ಜಿಲ್ಲಾಸ್ಪತ್ರೆಯಲ್ಲೇ ಒಪಿಡಿ ಸೇವೆಗೆ ಆಗ್ರಹ

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಮತ್ತು ಹೊರ ರೋಗಿಗಳ ವಿಭಾಗಗಳನ್ನು ಉಳಿಸಿಕೊಳ್ಳುವಂತೆ ಆಗ್ರಹಿಸಿ ಕದಂಬ ಕನ್ನಡ ಸೇನೆ ಕರ್ನಾಟಕದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ನಗರದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಜಿಲ್ಲಾಸ್ಪತ್ರೆಯ ಹಳೆಯ ತುರ್ತು ಚಿಕಿತ್ಸಾ ವಿಭಾಗದ ಕಟ್ಟಡದ ಮುಂಭಾಗ ಸೇರಿದ ಪ್ರತಿಭಟನಕಾರರು, ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಹೋರಾಟಗಾರ ನಿಜಧ್ವನಿ ಗೋವಿಂದರಾಜು ಅವರು ಮಾತನಾಡಿ, ‘ಜಿಲ್ಲಾಸ್ಪತ್ರೆಯಲ್ಲಿದ್ದ ಎಲ್ಲ ವಿಭಾಗಗಳನ್ನು ಯಡಬೆಟ್ಟದಲ್ಲಿರುವ ಹೊಸ ಬೋಧನಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ಕಾಲೇಜಿನ ಆಡಳಿತ ಏಕಾಏಕಿಯಾಗಿ ಈ ನಿರ್ಧಾರ ತೆಗೆದುಕೊಂಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ’ ಎಂದು ದೂರಿದರು.
‘ಜ್ವರ, ಕೆಮ್ಮು ನೆಗಡಿಯಂತಹ ಸಣ್ಣ ಪುಟ್ಟ ಅನಾರೋಗ್ಯಕ್ಕೂ ಯಡಬೆಟ್ಟದ ಆಸ್ಪತ್ರೆಗೆ ಹೋಗಬೇಕಾಗಿದೆ. ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಬಡ ಜನರು ನೂರಾರು ರೂಪಾಯಿ ಖರ್ಚು ಮಾಡಬೇಕಿದೆ. ಕೂಡಲೇ ಜಿಲ್ಲಾಡಳಿತ, ವೈದ್ಯಕೀಯ ಕಾಲೇಜಿನ ಆಡಳಿತ ಎಚ್ಚೆತ್ತುಕೊಂಡು ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಹಾಗೂ ಹೊರರೋಗಿಗಳ ವಿಭಾಗ ಆರಂಭಿಸಬೇಕು. ಈ ಸೇವೆಗಳು ಲಭ್ಯವಾಗುವವರೆಗೂ ಧರಣಿ ಮುಂದುವರಿಯಲಿದೆ’ ಎಂದರು.
ಸೇನೆಯ ಅಧ್ಯಕ್ಷ ಅಂಬರೀಶ್, ಜಿಲ್ಲಾಧ್ಯಕ್ಷ ಚಾ.ಕುಮಾರ್, ಮುತ್ತುರಾಜ್, ಅಸಾದುಲ್ಲ ಷರೀಫ್, ಸಿದ್ದಪ್ಪಾಜಿ, ಮಂಜುನಾಯಕ, ಲಿಂಗರಾಜು, ರಾಮಸಮುದ್ರ ಸುರೇಶ್, ಚಾ.ಗು.ನಾಗರಾಜು ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.