ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಏರಿಕೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ

Last Updated 7 ನವೆಂಬರ್ 2020, 15:44 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್‌ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಮೊಂಬತ್ತಿ ಹಚ್ಚಿ ನಗರದ ಸೆಸ್ಕ್‌ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸೆಸ್ಕ್‌ ವಿಭಾಗೀಯ ಕಚೇರಿಯ ಆವರಣದಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸೆಸ್ಕ್‌ ಲೆಕ್ಕಾಧಿಕಾರಿ ಬಾಸ್ಕರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ದೇಶ ಹಾಗೂ ರಾಜ್ಯದಲ್ಲಿ ಜನರುಕೋವಿಡ್‌ನಿಂದ ತತ್ತರಿಸಿದ್ದಾರೆ. ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಜನರಿಗೆ ಯಾವುದೇ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅದರಲ್ಲೂ ವಿಶೇಷವಾಗಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರು, ಮಧ್ಯಮ ವರ್ಗದವರು ಆರ್ಥಿಕ ಹೊಡೆತದಿಂದ ತೊಂದರೆಗೆ ಸಿಲುಕಿದ್ದಾರೆ’ ಎಂದು ಪ್ರತಿಭಟನನಿರತರು ಹೇಳಿದರು.

‘ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಲು ಹೊರಟಿರುವುದು ನೋವಿನ ಸಂಗತಿ. ಜನ ಸಾಮಾನ್ಯರನ್ನು ರಕ್ಷಿಸಬೇಕಾದ ಸರ್ಕಾರವೇ ಜನರಿಗೆ ಹೊರೆಯನ್ನು ಕೊಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್‌ ಉತ್ಪಾದನೆಯಾದರೂ ಇಂತಹ ನಿರ್ಧಾರ ತೆಗೆದುಕೊಂಡಿರುವುದು ದುರಂತ. ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಹೆಚ್ಚಳ ಮಾಡಿದರೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಎಚ್ಚರಿಸಿದರು.

ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ನಿಜಧ್ವನಿ ಗೋವಿಂದರಾಜು, ಕೆ.ಪುಟ್ಟಸ್ವಾಮಿಗೌಡ, ನಂಜುಂಡ, ಟೈಲರ್ ನಾಗ, ವೀರಭದ್ರ, ತಾಂಡವಮೂರ್ತಿ, ಪಣ್ಯದಹುಂಡಿ ರಾಜು, ದೊರೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT