ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಾದ್ಯಂತ ಕನ್ನಡದ ಅನುರಣನೆ

ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ; ಧ್ವಜಾರೋಹಣ, ಸಡಗರ–ಸಂಭ್ರಮದ ಕಲರವ
Last Updated 1 ನವೆಂಬರ್ 2021, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಸರಳವಾಗಿ ಆಚರಿಸಲಾಯಿತು.

ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು, ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಕಚೇರಿಗಳಲ್ಲಿಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕನ್ನಡ ನಾಡು–ನುಡಿಗೆ ಗೌರವ ಸಲ್ಲಿಸಲಾಯಿತು.

ವಿವಿಧ ಕನ್ನಡ ಸಂಘಟನೆಗಳ ಪ್ರತಿನಿಧಿಗಳು ನಗರದ ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ನಾಡ ಧ್ವಜವನ್ನು ಹಾರಿಸಿ, ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.

ಕಾಂಗ್ರೆಸ್‌:ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗ ನಾಡ ಧ್ವಜದ ಆರೋಹಣ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಕನ್ನಡ ನಾಡು ನುಡಿ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕಾಗಿದೆ. ಕನ್ನಡ ನಾಡು ಕಟ್ಟಲು ಅನೇಕ ಮಹನೀಯರ ತ್ಯಾಗವನ್ನು ಸ್ಮರಿಸಿಕೊಳ್ಳುವ ಜೊತೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ ಎಂಬುದನ್ನು ನಾವೆಲ್ಲರೂ ಅರಿತುಕೊಂಡು ಕನ್ನಡ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡೋಣ’ ಎಂದರು.

ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಗುರುಸ್ವಾಮಿ, ಸೈಯದ್ ರಫಿ, ಎಎಚ್ಎನ್ ಖಾನ್, ಸೋಮನಾಯಕ, ಮಹದೇವನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಅಲೂರು ಪ್ರದೀಪ್ ಇತರರಿದ್ದರು.

ಎಸ್‌ಡಿಪಿಐ:ನಗರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಜಿಲ್ಲಾ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ ರಾಜ್ಯೋತ್ಸವ ಆಚರಿಸಲಾಯಿತು.

ಜಿಲ್ಲಾ ಅಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ‘ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿರುವ ಸರ್ಕಾರ ಒತ್ತಾಯ ಪೂರ್ವಕವಾಗಿ ಹಿಂದಿ ಭಾಷೆ ಹೇರಲು ಪ್ರಯತ್ನಿಸುತ್ತಿರುವುದು ಖಂಡನೀಯ. ಭಾಷೆ ಉಳಿದರೆ, ರಾಜ್ಯ ಉಳಿಯುತ್ತದೆ. ರಾಜ್ಯ ಉಳಿದರೆ ಕನ್ನಡಿಗರು ಉಳಿಯುತ್ತಾರೆ. ಈ ವಾಸ್ತವಂಶವನ್ನು ಕನ್ನಡಿಗರಾದ ನಾವು ಅರ್ಥ ಮಾಡಿಕೊಂಡು ಕನ್ನಡದ ಉಳಿವಿಗಾಗಿ ಹೋರಾಟ ಮಾಡಬೇಕು’ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದ ಏಕೀಕರಣ ಹೇಗೆ ಮತ್ತು ಯಾಕೆ ಆಯಿತು ಎಂಬುದನ್ನು ವಿವರಿಸಿದರು.

ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್, ಕಾರ್ಯದರ್ಶಿ ಜಬೀನೂರ್, ಜಿಲ್ಲಾ ಖಜಾಂಚಿ ಸೈಯದ್ ಇರ್ಫಾನ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಕೆ.ನಯಾಜ್ ಉಲ್ಲಾ, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಖ್ ಉಪಸ್ಥಿತರಿದ್ದರು.

ಗಡಿನಾಡು ಕನ್ನಡ ರಕ್ಷಣಾ ವೇದಿಕೆ: ನಗರದ ನ್ಯಾಯಾಲಯ ರಸ್ತೆಯಲ್ಲಿ ಗಡಿನಾಡು ಕನ್ನಡ ರಕ್ಷಣಾ ವೇದಿಕೆ ವತಿಯಿಂದ ರಾಜ್ಯೋತ್ಸವ ಆಚರಿಸಲಾಯಿತು.

ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್,ನಿಜಧ್ವನಿ ಗೋವಿಂದರಾಜು, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಬಿ.ಮಹೇಶ್, ಸಬ್‌ ಇನ್‌ಸ್ಪೆಕ್ಟರ್‌ ವೆಂಕಟೇಶ್, ಲಿಂಗರಾಜು, ವೇದಿಕೆಯ ಸದಸ್ಯರಾದ ಕಾರ್ತಿಕ್, ನಾಗೇಶ್, ಆಟೊ ಅಭಿ, ತೇಜಶ್ರೀ ಇದ್ದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ: ನಗರದ ಜಿಲ್ಲಾಡಳಿತ ಭವನ ಮುಖ್ಯದ್ವಾರದ ಎದುರು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಧ್ವಜಾರೋಹಣ ನೆರವೇರಿಸಿದರು.

ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿದರು. 2 ನಿಮಿಷ ಮೌನ ಆಚರಿಸಿಚಿತ್ರನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು.

ಅಬಕಾರಿ ಇಲಾಖೆಯ ಮೋಹನ್ ಕುಮಾರ್, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುರೇಶ್, ಅರುಣ್ ಕುಮಾರ್ ಗೌಡ, ಪ್ರೇಮ್, ರಾಚಪ್ಪ, ಕುಮಾರ್, ನಮ್ಮನೆ ಪ್ರಶಾಂತ್, ಕದಂಬ ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಕುಮಾರ್, ಗೋಪಾಲ್, ಚಾ.ಸಿ.ಸಿದ್ದರಾಜು, ಶಂಕರ್, ಸಿದ್ದಪ್ಪಾಜಿ, ಪ್ರೇಮ್ ಕುಮಾರ್, ಲಿಂಗರಾಜು ಇತರರಿದ್ದರು.

ನಗರದ ಶ್ರೀರಾಮಚಂದ್ರ ಶಿಕ್ಷಣ ಸಂಸ್ಥೆ, ತಾಲ್ಲೂಕಿನ ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲೂ ರಾಜ್ಯೋತ್ಸವ ನಡೆಯಿತು.

ಕನ್ನಡದ ಹಬ್ಬದ ಅಂಗವಾಗಿ ರಕ್ತದಾನ

ಚಿಕಿತ್ಸೆಗಾಗಿ ರಕ್ತ ಅಗತ್ಯವಿದ್ದ ಮಹಿಳೆಗೆ ರಕ್ತದಾನ ಮಾಡುವ ಮೂಲಕಯುವಸೇನೆ ಕರ್ನಾಟಕ ಸೇವಾ ಸಂಘದ ಪದಾಧಿಕಾರಿಗಳು ರಾಜ್ಯೋತ್ಸವ ಆಚರಿಸಿದರು.

ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರಗೆ ದಾಖಲಾಗಿದ್ದರು. ಅವರಿಗೆ ರಕ್ತದ ಅಗತ್ಯವಿತ್ತು. ಸೇವಾ ಸಂಘದ ಅಧ್ಯಕ್ಷ ನಮ್ಮನೆ ಪ್ರಶಾಂತ್ ರಕ್ತದಾನ ಮಾಡಿದರು.

ಸುವರ್ಣ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸುರೇಶ್ ವಾಜಪೇಯಿ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಪ್ರೇಮ್ ಕುಮಾರ್, ಅರುಣ್ ಕುಮಾರ್ ಗೌಡ ಇತರರಿದ್ದರು.

ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ

ತಾಲ್ಲೂಕು ಕನ್ನಡ ಯುವಕ ಸಂಘದ ವತಿಯಿಂದ ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗ ರಾಜ್ಯೋತ್ಸವ ಆಚರಿಸಲಾಯಿತು.

ಉದ್ಯಾನದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಸಂಘದ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.ನಗರಸಭೆ ಸದಸ್ಯೆ ಗಾಯತ್ರಿ ಧ್ವಜಾರೋಹಣ ನೆರವೇರಿಸಿದರು.

ತಾಲ್ಲೂಕು ಕನ್ನಡ ಸಂಘದ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ ಮಾತನಾಡಿದರು.ಪುನೀತ್ ರಾಜ್ ಕುಮಾರ್ ನಿಧನದ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.ಸಂಘದ ಉಪಾಧ್ಯಕ್ಷ, ಎಪಿಎಂಸಿ ಅಧ್ಯಕ್ಷ ಡಿ.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ನಗರಸಭೆ ಸದಸ್ಯರಾದ ಚಂದ್ರಶೇಖರ್, ಮನೋಜ್ ಪಟೇಲ್, ಬಸವಣ್ಣ, ಮಮತಾ, ಮುಖಂಡರಾದ ಸುರೇಶ್ ನಾಯಕ್, ವೆಂಕಟರಾಮನಾಯಕ, ಸಿ.ಬಿ.ನಾಗರಾಜ್, ಆರ್.ವಿ.ಮಹದೇವಪ್ಪ, ಸಂಗೀತಾ, ಸಂಜು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT