ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಸಿದ್ದರಾಮೇಶ್ವರ ದೇವಾಲಯಕ್ಕೆ ಬೇಕಿದೆ ರಕ್ಷಣೆ

ಹಸಗೂಲಿ ಗ್ರಾಮದಲ್ಲಿ ಚೋಳರ ಕಾಲದ ದೇವಾಲಯ ಶಿಥಿಲ
Last Updated 9 ಅಕ್ಟೋಬರ್ 2022, 6:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿರುವ ಪುರಾತನ ಕಾಲದ ಸಿದ್ದರಾಮೇಶ್ವರ ದೇವಸ್ಥಾನ ಶಿಥಿಲವಾಗುತ್ತಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಈ ದೇವಸ್ಥಾನ ಚೋಳರ ಕಾಲದಾಗಿದ್ದು, ಇದರ ಸುತ್ತಲೂ ಅರೆಕಂಬಗಳು ಮತ್ತು ಕೋಷ್ಟ ಮಂಟಪಗಳನ್ನು ಕಾಣಬಹುದು.ನವರಂಗದಲ್ಲಿ ಮಹಿಷ ಮರ್ಧಿನಿಶಿಲ್ಪ, ಉಮಾಮಹೇಶ್ವರ, ಸೂರ್ಯ, ಶಂಕರನಾರಾಯಣ, ನಂದಿ, ಗಣಪತಿ, ಶಿಲ್ಪಗಳು, ಗರ್ಭಗೃಹದ ಮೇಲೆ ಗೋಪುರವಿದೆ. ಇದು ಶೈವ ಪರಂಪರೆಗೆ ಸೇರಿದ ದೇವಾಲಯ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯಪಡುತ್ತಾರೆ.

ಸೋಮವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆಮತ್ತು ಶಿವರಾತ್ರಿ ಹಬ್ಬದ ಸಮಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ.

‘ನಿರ್ವಹಣೆ ಕೊರತೆಯಿಂದ ದೇವಾಲಯದ ಕಟ್ಟಡ ಶಿಥಿಲವಾಗಿದ್ದು,ದೇವಸ್ಥಾನದ ಹಿಂದಿನ ಭಾಗ ಸೋರುತ್ತದೆ. ಗೋಡೆ ಬಿರುಕು ಬಿಟ್ಟಿದೆ. ಇತಿಹಾಸ ಸಾರುವ ಈ ದೇವಾಲಯದ ಜೀರ್ಣೋದ್ಧಾರ ಆಗಬೇಕು ಎಂಬ ಅಭಿಲಾಷೆ ಗ್ರಾಮದ ಯುವಕರಲ್ಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ದೇವಸ್ಥಾನ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಗ್ರಾಮದ ಮಹೇಂದ್ರ ಒತ್ತಾಯಿಸಿದರು.

ದೇವಸ್ಥಾನದ ಮುಂಭಾಗದಲ್ಲಿ ಇರುವ ಕಲ್ಲಿನ ಶಾಸನ ಮತ್ತು ಹೊರಭಾಗದ ಗೋಡೆಯ ಮೇಲೆ ಬರೆದಿರುವ ಮೊದಲ ಶಾಸನಗಳಲ್ಲಿ 12ನೇ ಶತಮಾನದಿಂದ 18ನೇ ಶತಮಾನದವರೆಗೆ ದಾನ ದತ್ತಿ ನೀಡಿರುವುದರ ಬಗ್ಗೆ ಉಲ್ಲೇಖವಿದೆ.

ಹಸಗೂಲಿ ಹೆಸರು ಬಂದಿದ್ದು ಹೇಗೆ?: ಹಸಗೂಲಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿದೆ. ಸ್ಥಳೀಯರ ಪ್ರಕಾರ, ಹಸುಗೂಲಿಗೆ 10ನೇ ಶತಮಾನದಲ್ಲಿ ಪುನುಗೂಲಿ ಎಂಬ ಹಸರಿತ್ತು. ನಂತರದ ಶತಮಾನಗಳಲ್ಲಿ ಇದು ‘ಹಸುಕಲಿ’ ಎಂದು ಬದಲಾಯಿತು. ಆ ಬಳಿಕ ಹಸಗೂಲಿ ಆಯಿತು.

ಹಸಗೂಲಿ ಎಂದರೆ ಪಶುಗಳನ್ನು ಕೊಲ್ಲು ಎಂದರ್ಥ ಎಂದು ಹೇಳುತ್ತಾರೆ ಸ್ಥಳೀಯರು. ಹಸಗೂಲಿ ಮಾರಮ್ಮ ದೇವಿಗೆ ಬಲಿ ಕೊಡುವ ಪದ್ದತಿ ಇತ್ತು. ‘ಹಸುಕೊಲೆ‘ ‘ಹಸುಕೂಲಿ’ ಪದಗಳು ನಂತರದ ದಿನಗಳಲ್ಲಿ ಹಸಗೂಲಿ ಎಂದು ಬದಲಾಗಿದೆ ಎಂದು ಗ್ರಾಮದ ಹಿರಿಯರ ಅನಿಸಿಕೆ.

ಶಿಲಾಯುಗದ ಅವಶೇಷಗಳು...

‘ಹಸಗೂಲಿ ಗ್ರಾಮದಲ್ಲಿ, ಶಿಲಾಯುಗಕ್ಕೆ ಸೇರಿದ ಅವಶೇಷಗಳಿವೆ. ದೇವಾಲಯದ ಮುಂದೆ ಶಿಲಾಯುಗಕ್ಕೆ ಸೇರಿದ ಸಮಾಧಿಗಳನ್ನು ಗುರುತಿಸಲಾಗಿದೆ. ಇವುಗಳು ಈಗ ಸಂಪೂರ್ಣ ನಾಶವಾಗಿ ಕುರುಹುಗಳು ಮಾತ್ರವೇ ಇವೆ. ಈ ಅವಶೇಷಗಳ ಮಧ್ಯೆ ವೀರಗಲ್ಲುಗಳಿವೆ. ಇದನ್ನು ಗ್ರಾಮಸ್ಥರು ವೀರಗುಡಿಗಳೆಂದು ಕರೆಯುತ್ತಾರೆ’ ಎಂದು ದೇವಸ್ಥಾನದ ಪೂಜಾರಿ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದರಾಮೇಶ್ವರ ದೇವಾಲಯವು ಪ್ರಾಚೀನ ದೇವಾಲಯ. ವಾಸ್ತು ನೋಡಿದಾಗ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಎಂಬುದು ದೃಢಪಡುತ್ತದೆ. ದೇವಾಲಯದ ಗೋಪುರ ಕೆಳಗಿನ ಎಡಬದಿಯ ಭಿತ್ತಿ (ಗೋಡೆ) ಕುಸಿಯುತ್ತಿದೆ. ಈ ದೇವಾಲಯವನ್ನು ಸಂರಕ್ಷಿಸಲು ಸ್ಥಳೀಯರು ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು’ ಎಂದು ಮೈಸೂರು ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕ ಡಾ.ಎಸ್.ಮಣಿಕಂಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT