ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಸ್ಕ್‌ ಎಂಜಿನಿಯರ್ ಮೇಲೆ ಪವರ್‌ಮ್ಯಾನ್‌ ಹಲ್ಲೆ; ಬಂಧನ, ಅಮಾನತು

Last Updated 27 ಜನವರಿ 2021, 14:41 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ಬದನಗುಪ್ಪೆಯ ಕಿರಿಯ ಎಂಜಿನಿಯರ್‌ ಚಂದ್ರನಾಯ್ಕ್‌ ಅವರ ಮೇಲೆ ಪವರ್‌ ಮ್ಯಾನ್‌ (ಲೈನ್‌ಮ್ಯಾನ್‌) ಆರ್‌.ಎಂ.ಮಹದೇವಸ್ವಾಮಿ ಅವರು ಬುಧವಾರ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ‌

ಮಹದೇವಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದುರ್ನಡತೆ ತೋರಿ, ಅನುಚಿತವಾಗಿ ವರ್ತಿಸಿದ್ದಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಅವರು ಆದೇಶ ಹೊರಡಿಸಿದ್ದಾರೆ.

ಚಂದ್ರನಾಯ್ಕ್‌ ಅವರ ತಲೆ, ಬಾಯಿ ಹಾಗೂ ಬಲ ಕೈಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಆರ್‌.ಎಂ.ಮಹದೇವಸ್ವಾಮಿ ಅವರು ಬದನಗುಪ್ಪೆ ಶಾಖೆಯಲ್ಲಿ ಪವರ್‌ ಮ್ಯಾನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೂ ಚಂದ್ರನಾಯ್ಕ್‌ ಅವರಿಗೂ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಮಹದೇವಸ್ವಾಮಿ ಅವರ ಕಾರ್ಯ ವೈಖರಿಯ ಬಗ್ಗೆ ಚಂದ್ರನಾಯ್ಕ್‌ ಅವರು ಅಸಮಾಧಾನ ಹೊಂದಿದ್ದರು. ಚಂದ್ರನಾಯ್ಕ್‌ ಅವರು ದುರುದ್ದೇಶಪೂರ್ವಕವಾಗಿ ತಮ್ಮ ಕೆಲಸದ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಮಹದೇವಸ್ವಾಮಿ ಅವರು ಆರೋಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ‌

ಮಹದೇವಸ್ವಾಮಿ ಅವರನ್ನು ಮೂರು ದಿನಗಳ ಅವಧಿಗೆ ಚಾಮರಾಜನಗರದ ವ್ಯಾಪ್ತಿಯಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿತ್ತು. ಮಂಗಳವಾರ ಕರ್ತವ್ಯವನ್ನೂ ನಿರ್ವಹಿಸಿದ್ದರು. ಬುಧವಾರ ಬೆಳಿಗ್ಗೆ ಬದನಗುಪ್ಪೆಯ ಕಚೇರಿಗೆ ತೆರಳಿದ್ದ ಮಹದೇವಸ್ವಾಮಿ ಅವರು ಚಂದ್ರನಾಯ್ಕ್‌ ಅವರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೂರು ದಿನಗಳ ಕಾಲ ಚಾಮರಾಜನಗರಕ್ಕೆ ವರ್ಗಾಯಿಸಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆದೇಶ ಹೊರಡಿಸಿದ್ದಾರೆ. ಚಂದ್ರನಾಯ್ಕ್‌ ಅವರಿಗೂ ಆದೇಶಕ್ಕೂ ಸಂಬಂಧವಿಲ್ಲ. ಮಹದೇವಸ್ವಾಮಿ ಅವರು ಮಂಗಳವಾರ ನಗರದಲ್ಲಿ ಕೆಲಸ ಮಾಡಿದ್ದಾರೆ. ಬುಧವಾರ ಬದನಗುಪ್ಪೆಗೆ ತೆರಳಿ, ತಾವು ಇಲ್ಲಿಯೇ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪದ ಚಂದ್ರನಾಯ್ಕ್‌ ಅವರು ಮೇಲಿನ ಅಧಿಕಾರಿಗಳ ಆದೇಶವಾಗಿರುವುದರಿಂದ ಪಾಲನೆ ಮಾಡಲೇಬೇಕು ಎಂದು ಹೇಳಿದ್ದಾರೆ. ಆ ಬಳಿಕ ಮಹದೇವಸ್ವಾಮಿ ಅವರು ಹಲ್ಲೆ ಮಾಡಿದ್ದಾರೆ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಹನುಮಂತು ಉಪ್ಪಾರ್‌ ಅವರು, ‘ಕರ್ತವ್ಯಕ್ಕೆ ನಿಯೋಜಿಸಿದ ವಿಚಾರಕ್ಕೆ ಹಲ್ಲೆ ನಡೆದಿದೆ ಎಂದು ಗೊತ್ತಾಗಿದೆ. ಮಹದೇವಸ್ವಾಮಿ ಅವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಹೇಳಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT