ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಕೃತಿಕಾ ಮಳೆ ವೈಭವ

Published 15 ಮೇ 2024, 4:36 IST
Last Updated 15 ಮೇ 2024, 4:36 IST
ಅಕ್ಷರ ಗಾತ್ರ

ಯಳಂದೂರು: ‘ಕೃತಿಕಾ ಮಳೆ ಕಿರಿಬನ ಹಿಡಿದಂತೆ’ ಎಂಬ ಗಾದೆ ನೆನಪಿಸುವಂತೆ ತಾಲ್ಲೂಕಿನ ಬನ, ಗ್ರಾಮ ಮತ್ತು ಪಟ್ಟಣದ ಸುತ್ತಮುತ್ತ ಮಂಗಳವಾರ ಸಂಜೆ ಕೃತಿಕಾ ಮಳೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಸುರಿಯಿತು.

ದಿನಪೂರ್ತಿ ಮೋಡ ಮುಚ್ಚಿದ ವಾತಾವರಣ ಇತ್ತು. ಮಧ್ಯಾಹ್ನ ಸುಳಿಗಾಳಿ ಬೀಸಿ ಉಷ್ಣಾಂಶದಲ್ಲಿ ಇಳಿಕೆಯಾಗಿತ್ತು. ಮಧ್ಯಾಹ್ನ ಕಾಡಂಚಿನ ಪ್ರದೇಶಗಳಲ್ಲಿ ಬಿರುಗಾಳಿ ಮತ್ತು ಮಳೆ ಕಾಣಿಸಿಕೊಂಡು ಜೋರಾಗಿ ಸುರಿಯಿತು. ಮದ್ದೂರು, ಕೆಸ್ತೂರು, ಹೊನ್ನೂರು ಸುತ್ತಲೂ ಗಾಳಿ ಸಹಿತ ಮೊದಲ ಮಳೆಯಾಗಿದೆ.

ಬಿಳಿಗಿರಿರಂಗನಬೆಟ್ಟ, ಯಳಂದೂರು ಸುತ್ತಮುತ್ತಲ ಗ್ರಾಮಗಳಲ್ಲೂ ವರ್ಷಧಾರೆಯಾಯಿತು. ಕೆಲವೆಡೆ ಹದ ಮಳೆ ಸುರಿಯಿತು. ಕೆಲವೆಡೆ ತುಂತುರು ಮಳೆ ಆಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹರಿದ ನೀರಿನ ನಡುವೆ ವಾಹನಗಳು ಸಾಗಿದವು. ಬಸ್ ಮತ್ತು ಲಾರಿಗಳು ಬಿರುಸು ಮಳೆಗೆ ಹೆಡ್ ಲೈಟ್ ಹಾಕಿಕೋಡು ಸಂಚರಿಸಬೇಕಾಯಿತು.

‘ಸರಿಯಾದ ಸಮಯಕ್ಕೆ ಮಳೆ ಸುರಿದಿದೆ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆಗೆ ಭತ್ತ, ಎಳ್ಳು, ಹುಚ್ಚೆಳ್ಳು ಬೆಳೆ ಕೃತಿಕಾ ನಕ್ಷತ್ರದಲ್ಲಿ ರೈತರ ಕೈಹಿಡಿಯಲಿದೆ. ಬೆಂದ ಭೂಮಿ ನೀರು ಕುಡಿಯುತ್ತಿದ್ದು, ಉತ್ತಮ ಮಳೆ ಮುಂದುವರಿದರೆ ಉತ್ತುವ, ಬಿತ್ತುವ ಚಟುವಟಿಕೆಗೆ ವೇಗ ಬರಲಿದೆ. ಕೆರೆ ಕಟ್ಟೆಯತ್ತ ಜಲ ಪೂರಣಗೊಂಡರೆ ಜಲ ಜೀವಿಗಳ ಸಂತತಿ ಹೆಚ್ಚಲಿದೆ’ ಎಂದು ಆಲ್ಕೆರೆ ಅಗ್ರಹಾರ ರೈತ ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಜೆ ಪಟ್ಟಣದಿಂದ ವಿವಿಧೆಡೆ ತೆರಳುವವರು ತುಂತರು ಮಳೆ ನಡುವೆ ವಾಹನ ಏರಲು ಪ್ರಯಾಸಪಟ್ಟರು. ಶ್ರಮಿಕರು, ಜಾನುವಾರು ಸಾಕಣೆದಾರರು ಮತ್ತು ರೈತರು ಮಳೆ ನಡುವೆ ಮನೆಗಳತ್ತ ತೆರಳುತ್ತಿದ್ದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT