ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಸರಿದ ಬರದ ಛಾಯೆ; ಬಿತ್ತನೆ ಕಾರ್ಯ ಚುರುಕು

ಜಿಲ್ಲೆಯಾದ್ಯಂತ 34,793 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Published 12 ಜೂನ್ 2024, 6:28 IST
Last Updated 12 ಜೂನ್ 2024, 6:28 IST
ಅಕ್ಷರ ಗಾತ್ರ

ಚಾಮರಾಜನಗರ: ಮೇ ಹಾಗೂ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಪರಿಣಾಮ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ರೈತರು ಹೊಲ ಹಸನುಗೊಳಿಸಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೀಳುಬಿದ್ದ ನೆಲದಲ್ಲಿ ಹಸಿರ ಮೊಳಕೆ ಕಂಗೊಳಿಸುತ್ತಿವೆ.

ಸರಿದ ಬರದ ಛಾಯೆ:

ಮುಂಗಾರು ಪೂರ್ವ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿತ್ತು. ಏಪ್ರಿಲ್‌ನಲ್ಲಿ 67.4 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 3.1 ಮಿ.ಮೀ ಮಾತ್ರ ಮಳೆ ಸುರಿದು ಮುಂಗಾರುಪೂರ್ವ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿತ್ತು.

ಕಳೆದೆರಡು ವರ್ಷಗಳ ಕಾಲ ಬರದಿಂದ ತತ್ತರಿಸಿ ಹೋಗಿದ್ದ ರೈತರ ಮೊಗದಲ್ಲಿ ಆತಂಕದ ಕಾರ್ಮೋಡ ಸರಿದಿತ್ತು. ಏಪ್ರಿಲ್‌ನಲ್ಲಿ ಕೈಕೊಟ್ಟಿದ್ದ ಮಳೆ ಮೇ ಹಾಗೂ ಜೂನ್‌ನಲ್ಲಿ ಸುರಿದ ಪರಿಣಾಮ ಆತಂಕದ ಕಾರ್ಮೋಡ ಸರಿದಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ. 

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2024–25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,09,369 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಜೂನ್ 9ರವರೆಗೂ ಜಿಲ್ಲೆಯಲ್ಲಿ 34,793 ಹೆಕ್ಟೇರ್ ಬಿತ್ತನೆ ನಡೆದಿದ್ದು ಶೇ 31.81ರಷ್ಟು ಗುರಿ ತಲುಪಲಾಗಿದೆ.

ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆಯಲ್ಲಿ ಅತಿ ಹೆಚ್ಚು ಶೇ 77.47ರಷ್ಟು ಬಿತ್ತನೆ ನಡೆದಿದೆ. 33,447 ಹೆಕ್ಟೇರ್‌ ಬಿತ್ತನೆ ಗುರಿಗೆ ಪ್ರತಿಯಾಗಿ 25,910 ಹೆಕ್ಟೇರ್ ಬಿತ್ತನೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ 22,165 ಹೆಕ್ಟೇರ್‌ ಬಿತ್ತನೆ ಗುರಿಗೆ ಪ್ರತಿಯಾಗಿ 5466 ಹೆಕ್ಟೇರ್ ಬಿತ್ತನೆಯಾಗಿದ್ದು ಶೇ 24.66ರಷ್ಟು ಪ್ರಗತಿಯಾಗಿದೆ. ಉಳಿದ ಮೂರು ತಾಲ್ಲೂಕುಗಳಲ್ಲಿ ನಿರೀಕ್ಷಿತ ಪ್ರಮಾಣದ ಬಿತ್ತನೆ ನಡೆದಿಲ್ಲ. ಯಳಂದೂರಿನಲ್ಲಿ 10,587 ಹೆಕ್ಟೇರ್ ಬಿತ್ತನೆ ಗುರಿಗೆ 1190 ಹೆಕ್ಟೇರ್‌, ಕೊಳ್ಳೇಗಾಲದಲ್ಲಿ 16,050 ಹೆಕ್ಟೇರ್‌ ಗುರಿಗೆ 1229 ಹೆಕ್ಟೇರ್, ಹನೂರಿನಲ್ಲಿ 27,120 ಹೆಕ್ಟೇರ್ ಗುರಿಗೆ ಪ್ರತಿಯಾಗಿ ಕೇವಲ 992 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರೈತರು ಮುಸುಕಿನ ಜೋಳ ಬೆಳೆಯಲು ಆಸಕ್ತಿ ತೋರಿದ್ದು 8507 ಹೆಕ್ಟೇರ್ ಗುರಿಗೆ ಪ್ರತಿಯಾಗಿ 9629 ಹೆಕ್ಟೇರ್‌ ಬಿತ್ತನೆ ನಡೆದಿದೆ. ಸೂರ್ಯಕಾಂತಿ ಬೆಳೆಯುವತ್ತಲೂ ಒಲವು ತೋರಿರುವ ಗುಂಡ್ಲುಪೇಟೆ ರೈತರು 11800 ಹೆಕ್ಟೇರ್‌ ಗುರಿಗೆ ಪ್ರತಿಯಾಗಿ 11320 ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಎಣ್ಣೆಕಾಳುಗಳನ್ನು ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. 150 ಹೆಕ್ಟೇರ್ ಎಳ್ಳು ಗುರಿಗೆ 335 ಹೆಕ್ಟೇರ್ ಬಿತ್ತನೆಯಾಗಿದೆ. ಉಳಿದ ಹನೂರು, ಯಳಂದೂರು, ಚಾಮರಾಜನಗರ ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೂ ಪ್ರಗತಿಯಲ್ಲಿದೆ.

ಏಪ್ರಿಲ್‌ನಲ್ಲಿ ಮಳೆ ಕೈಕೊಟ್ಟ ಪರಿಣಾಮ ಹತ್ತಿ ಬೆಳೆ ಕ್ಷೇತ್ರ ಕಡಿಮೆಯಾಗಿದೆ. 6540 ಹೆಕ್ಟೇರ್ ಹತ್ತಿ ಬಿತ್ತನೆ ಪ್ರತಿಯಾಗಿ 2760 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ. ರೈತರು ಹತ್ತಿಯ ಬದಲಾಗಿ ಶೇಂಗಾ ಮುಸುಕಿನ ಜೋಳ ಬೆಳೆಯುವತ್ತ ಆಸಕ್ತಿ ತೋರುತ್ತಿದ್ದು ಅಗತ್ಯ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಆಗಸ್ಟ್‌ ಸೆಪ್ಟೆಂಬರ್‌ವರೆಗೂ ಜಿಲ್ಲೆಯಲ್ಲಿ ಬಿತ್ತನೆ ನಡೆಯುವುದರಿಂದ 1.9 ಲಕ್ಷ ಹೆಕ್ಟೇರ್ ಗುರಿ ಮುಟ್ಟುವ ವಿಶ್ವಾಸವಿದೆ.
ಎಸ್‌.ಎಸ್‌. ಅಬಿದ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಜೂನ್‌ ಮೊದಲ ವಾರ ಉತ್ತಮ ಮಳೆ ಸುರಿದಿರುವುದರಿಂದ ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಒತ್ತು ನೀಡಿದ್ದು ಇದುವರೆಗೂ 28.9 ಕ್ವಿಂಟಲ್‌ ಹೆಸರು, 89.85 ಕ್ವಿಂಟಲ್‌ ಉದ್ದು, 246.4 ಕ್ವಿಂಟಲ್‌ ಅಲಸಂದೆ, 521.8 ಕ್ವಿಂಟಲ್‌ ಸೂರ್ಯಕಾಂತಿ, 986.14 ಕ್ವಿಂಟಲ್‌ ನೆಲಗಡಲೆ, 29.4 ಕ್ವಿಂಟಲ್‌ ಮುಸುಕಿನ ಜೋಳದ ಬೀಜ ವಿತರಿಸಿದ್ದು ಗೋದಾಮುಗಳಲ್ಲಿ 625 ಕ್ವಿಂಟಲ್‌ ದಾಸ್ತಾನು ಇರಿಸಿಕೊಳ್ಳಲಾಗಿದೆ.

ಯೂರಿಯಾ, ಡಿಎಪಿ, ಎಂಒಪಿ, ಎಸ್‌.ಎಸ್‌.ಪಿ ಹಾಗೂ ಕಾಂಪ್ಲೆಕ್ಸ್‌ ಸೇರಿದಂತೆ 8746 ಟನ್‌ ರಸಗೊಬ್ಬರ ವಿತರಣೆ ಮಾಡಲಾಗಿದ್ದು 16037 ಟನ್‌ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್‌.ಎಸ್‌. ಅಬಿದ್‌ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಜೂನ್‌ ಆರಂಭದಲ್ಲಿ ಬಿರುಸಾಗಿ ಸುರಿದಿದ್ದ ಮಳೆ ಕಳೆದೆರಡು ದಿನಗಳಿಂದ ಕ್ಷೀಣವಾಗಿದ್ದರೂ ಮುಂದೆ ಉತ್ತಮ ಪ್ರಮಾಣದ ಮಳೆ ಸುರಿಯುವ ಮುನ್ಸೂಚನೆ ಇದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT