27 ಜುಲೈ 2021, 2:28 IST
ಅಕ್ಷರ ಗಾತ್ರ

ಹನೂರು: ಅರಣ್ಯ ಇಲಾಖೆಯ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಕಡವೆ ಬೇಟೆಯಾಡಿ ಅರಣ್ಯ ಇಲಾಖೆಗೆ ಸಿಕ್ಕಿ ಬಿದ್ದಿದ್ದ ಆರೋಪಿಯೊಬ್ಬರು ಹನೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಅಂಡೆಕುರುಬನದೊಡ್ಡಿ ಗ್ರಾಮದ ನಿವಾಸಿ ಕುಮಾರ್ ಎಂಬುವವರು ದೂರು ನೀಡಿದವರು. ಇದೇ 19ರಂದು ಈ ದೂರು ನೀಡಿದ್ದಾರೆ. ಅವರು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದು, ‘ಅರಣ್ಯ ಇಲಾಖೆಯ ಸಂಪತ್, ಕೃಷ್ಣಪ್ಪ ಹಾಗೂ ಇನ್ನೂ ಎಂಟು ಸಿಬ್ಬಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಅವರು ದೂರಿದ್ದಾರೆ.

ಕಡವೆ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 12ರಂದು ಅರಣ್ಯ ಇಲಾಖೆ ಅಧಿಕಾರಿಗಳು ಕುಮಾರ್‌ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

‘ಗ್ರಾಮದ ಗಿರೀಶ್, ರಾಮನಾಯ್ಕ, ರವಿ ಹಾಗೂ ನಾನು ಸೇರಿ ಜಮೀನಿನಲ್ಲಿ ಕಡವೆಯನ್ನು ಕೊಂದು ಅದನ್ನು ಸಮಾನವಾಗಿ ಹಂಚಿಕೊಂಡಿರುವ ಬಗ್ಗೆ ವಿವರವಾಗಿ ಅಲ್ಲಿನ ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಮುಂದೆ ತಪ್ಪೊಪ್ಪಿಕೊಂಡಿದ್ದೇವೆ. ಆದರೆ, ಹಾಗಿದ್ದರೂ ಇಬ್ಬರು ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ದೈಹಿಕವಾಗಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನ್ನ ಮೇಲೆ ಹಲ್ಲೆ ಮಾಡಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕುಮಾರ್ ಅವರು ತಿಳಿಸಿದ್ದಾರೆ.

‘ಪೊಲೀಸರಿಗೆ ದೂರು ನೀಡಿರುವ ವ್ಯಕ್ತಿ 2013-14ರಲ್ಲಿ ಕಡವೆ ಬೇಟೆಯಾಡಿ ಸಿಕ್ಕಿ ಬಿದ್ದಿದ್ದ. ಈಗ ಪುನಃ ತನ್ನ ಸ್ನೇಹಿತರೊಂದಿಗೆ ಕಡವೆ ಬೇಟೆಯಾಡಿರುವ ಬಗ್ಗೆ ನಮ್ಮ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದ. ಬಳಿಕ ದೈಹಿಕ ಪರೀಕ್ಷೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಹಲ್ಲೆ ಆರೋಪ ಮಾಡಿದ ನಂತರವೂ ದೈಹಿಕ ಪರೀಕ್ಷೆ ಮಾಡಿಸಿದ್ದೇವೆ. ಆತ ಹಿಂದಿನಿಂದಲೂ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ವರದಿ ಬಂದಿದೆ. ಮಾಡಿರುವ ತಪ್ಪಿನಿಂದ ಬಚಾವಾಗಲು ಸಿಬ್ಬಂದಿ ಮೇಲೆ ಹಲ್ಲೆ ಆರೋಪ ಮಾಡುತ್ತಿದ್ದಾನೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ‘ಪ್ರಜಾವಾಣಿಗೆ ತಿಳಿಸಿದರು.

ದೂರು ಇದೇ ಮೊದಲೇನಲ್ಲ
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕಾವೇರಿ ವನ್ಯಧಾಮದ ಕೊತ್ತನೂರು ವನ್ಯಜೀವಿ ವಲಯದಲ್ಲಿ ಬೇಟೆಗಾರರನ್ನು ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿ ‘ನನ್ನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಅರಣ್ಯ ರಕ್ಷಕರೊಬ್ಬರ ಮೇಲೆ ದೂರು ನೀಡಿದ್ದರು. ಕಳೆದ ವರ್ಷ ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದಲ್ಲಿ ಅರಣ್ಯಾಧಿಕಾರಿಗಳು ಸಿಬ್ಬಂದಿ ಸೇರಿ ದೈಹಿಕವಾಗಿ ಹಲ್ಲೆ ಮಾಡಿರುವ ಬಗ್ಗೆ ಜಲ್ಲಿಪಾಳ್ಯ ಗ್ರಾಮದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಇದು ಮಲೆಮಹದೇಶ್ವರ ವನ್ಯಧಾಮದಲ್ಲಿ ವರದಿಯಾಗಿರುವ ಎರಡನೇ ಪ್ರಕರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT