ಶನಿವಾರ, ಜೂನ್ 25, 2022
24 °C

ಆರೋಗ್ಯ, ಶಿಕ್ಷಣ ಸರ್ಕಾರೀಕರಣಗೊಳಿಸಿ: ಬಿಪಿಎಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆದು ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ ಸೇವೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಪರಿವರ್ತನ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ಸೋಮವಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪರಿವರ್ತನ ಸಂಘ ಜಿಲ್ಲಾಧ್ಯಕ್ಷ ಆಲೂರುಮಲ್ಲು ಅವರು, ‘ಕೋವಿಡ್‌ ಸಂದರ್ಭದಲ್ಲಿ ದೇಶದ ಆರೋಗ್ಯ ಕ್ಷೇತ್ರದಲ್ಲಿರುವ ಲೋಪ ದೋಷಗಳೆಲ್ಲ ಗೋಚರವಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಸೇರಿದಂತೆ ಆಮ್ಲಜನಕ, ವೆಂಟಿಲೇಟರ್‌ ಹಾಗೂ ಅಗತ್ಯ ಅಔಷಧಗಳು ಸಿಗುತ್ತಿಲ್ಲ. ಇದರ ಜೊತೆಗೆ ಖಾಸಗಿ ಆಸ್ಪ‍ತ್ರೆಗಳು, ಆಂಬುಲೆನ್ಸ್‌ಗಳು ಜನರಿಂದ ಒಂದಕ್ಕೆ ಹತ್ತು ಪಟ್ಟು ಹಣ ವಸೂಲು ಮಾಡುತ್ತಿವೆ’ ಎಂದು ದೂರಿದರು. 

‘ಅಲ್ಲದೇ ಜೀವ ರಕ್ಷಕ ಔಷಧಿಗಳು, ಪಲ್ಸ್ ಆಕ್ಸಿಮೀಟರ್ನಂತಹ ಉಪಕರಣಗಳನ್ನು ಐದಾರು ಪಟ್ಟು ದರದಲ್ಲಿ ಮಾರಲಾಗುತ್ತಿದೆ. ಜೀವರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.  

‘ಜನರು ಕೋವಿಡ್‌ನಿಂದಾಗಿ ಹೆತ್ತವರನ್ನು, ಮಕ್ಕಳನ್ನು ಕಳೆದುಕೊಂಡು ದುಃಖ ಅನುಭವಿಸಿದ್ದಾರೆ. ಇದು ಒಂದು ಕಡೆಯಾದರೆ, ಆತ್ಮೀಯರ ಚಿಕಿತ್ಸೆಗಾಗಿ ಹೆಚ್ಚು ಹಣ ಪಾವತಿಸಬೇಕಾದ ಆತಂಕವನ್ನೂ ಅನುಭವಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿಯವರಿಗೆ ಸರ್ಕಾರ ಅವಕಾಶ ಕೊಟ್ಟಿರುವುದು ಇದಕ್ಕೆ ಕಾರಣ. ಶಿಕ್ಷಣದ ವಿಚಾರದಲ್ಲೂ ಜನ ಸಾಮಾನ್ಯರು ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ಇಲ್ಲೂ ಕೂಡ ಖಾಸಗಿಯವರೇ ಮೇಲುಗೈ ಸಾಧಿಸಿದ್ದಾರೆ. ಆದ್ದರಿಂದ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರವನ್ನು ಸರ್ಕಾರೀಕರಣಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.    

ಸಂಘದ ಪ್ರಧಾನ ಕಾರ್ಯದರ್ಶಿ ವಾಸು, ಮುಖಂಡರಾದ ಎಂ.ಮಹದೇವನಾಯಕ, ರಾಮಸಮುದ್ರ ಚಿನ್ನಸ್ವಾಮಿ, ಬಾಬು, ವೆಂಕಟೇಶ್, ಪ್ರದೀಪ್, ಶಂಕರ್, ಸೋಮವಾರಪೇಟೆ ಸಿದ್ದರಾಜು, ಪರ್ವತರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು