ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆ ಉದ್ಘಾಟನೆಗೆ ಕ್ಷಣಗಣನೆ

ರಾಷ್ಟ್ರಪತಿ‌ ರಾಮನಾಥ ಕೋವಿಂದ್ ಅವರಿಂದ ಲೋಕಾರ್ಪಣೆ, ರಾಜ್ಯಪಾಲ, ಮುಖ್ಯಮಂತ್ರಿ ಭಾಗಿ
Last Updated 6 ಅಕ್ಟೋಬರ್ 2021, 14:34 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಹು ನಿರೀಕ್ಷೆಯ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ450 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಬೋಧನಾ ಆಸ್ಪತ್ರೆಯ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಮಧ್ಯಾಹ್ನ 3.30ಕ್ಕೆ ಆಸ್ಪತ್ರೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಿದ್ದಾರೆ.₹166.5 ಕೋಟಿ ವೆಚ್ಚದಲ್ಲಿ ಹೊಸ ಆಸ್ಪತ್ರೆ ನಿರ್ಮಾಣವಾಗಿದೆ.

ರಾಜ್ಯಪಾಲ ತ್ಯಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೇರಿದಂತೆ ಹಲವರು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ನಗರದ ಹೊರವಲಯದ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಬಳಿಯಲ್ಲೇ ಬೋಧನಾ ಆಸ್ಪತ್ರೆ ನಿರ್ಮಿಸಲಾಗಿದ್ದು, ವಿವಿಧ ದೀಪಗಳ ಅಲಂಕಾರದಿಂದ ಎರಡೂ ಕಟ್ಟಡಗಳು ಜಗಮಗಿಸುತ್ತಿದೆ. ಗುರುವಾರದ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಕಾಲೇಜಿನ ಆಡಳಿತ ಸಜ್ಜಾಗಿದ್ದು, ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿವೆ.

ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ:ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಗುರುವಾರ ಬೆಳಿಗ್ಗೆ 11.30ರ ಸುಮಾರಿಗೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲಿದ್ದಾರೆ. ಇದು ಖಾಸಗಿ ಭೇಟಿಯಾಗಿದ್ದು, ಮಾಧ್ಯಮಗಳು ಸೇರಿದಂತೆ ಯಾರಿಗೂ ಈ ಸಮಯದಲ್ಲಿ ದೇವಾಲಯದ ಒಳಕ್ಕೆ ಪ್ರವೇಶ ಇಲ್ಲ.

ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬರಲಿರುವ ಅವರು, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಯಳಂದೂರು ತಾಲ್ಲೂಕಿನ ವಡಗೆರೆಯಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗಿರಿ ರಂಗನಬೆಟ್ಟಕ್ಕೆ ತೆರಳಲಿದ್ದಾರೆ. ದೇವಾಲಯದಲ್ಲಿ ಬಿಳಿಗಿರಿರಂಗನಾಥಸ್ವಾಮಿಯ ದೇವರ ದರ್ಶನ ಪಡೆದ ನಂತರ ಅತಿಥಿ ಗೃಹದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಂತರ ಚಾಮರಾಜನಗರಕ್ಕೆ ಬರಲಿದ್ದಾರೆ.

ಯಡಬೆಟ್ಟದಲ್ಲಿ ಹೊಸ ಆಸ್ಪತ್ರೆಯ ಸಮೀಪವೇ ಇರುವ, ಜೆಎಸ್‌ಎಸ್‌ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಅವರು ಮಧ್ಯಾಹ್ನ 1.25ಕ್ಕೆ ಬಂದಿಳಿಯಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲೇ ಭೋಜನ ಸವಿಯಲಿರುವ ಅವರು, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲಿದ್ದಾರೆ. 3.30ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದು ಗಂಟೆಯ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ವೇದಿಕೆಯಲ್ಲಿ ಐವರು: ಶಿಷ್ಟಾಚಾರ ಹಾಗೂ ಕೋವಿಡ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ವೇದಿಕೆಯಲ್ಲಿ ರಾಷ್ಟ್ರಪತಿ ಸೇರಿದಂತೆ ಅವರು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.

‘ರಾಷ್ಟ್ರಪತಿ, ಅವರ ಪತ್ನಿ, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ವೇದಿಕೆಯಲ್ಲಿ ಇರಲಿದ್ದಾರೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ: ಸಮಾರಂಭದಲ್ಲಿ 800ರಿಂದ 1000 ಮಂದಿಗೆ ಭಾಗವಹಿಸಲು ಅವಕಾಶ ಇದೆ. ಭಾಗವಹಿಸುವವರು ಪಾಸ್‌ ಹೊಂದಿರುವುದು ಕಡ್ಡಾಯ. ಅಲ್ಲದೇ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನೂ ಹೊಂದಿರಬೇಕು.

ಒಂದು ಗಂಟೆ ಅವಧಿಯಲ್ಲಿ ಉದ್ಘಾಟನಾ ಸಮಾರಂಭ ಮುಕ್ತಾಯ ಕಾಣಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 4.40ಕ್ಕೆ ಬೆಂಗಳೂರಿಗೆ ತೆರಳಿಲಿದ್ದಾರೆ.

‘ಉದ್ಘಾಟನಾ ಸಮಾರಂಭಕ್ಕೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಇದ್ದು ಗುರುವಾರ ಬೆಳಿಗ್ಗೆಯ ಹೊತ್ತಿಗೆ ಮುಕ್ತಾಯವಾಗಲಿದೆ’ ಎಂದು ಡಾ.ಸಂಜೀವ್‌ ಅವರು ಮಾಹಿತಿ ನೀಡಿದರು.

ಮೌಢ್ಯಕ್ಕೆ ಬೊಮ್ಮಾಯಿ ಗುದ್ದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಅದರಲ್ಲೂ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಿಲ್ಲೆಗೆ ಬಂದಿದ್ದರೂ, ನಗರಕ್ಕೆ ಬಂದಿರಲಿಲ್ಲ.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯಕ್ಕೆ ಜೋತು ಬಿದ್ದು ಯಡಿಯೂರಪ್ಪ ಬಂದಿರಲಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ಬೊಮ್ಮಾಯಿ ಅವರು ಕೂಡ ಅದೇ ಹಾದಿ ತುಳಿಯುತ್ತಾರೆಯೇ ಎಂಬ ಅನುಮಾನ ಜಿಲ್ಲೆಯ ಜನರನ್ನೂ ಕಾಡಿತ್ತು. ಸೋಮವಾರದವರೆಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ದೃಢಪಟ್ಟಿರಲಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ವಲಯದಲ್ಲಿ ಈ ವಿಚಾರ ಚರ್ಚೆಯಾಗಿತ್ತು.

‘ಆಸ್ಪತ್ರೆ ಉದ್ಘಾಟನೆಗೆ ಮುಖ್ಯಮಂತ್ರಿ ಅವರು ಬಂದೇ ಬರುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹಾಗೂ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಮಾಧ್ಯಮಗಳಿಗೆ ಹಲವು ಬಾರಿ ಸ್ಪಷ್ಟನೆ ನೀಡಿದ್ದರು.

ನಗರಕ್ಕೆ ಬರಲಿ: ಮುಖ್ಯಮಂತ್ರಿ ಅವರು ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಬರುವುದು ಅವರ ಭೇಟಿಯ ವೇಳಾ ಪಟ್ಟಿಯಲ್ಲಿ ಇಲ್ಲ. ಯಡಬೆಟ್ಟವು ನಗರದ ಹೊರವಲಯದಲ್ಲಿದೆ. ಮುಖ್ಯಮಂತ್ರಿ ಅವರು ನಂಜನಗೂಡು ರಸ್ತೆಯಲ್ಲಿರುವ ಬೈಪಾಸ್‌ ರಸ್ತೆಯ ಮೂಲಕ ಯಡಬೆಟ್ಟಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ, ಅವರು ಕಾರ್ಯಕ್ರಮ ಮುಗಿಸಿ ಅಥವಾ ಅದಕ್ಕೂ ಮೊದಲು ನಗರಕ್ಕೆ ಬಂದು ಹೋಗಲಿ ಎಂಬ ಒತ್ತಾಯವನ್ನು ವಿರೋಧ ಪಕ್ಷಗಳ ಮುಖಂಡರು ಮಾಡುತ್ತಿದ್ದಾರೆ.

ಹೊಸ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಉದ್ಘಾಟನೆ ಬಳಿಕ ಆರೋಗ್ಯ ಸೇವೆ ಆರಂಭವಾಗಲಿದೆ
- ಡಾ.ಡಿ.ಎಂ.ಸಂಜೀವ್‌, ಕಾಲೇಜು ಡೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT