ಸೋಮವಾರ, ಮಾರ್ಚ್ 1, 2021
19 °C

ಕೃಷಿ ಸಚಿವರಿಗೆ ಪ್ರತಿಭಟನೆಯ ಸ್ವಾಗತ ಕೋರಿದ ರೈತ ಸಂಘಟನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಎರಡೂ ರೈತ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯ ಮೂಲಕ ಸ್ವಾಗತ ಕೋರಿದವು. 

ಒಂದು ತಂಡ ಹಿರಿಕಾಟಿಯಲ್ಲಿ ಪ್ರತಿಭಟನೆ ನಡೆಸಿದರೆ ಮತ್ತೊಂದು ಬಣ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿತು. ಬಿ.ಸಿ.ಪಾಟೀಲ ಅವರು ಎರಡೂ ಕಡೆಗಳಲ್ಲಿ ಪ್ರತಿಭಟನಕಾರರ ಬಳಿ ತೆರಳಿ ಅವರ ಅಹವಾಲುಗಳನ್ನು ಆಲಿಸಿದರು.  

ಹಿರಿಕಾಟಿ ಗೇಟ್ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಗುರುಪ್ರಸಾದ್‌, ಮಾಡ್ರಹಳ್ಳಿ ಮಹದೇವಪ್ಪ ಮತ್ತು ಕುಂದುಕೆರೆ ಸಂಪತ್ತು ನೇತೃತ್ವದ ತಂಡ ರಸ್ತೆ ತಡೆ ನಡೆಸಿತು.

ತಾಲ್ಲೂಕು ಕಚೇರಿ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ಮತ್ತೊಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಜ್ಯೋತಿಗೌಡನಪುರ ಸಿದ್ದರಾಜು, ಶಾಂತಮಲ್ಲಪ್ಪ ನೇತೃತ್ವದ ತಂಡ ಪ್ರತಿಭಟನೆ ಹಮ್ಮಿಕೊಂಡಿತ್ತು. 

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯ ಬೇಕು, ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಭತ್ತ ಖರೀದಿ ವಿಳಂಬವಾಗಿರುವುದರಿಂದ ರೈತರಿಗೆ ನಷ್ಟವಾಗಿದೆ. ಇದಕ್ಕೆ ಪರಿಹಾರ ನೀಡಬೇಕು. ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳನ್ನು ನಿಗದಿ ಮಾಡಬೇಕು. 2016–17ನೇ ಸಾಲಿನ ಬೆಳೆ ವಿಮೆ ಇನ್ನೂ ಪಾವತಿಯಾಗಿಲ್ಲ, ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿದರು. 

ಹೊನ್ನೂರು ಪ್ರಕಾಶ್‌ ಅವರು ಮಾತನಾಡಿ, ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಏನು ಮಾಡಿದ್ದೀರಿ? ಬಂದ ಮೇಲೆ ಏನಾದರೂ ಮಾಡಿ ಹೋಗಬೇಕು. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ. ರೈತರಿಗೆ ಉಪಯುಕ್ತ ಉಪಕರಣಗಳನ್ನು ಇಲಾಖೆ ನೀಡುತ್ತಿಲ್ಲ’ ಎಂದು ದೂರಿದರು. 

ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಬಿ.ಸಿ.ಪಾಟೀಲ ಅವರು, ‘ನಾನೂ ರೈತ ಕುಟುಂಬದಿಂದ ಬಂದವನು. ರೈತರ ಹೋರಾಟದಲ್ಲಿ ಭಾಗಿಯಾಗಿ ಜೈಲಿಗೆ ಹೋದವನು. ರೈತರ ಜೊತೆಯಲ್ಲಿ ಇರಬೇಕು ಎಂಬ ಉದ್ದೇಶದಿಂದ ನನಗೆ ನೀಡಿದ್ದ ಅರಣ್ಯ ಖಾತೆ ಬೇಡ ಎಂದು ಹೇಳಿ ಕೃಷಿ ಖಾತೆಯನ್ನು ಪಡೆದೆ. ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ನಾನು ಹೇಳುವುದಿಲ್ಲ. ಕನಿಷ್ಠ ಪಕ್ಷ ಕೆಲವನ್ನಾದರೂ ಮಾಡುತ್ತೇನೆ’ ಎಂದರು. 

‘ರೈತರೊಂದಿಗೆ ಇರಬೇಕು ಎಂಬ ಉದ್ದೇಶದಿಂದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕೆ ಸರ್ಕಾರದ ಒಂದು ರೂಪಾಯಿಯೂ ಖರ್ಚು ಮಾಡುತ್ತಿಲ್ಲ. ಅವರ ಸಮಸ್ಯೆಗಳನ್ನು ಆಲಿಸುವುದಕ್ಕೆ ಈ ಕಾರ್ಯಕ್ರಮ ಬಳಸಿಕೊಳ್ಳುತ್ತೇನೆ’ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು