ಬುಧವಾರ, ನವೆಂಬರ್ 20, 2019
27 °C
ಗ್ರಾಮ ಲೆಕ್ಕಾಧಿಕಾರಿಗಳಿಂದ ಜಿಲ್ಲಾಡಳಿತ ಭವನದ ಎದುರು ಹೋರಾಟ

ಕೆಲಸದ ಒತ್ತಡ ಮಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

Published:
Updated:
Prajavani

ಚಾಮರಾಜನಗರ: ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರಿಗೆ ಹೇರುತ್ತಿರುವ ಹೆಚ್ಚಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಲೆಕ್ಕಿಗರು ಬೆಳೆ ಸಮೀಕ್ಷೆ ಹಾಗೂ ಬೆಳೆ ಮರು ಸಮೀಕ್ಷೆ, ಬೆಳೆ ಸಮೀಕ್ಷೆಯ ಮರು ವಿಚಾರಣೆಯನ್ನು ಬೆಳೆ ಸರ್ವೇ ತಂತ್ರಾಂಶದಲ್ಲಿ ದಿನನಿತ್ಯವೂ ನಿರ್ವಹಿಸುವ ಕಾರ್ಯ ಈಗ ಪ್ರಗತಿಯಲ್ಲಿದೆ. 2018–19ನೇ ಸಾಲಿನ ಹಿಂಗಾರು ಅಂದಾಜು 20 ಸಾವಿರ ಹೆಕ್ಟೇರ್ ಬೆಳೆ ನಷ್ಟವಾದ ಪ್ರದೇಶಕ್ಕೆ ಪರಿಹಾರ ನೀಡುವ ಸಲುವಾಗಿ ಪರಿಹಾರ ತಂತ್ರಾಂಶದಲ್ಲಿ ಫಲಾನುಭವಿಗಳ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ.

ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಇ-ಕ್ಷಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಮಟ್ಟದ ಪರಿಶೀಲನಾ ಕಾರ್ಯಕ್ಕಾಗಿ ಎಲ್ಲ ಹೋಬಳಿಯ ಗ್ರಾಮ ಲೆಕ್ಕಿಗರನ್ನು ನಿಯೋಜಿಸಿಕೊಂಡಿದೆ. 2020ರ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳು ತಂತ್ರಾಂಶದ ಮೂಲಕ ನಿರ್ವಹಿಸಬೇಕಾದ ಕೆಲಸ ಕಾರ್ಯಗಳನ್ನು ಕೂಡ ಗ್ರಾಮ ಲೆಕ್ಕಿಗರೇ ನಿರ್ವಹಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಎಲ್ಲ ಭಾಗಗಳಲ್ಲಿಯೂ ಗ್ರಾಮ ಲೆಕ್ಕಿಗರಿಗರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು. ಆತ್ಮಹತ್ಯೆಗೆ ಶರಣಾಗಿರುವ ಬಸವರಾಜ್ ನಾಯ್ಕರ್ ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈಗಾಗಲೇ ಮೈಸೂರು ಜಿಲ್ಲೆಯಲ್ಲಿ 68 ಗ್ರಾಮ ಲೆಕ್ಕಾಧಿಕಾರಿಗಳಿಗೆ ಬೇರೆ ಇಲಾಖೆಗಳಿಗೆ ಮುಂಬಡ್ತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಮಹೇಶ್, ತಾಲ್ಲೂಕು ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಜಯಪ್ಪ, ನೌಕರರ ಸಂಘದ ಸದಸ್ಯರಾದ ನಾಗೇಂದ್ರ, ಸುಮಂತ್, ಖಜಾಂಚಿ ಆರ್.ಎಲ್.ವಿನಯ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕರಾದ ಯಲ್ಲಪ್ಪ, ಮಂಜುನಾಥ್, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಮಹದೇವಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)