ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹ

ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ಬೃಹತ್‌ ರ‍್ಯಾಲಿ
Last Updated 1 ಆಗಸ್ಟ್ 2022, 13:29 IST
ಅಕ್ಷರ ಗಾತ್ರ

ಚಾಮರಾಜನಗರ: ವೀರಶೈವ ಲಿಂಗಾಯತ ಸಮಾಜದಲ್ಲಿ ಬರುವ ಎಲ್ಲ ಉಪಪಂಗಡಗಳನ್ನು ಇತರ ಹಿರಂದುಳಿದ ವರ್ಗಗಳ ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ಸಮಾಜದ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ಸೇರಿದ ಪ‍್ರತಿಭಟನಕಾರರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಅಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೂ ರ‍್ಯಾಲಿ ನಡೆಸಿ, ಭವನದ ಪ್ರವೇಶದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೆ ಎಂ.ಸಿ.ಮೋಹನಕುಮಾರಿ ಮಾತನಾಡಿ, ‘ವರ್ಷಗಳಿಂದ ವೀರಶೈವ - ಲಿಂಗಾಯತ ಸಮುದಾಯದ 34 ಉಪ ಪಂಗಡಗಳನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದ್ದು, ಇನ್ನೂ 56 ಉಪ ಪಂಗಡಗಳನ್ನು ಸೇರಿಸಲಾಗಿಲ್ಲ. ಇದರಿಂದಾಗಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹಲವು ಉಪಪಂಡಗಳ ಜನರು ಸೌಲಭ್ಯ ವಂಚಿತರಾಗಿದ್ದಾರೆ. ಎಲ್ಲ ಉಪ ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತ‌ಲೇ ಬಂದಿದ್ದೇವೆ’ ಎಂದರು.

‘ಸಮುದಾಯವು ಬಹುತೇಕ ಕೃಷಿ ಮತ್ತು ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಎಲ್ಲ ಪಂಗಡಗಳು ಸೇರದೇ ಇರುವುದರಿಂದ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಅವಕಾಶಗಳಿಂದ ವಂಚಿತರಾಗಿರುತ್ತಾರೆ. ನಮಗೆ ಆಗದಿದ್ದರೂ, ಮುಂದಿನ ಪೀಳಿಗೆಯವರ ಉತ್ತಮ ಭವಿಷ್ಯಕ್ಕಾಗಿ ಇದು ಜಾರಿಗೆ ಬರಲೇಬೇಕು’ ಎಂದರು.

ಸಮುದಾಯದ ನಾಯಕಿ ಪರಿಮಳಾ ನಾಗಪ್ಪ ಮಾತನಾಡಿದರು. ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗೇಂದ್ರ ಅವರು ಮನವಿ ಪತ್ರವನ್ನು ಓದಿದರು.

ಪ್ರತಿಭಟನಕಾರರು ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಡಗೂರು ಮಠದ ಶ್ರೀಗಳು, ಕುಂತೂರು ಶ್ರೀಗಳು, ಚಿಲಕವಾಡಿ ಮಠದ ಶ್ರೀಗಳು, ದೇವನೂರು ಮಠದ ಶ್ರೀಗಳು, ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್‌, ಉಪಾಧ್ಯಕ್ಷರಾದ ಗಂಗಪ್ಪ, ಪುಟ್ಟಣ್ಣ, ರತ್ನಮ್ಮ, ಪ್ರಭುಸ್ವಾಮಿ, ವಿಶ್ವನಾಥ್, ಸುಜೇಂದ್ರ, ಬಸವ ಕೇಂದ್ರದ ಅಧ್ಯಕ್ಷ ಎನ್‌ರಿಚ್‌ ಮಹಾದೇವಸ್ವಾಮಿ,ಪ್ರಮೋದ್, ಗಾಯಿತ್ರಿ, ನಾಗರತ್ನ, ರತ್ನಮ್ಮ, ಉಮಾ, ಸುನಂದ, ಗಾಯಿತ್ರಿ,ರೇಣುಕ, ರೇಖಾ, ಜ್ಯೋತಿ, ಮುಖಂಡರಾದ ಪಿ.ಮರಿಸ್ವಾಮಿ, ಎ.ಎಸ್.ನಟರಾಜು, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿ.ಕೆ.ರವಿಕುಮಾರ್, ಕೆರೆಹಳ್ಳಿ ನವೀನ್, ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT