ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ದಸರಾ; ಆಕರ್ಷಕ ಎತ್ತಿನ ಬಂಡಿಗಳ ಮೆರವಣಿಗೆ

ಪ್ರಗತಿಪರ ರೈತರು ಇತರೆ ರೈತರಿಗೂ ಪ್ರೇರಣೆಯಾಗಬೇಕು: ಚಾರುಲತಾ ಸೋಮಲ್
Last Updated 29 ಸೆಪ್ಟೆಂಬರ್ 2022, 16:32 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಮೂರನೇ ದಿನ ರೈತ ದಸರಾ ಅಂಗವಾಗಿ ನಗರದಲ್ಲಿ ಎತ್ತಿನಬಂಡಿಗಳ ಮೆರವಣಿಗೆ ಜನರನ್ನು ಆಕರ್ಷಿಸಿತು.

ಬಾಳೆ ದಂಡು, ಮಾವಿನ ಎಲೆ ತೋರಣ ಹಾಗೂ ಬಣ್ಣದ ಕಾಗದಗಳಿಂದ ಅಲಂಕೃತವಾಗಿದ್ದ ಹತ್ತು ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗೊರವರ ಕುಣಿತ, ಬ್ಯಾಂಡ್‌ ಸೆಟ್‌ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಅಲಂಕೃತ ಎತ್ತಿನ ಬಂಡಿಗಳಿಗೆ ಕಾಡಾ ಅಧ್ಯಕ್ಷ ನಿಜಗುಣರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ಎತ್ತಿನ ಬಂಡಿಯ ಮೇಲೆ ನಿಂತು ಒಂದಷ್ಟು ದೂರ ಸಾಗಿದರು.

ಸಾಂಸ್ಕೃತಿಕ ಕಲಾತಂಡಗಳಾದ ಡೊಳ್ಳುಕುಣಿತ, ನಗಾರಿ, ಡಮರುಗ, ಬ್ಯಾಂಡ್‌ಸೆಟ್ ಕಲಾ ತಂಡಗಳೊಂದಿಗೆ ರಾಚಯ್ಯ ಜೋಡಿ ರಸ್ತೆ, ನ್ಯಾಯಾಲಯದ ರಸ್ತೆಯ ಮೂಲಕ ಸಾಗಿದ ಎತ್ತಿನ ಬಂಡಿಗಳ ಮೆರವಣಿಗೆ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮುಕ್ತಾಯಗೊಂಡಿತು.

ಇತರರಿಗೂ ಮಾದರಿಯಾಗಿ: ಮೆರವಣಿಗೆ ಮುಕ್ತಾಯ ಕಂಡ ನಂತರ ಅಂಬೇಡ್ಕರ್‌ ಭವನದಲ್ಲಿ ರೈತ ದಸರಾ ಸಮಾರಂಭ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿ, ‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಗತಿಪರ ರೈತರು, ಇತರೆ ರೈತರಿಗೂ ಪ್ರೇರಣೆಯಾಗಬೇಕು’ ಎಂದರು.

‘ರೈತರನ್ನು ಉತ್ತೇಜಿಸುವ ಸಲುವಾಗಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರಶಸ್ತಿ ಪಡೆದಿರುವ ರೈತರು ಇತರರಿಗೂ ಮಾದರಿಯಾಗಬೇಕು. ಕೃಷಿ ಕ್ಷೇತ್ರದ ಪ್ರಗತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರು ಅವುಗಳ ಸದುಪಯೋಗ ಪಡೆದು ಅರ್ಥಿಕವಾಗಿ ಸದೃಢರಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಚಿಕ್ಕಸ್ವಾಮಿ ಹಾಗೂ ಮುಖಂಡರಾದ ಹೆಬ್ಬಸೂರು ಬಸವಣ್ಣ ಅವರು ರೈತ ದಸರಾ ಕುರಿತು ಮಾತನಾಡಿದರು.

ಪ್ರಶಸ್ತಿ ಪ್ರದಾನ: 2022–21ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ರಾಜಪ್ಪ, ಚನ್ನಬಸವರಾಧ್ಯ, ಬಿ.ಸಿದ್ದಪ್ಪ, ವಿ.ನಟರಾಜು, ಎನ್‌.ನಟರಾಜು, ದೇವಣ್ಣ, ವಿವೇಕಾನಂದ ಚಕ್ರವರ್ತಿ, ಬಸವರಾಜಪ್ಪ, ನಾಗರಾಜು, ಲೋಕೇಶ್‌ ಹಾಗೂ ಚೆಂಡು ಹೂ ಬೆಳೆಗಾರರಾದ ಇನ್ನಿಬ್ಬರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪಡೆದ ಲಿಂಗಪ್ಪ ಹಾಗೂ ನಟರಾಜು ಅವರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಮಧುಸೂದನ್, ಉಪನಿರ್ದೇಶಕರಾದ ಸೋಮಶೇಖರ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಾಂತಪ್ಪ, ನಾಮನಿರ್ದೇಶಿತ ಸದಸ್ಯರಾದ ಕೂಸಣ್ಣ, ಕೃಷ್ಣಕುಮಾರ್, ಮಹದೇವಯ್ಯ ಇದ್ದರು.

ಕಾರ್ಯಕ್ರಮದ ಬಳಿಕ ರೈತರಿಗೆ ಜೇನುಕೃಷಿ, ಮಣ್ಣಿನ ಫಲವತ್ತತೆ ಹಾಗೂ ಸಾವಯವ ಕೃಷಿ ಪದ್ಧತಿ ಬಗ್ಗೆ ತಾಂತ್ರಿಕ ಕಾರ್ಯಾಗಾರ ನಡೆಯಿತು.

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ’
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಮಾತನಾಡಿ, ‘ದಸರಾ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ರೈತರಿಗೆ ಅನುಕೂಲವಾಗುವಂತಹ ಚಿಂತನಾ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಾಗಿದೆ. ಕೃಷಿಕ್ಷೇತ್ರದಲ್ಲಿ ರೈತರನ್ನು ಹೆಚ್ಚಾಗಿ ತೊಡಗುವಂತೆ ಪ್ರೇರೇಪಿಸುವುದು ರೈತ ದಸರಾ ಕಾರ್ಯಕ್ರಮದ ಉದ್ದೇಶ’ ಎಂದರು.

‘ಕೃಷಿ ಎನ್ನುವುದು ನಿರಂತರ ಕಾರ್ಯ. ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಕೆಲ ಉದ್ಯಮಗಳು ಸ್ಥಗಿತಗೊಂಡರೂ ಕೃಷಿ ಚಟುವಟಿಕೆ ನಿಂತಿರಲಿಲ್ಲ. ಉನ್ನತ ವ್ಯಾಸಂಗ ಮಾಡಿದವರು ಸಹ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಇದು ಕೃಷಿ ಕ್ಷೇತ್ರದ ಆರೋಗ್ಯಕರ ಬೆಳವಣಿಗೆಗೆ ಆಶಾದಾಯಕ ಅಂಶವಾಗಿದೆ’ ಎಂದರು.

‘ರೈತರು ಒಂದೇ ಬೆಳೆಗೆ ಅವಲಂಬಿತರಾಗದೇ ತಮ್ಮ ದಿನನಿತ್ಯದ ಬಳಕೆಗಾಗಿ ಕೃಷಿ ಜೊತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಗಳಿಸಬೇಕು. ಯುವಕರು ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕು. ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು’ ಎಂದು ಗಾಯತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT