ಗುರುವಾರ , ನವೆಂಬರ್ 21, 2019
22 °C

ಮೋಟಾರ್‌ ಕಾಯ್ದೆ: ದಂಡ ಪರಿಷ್ಕರಣೆಗೆ ಆಗ್ರಹ

Published:
Updated:
Prajavani

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್‌ ವಾಹನ ಕಾಯ್ದೆಯ ಅಡಿಯಲ್ಲಿ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದಂಡವನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹೆಲ್ಮೆಟ್‌ ಧರಿಸಿ, ಸೈಕಲ್‌ ಸವಾರಿ ಮಾಡುವುದರ ಮೂಲಕ ಹೊಸ ಕಾಯ್ದೆಯನ್ನು ಖಂಡಿಸಿದರು. 

ಚಾಮರಾಜೇಶ್ವರ ಉದ್ಯಾನವನ ಎದುರು ಸೇರಿದ ಪ್ರತಿಭಟನಾನಿರತರು ಭುವನೇಶ್ವರಿ ವೃತ್ತಕ್ಕೆ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದರು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಸರ್ಕಾರದ ವಿರುದ್ಧ  ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಮಾತನಾಡಿ, ‘ಸಂಚಾರ ನಿಯಮಗಳ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರ ಹಗಲು ದರೋಡೆ ನಡೆಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ. ಆದರೆ ಹೆಲ್ಮೆಟ್ ಧರಿಸದವರಿಗೆ ₹1,000 ದಂಡ ಹಾಕಿದ ಮೇಲೆ ಹೆಲ್ಮೆಟ್ ನೀಡಬೇಕು. ವಾಹನ ವಿಮೆ ಇಲ್ಲದವರಿಗೆ ದಂಡ ಹಾಕಿದ ಮೇಲೆ ಸ್ಥಳದಲ್ಲೇ ವಿಮೆ ಮಾಡಿಸಿಕೊಡಬೇಕು. ಮದ್ಯದ ಅಂಗಡಿಗಳನ್ನು ಬಂದ್‌ ಮಾಡಿದರೆ ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಬಹುದು. ದಂಡದ ಮೊತ್ತ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಅವರು ಮಾತನಾಡಿ, ‘ಖಾಲಿಯಾಗಿರುವ ಕೇಂದ್ರ, ರಾಜ್ಯ ಸರ್ಕಾರದ ಖಜಾನೆಗೆ ಹಣ ತುಂಬಿಸುವ ಉದ್ದೇಶದಿಂದ ಹೆಚ್ಚು ದಂಡ ವಿಧಿಸಿ ಸಾರ್ವಜನಿಕರನ್ನು ಲೂಟಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ಚಾ.ಸಿ.ಸೋಮನಾಯಕ, ಗು.ಪುರುಷೋತ್ತಮ್, ಚಾ.ಹ.ಶಿವರಾಜ್, ರವಿಚಂದ್ರ ಪ್ರಸಾದ್, ಮಹದೇವನಾಯಕ, ವೀರಭದ್ರ, ತಾಂಡವಮೂರ್ತಿ, ಟೈಲರ್‌ನಂಜುಂಡ, ಲಿಂಗರಾಜು, ಮಂಜುನಾಥ, ಮಹದೇವ, ಸ್ವಾಮಿ, ದೊರೆಸ್ವಾಮಿ, ಕಾರ್ತಿಕ್ ಇದ್ದರು.

ಪ್ರತಿಕ್ರಿಯಿಸಿ (+)