ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಹಬ್ಬದ ಸಂಭ್ರಮ; ರಾಮ ಸ್ತುತಿಯಲ್ಲಿ ತೇಲಿದ ಜನ

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಜಿಲ್ಲೆಯಾದ್ಯಂತಯ ಪೂಜೆ, ಹೋಮ, ಅನ್ನದಾನ, ಮನೆಗಳಲ್ಲಿ ರಾಮ ಕಪ
Published 23 ಜನವರಿ 2024, 5:34 IST
Last Updated 23 ಜನವರಿ 2024, 5:34 IST
ಅಕ್ಷರ ಗಾತ್ರ

ಚಾಮರಾಜನಗರ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ, ರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಅಂಗವಾಗಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ರಾಮಮಂದಿರಗಳಲ್ಲಿ, ಹಿಂದೂಗಳ ಮನೆ ಮನೆಗಳಲ್ಲಿ ಶ್ರೀರಾಮನ ಪೂಜೆಗಳು ನೆರವೇರಿದವು. ಎಲ್ಲೆಲ್ಲೂ ರಾಮನಾಮ ಜಪ, ಜೈಶ್ರೀರಾಮ್‌ ಘೋಷಣೆಗಳು ಅನುರಣಿಸಿದವು.   

ರಾಮನ ಭಕ್ತರು ನಗರ, ಪಟ್ಟಣ, ಗ್ರಾಮೀಣ ಭಾಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. 

ಪ್ರಾಣಪ್ರತಿಷ್ಠೆ ಅಂಗವಾಗಿ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರೆವೇರಿದವು.  ಜನರು ಕುಟುಂಬ ಸಮೇತರಾಗಿ ದೇವಾಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆಂಜನೇಯ ದೇವಾಲಯಗಳಲ್ಲಿ ಹೆಚ್ಚು ಜನಸಂದಣಿ ಇತ್ತು. 

ಚಾಮರಾಜನಗರದಾದ್ಯಂತ ರಾಮನ ಭಾವಚಿತ್ರ ಸಹಿತ ಕೇಸರಿ ಧ್ವಜಗಳು ಹಾರಾಡಿದವು. ದೇವಾಲಯಗಳ ಆವರಣ, ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮಚಂದ್ರನ ಬೃಹತ್‌ ಕಟ್‌ಔಟ್‌ಗಳನ್ನು ಅಳವಡಿಸಲಾಗಿತ್ತು. 

ಚಾಮರಾಜೇಶ್ವರ ಸ್ವಾಮಿ ದೇವಾಲಯ, ಕಾಡು ನಾರಾಯಣಸ್ವಾಮಿ ದೇವಸ್ಥಾನ, ಕನ್ನಿಕಾಪರಮೇಶ್ವರಿ ದೇವಾಲಯ, ದೇವಾಂಗ ಬೀದಿ ಚೌಡೇಶ್ವರೀ ದೇವಸ್ಥಾನ, ಚಿಕ್ಕ ಅಂಗಡಿ ಬೀದಿ ರಾಮ ಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ನೆರವೇರಿದವು. 

ನಗರದ ಶಂಕರಪುರದ ರಾಮಮಂದಿರ ಹಾಗೂ ಅಗ್ರಹಾರ ಬೀದಿಯ ಪಟ್ಟಾಭಿರಾಮಮಂದಿರಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. 

ಶಂಕರಪುರದ ರಾಮಮಂದಿರದಲ್ಲಿ ರಾಮ ತಾರಕ ಹವನ ನೆರವೇರಿತು. 400ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಮಹಿಳೆಯರು, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಠಿಸಿದರು. ರಾಮ ತಾರಕ ಮಂತ್ರ ಪಠಣ, ರಾಮಜಪ ದಿನಪೂರ್ತಿ ನಡೆಯಿತು. ವಿವಿಧ ಸಮುದಾಯದಗಳ ಮುಖಂಡರು, ಸ್ಥಳೀಯ ನಿವಾಸಿಗಳು, ಮೈಸೂರಿನಿಂದ ಬಂದ ಭಕ್ತರೂ ಹವನ, ಪೂಜೆಗಳಲ್ಲಿ ಪಾಲ್ಗೊಂಡರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದವರಿಗೆ ಅನ್ನಸಂತರ್ಪಣೆಯೂ ನಡೆಯಿತು. 

ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳ ನೇರ ಪ್ರಸಾರವನ್ನು ಬೃಹತ್‌ ಪರದೆ ಮೂಲಕ ಪ್ರದರ್ಶಿಸಲಾಯಿತು  
ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನಗಳ ನೇರ ಪ್ರಸಾರವನ್ನು ಬೃಹತ್‌ ಪರದೆ ಮೂಲಕ ಪ್ರದರ್ಶಿಸಲಾಯಿತು  

ಅಗ್ರಹಾರದ ಬೀದಿಯ ರಾಮಮಂದಿರದಲ್ಲಿ ಅರ್ಚಕ ಪಲಾಶ ಭಾರದ್ವಾಜ್ ಅವರ ನೇತೃತ್ವದಲ್ಲಿ ಗಣಪತಿ, ಗಾಯತ್ರಿ ದೇವಿ, ರಾಮದೇವರಿಗೆ ಫಲಪಂಚಾಮೃತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀರಾಮ ತಾರಕ ಹೋಮ ಹಾಗೂ ಪವಮಾನ ಹೋಮ, ಶ್ರೀ ರಾಮ ತಾರಕ ಮಂತ್ರ ಪಠಣ ನಡೆಯಿತು. ಪೂರ್ಣಹುತಿ ಹಾಗೂ ಮಹಾಮಂಗಳಾರತಿಯ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಂಗವಾಗಿ ನೂರಾರು ಮಹಿಳೆಯರು ಲಲಿತಾ ಸಹಸ್ರನಾಮ ವಿಷ್ಣು ಸಹಸ್ರನಾಮ ಪಠಿಸಿದರು
ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಂಗವಾಗಿ ನೂರಾರು ಮಹಿಳೆಯರು ಲಲಿತಾ ಸಹಸ್ರನಾಮ ವಿಷ್ಣು ಸಹಸ್ರನಾಮ ಪಠಿಸಿದರು

ವಿವಿಧೆಡೆ ಅನ್ನದಾನ:

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ದೇವಾಲಯಗಳಲ್ಲಿ, ಸಂಘಟನೆಗಳು, ಭಕ್ತರು ಅನ್ನದಾನ ಮಾಡಿದರು. ಮಜ್ಜಿಗೆ ಪಾನಕ ವಿತರಿಸಿದರು.

ನೇರ ಪ್ರಸಾರ:

ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳ ನೇರಪ್ರಸಾರವನ್ನು ಬೃಹತ್‌ ಪರದೆಯ ಮೂಲಕ ಪ್ರದರ್ಶಿಸಲು ವಿವಿಧೆಡೆ ವ್ಯವಸ್ಥೆ ಮಾಡಲಾಗಿತ್ತು.

ಡಾ.ಎನ್‌.ಎಸ್‌.ಮೋಹನ್‌ ಸ್ನೇಹ ಬಳಗದ ವತಿಯಿಂದ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದವರನ್ನು ಸನ್ಮಾನಿಸಲಾಯಿತು
ಡಾ.ಎನ್‌.ಎಸ್‌.ಮೋಹನ್‌ ಸ್ನೇಹ ಬಳಗದ ವತಿಯಿಂದ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡಿದ್ದವರನ್ನು ಸನ್ಮಾನಿಸಲಾಯಿತು

ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಡೀವಿಯೇಷನ್‌ ರಸ್ತೆ ಸೇರಿದಂತೆ ಹಲವೆಡೆ ನೇರ ಪ್ರಸಾರದ ವ್ಯವಸ್ಥೆ ಮಾಡ‌ಲಾಗಿತ್ತು. ದೇವಾಲಯದಲ್ಲಿ ನೂರಾರು ಭಕ್ತರು ನೇರಪ್ರಸಾರವನ್ನು ಕಣ್ತುಂಬಿಕೊಂಡರು. ಪ್ರಾಣ ಪ್ರತಿಷ್ಠೆಯ ಮುಹೂರ್ತ ಸಮೀಪಿಸುತ್ತಿದ್ದಂತೆಯೇ ಭಕ್ತರು ‘ಜೈ ಶ್ರೀರಾಮ್‌’ ಎಂದು ಉದ್ಗರಿಸಿದರು.    

ಆಭರಣ, ಹೂವುಗಳಿಂದ ಅಲಂಕೃತ ರಾಮಲಲ್ಲಾನ ಸುಂದರ ಮೂರ್ತಿ ಪರದೆಯಲ್ಲಿ ಮೂಡುವಾಗಲೆಲ್ಲ ಭಕ್ತಿಪರವಶರಾಗಿದ್ದ ಭಕ್ತರು ಕೈಮುಗಿದರು. 

ಚಾಮರಾಜನಗರ ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಮುಖಂಡರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಬಳಿಕ ಪ್ರತಿಷ್ಠಾಪನೆಯ ನೇರಪ್ರಸಾರ ವೀಕ್ಷಿಸಿದರು. ಅನ್ನಸಂತರ್ಪಣೆಯನ್ನೂ ನೆರವೇರಿಸಲಾಯಿತು 
ಚಾಮರಾಜನಗರ ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮದಲ್ಲಿ ಮುಖಂಡರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಬಳಿಕ ಪ್ರತಿಷ್ಠಾಪನೆಯ ನೇರಪ್ರಸಾರ ವೀಕ್ಷಿಸಿದರು. ಅನ್ನಸಂತರ್ಪಣೆಯನ್ನೂ ನೆರವೇರಿಸಲಾಯಿತು 
ಮನೆಗಳಲ್ಲೂ ಪೂಜೆ
ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಹಿಂದೂಗಳ ಮನೆಗಳಲ್ಲಿ ಸೋಮವಾರ ರಾಮನ ಪೂಜೆ ನಡೆಯಿತು. ಮಹಿಳೆಯರು, ಪುರುಷರು ಮಕ್ಕಳು ರಾಮ ತಾರಕ ಮಂತ್ರ ಪಠಿಸಿದರು. ಕೆಲವರು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದರು. ಟಿವಿ, ಮೊಬೈಲ್‌ಗಳ ಮೂಲಕ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ವೀಕ್ಷಿಸಿದರು. ರಾತ್ರಿ ಮನೆಗಳಲ್ಲಿ ದೀಪ ಹಚ್ಚಿ ರಾಮಸ್ಮರಣೆಯಲ್ಲಿ ತೊಡಗಿದರು.
ಚಾಮರಾಜನಗರದ ಸಂಜೀವಿನಿ ಟ್ರಸ್ಟ್‌ ವತಿಯಿಂದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀರಾಮ ಹಾಗೂ ರಾಮಮಂದಿರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು
ಚಾಮರಾಜನಗರದ ಸಂಜೀವಿನಿ ಟ್ರಸ್ಟ್‌ ವತಿಯಿಂದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀರಾಮ ಹಾಗೂ ರಾಮಮಂದಿರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿ ಪ್ರದರ್ಶಿಸಿದರು

ಕರಸೇವಕರಿಗೆ ಸನ್ಮಾನ ಸೇವೆ ಸ್ಮರಣೆ

ರಾಮಮಂದಿರದ ಉದ್ಘಾಟನೆ ಅಂಗವಾಗಿ ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ರಾಮದೇವರ ಪೂಜೆಯೊಂದಿಗೆ ಅಯೋಧ್ಯಗೆ ಕರಸೇವೆಗೆ ತೆರಳಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಸನ್ಮಾನಿಸಲಾಯಿತು.  ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯಾಗುತ್ತಿದ್ದಂತೆಯೇ ದೇವಾಲಯದಲ್ಲಿ  ಡಾ.ಎನ್.ಎಸ್.ಮೋಹನ್ ಸ್ನೇಹ ಬಳಗದವರು 20 ಮಂದಿ ಕರಸೇವಕರಿಗೆ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಪುಷ್ಪವೃಷ್ಟಿ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸಿಕೊಂಡರು.

ಡಾ.ಮೋಹನ್ ಮಾತನಾಡಿ ‘ಇದೊಂದು ಐತಿಹಾಸಿಕ ಭಾರತೀಯರು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗಬೇಕು ಎಂಬುವುದು ಪ್ರತಿಯೊಬ್ಬ ಭಾರತೀಯ ಕನಸಾಗಿದ್ದು ಇದಕ್ಕಾಗಿ ಬಹಳ ದೊಡ್ಡ ಹೋರಾಟವೇ ಆಗಿದೆ’ ಎಂದರು. 

ಈ ಹೋರಾಟದಲ್ಲಿ ಕರಸೇವಕರ ಶ್ರಮ ದೊಡ್ಡದು. ಚಾಮರಾಜನಗರದಿಂದಲೂ ಅಯೋಧ್ಯೆಗೆ ಕರಸೇವೆ ತೆರಳಿದ್ದರು ಎಂಬುದು ಹೆಮ್ಮೆಯ ವಿಚಾರ. ಅವರನ್ನು ಗೌರವಿಸುವುದಕ್ಕೆ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ’ ಎಂದರು. 

ಬಳಗದ ಅಧ್ಯಕ್ಷ ಕುರುಬಹುಂಡಿ ಲೋಕೇಶ್ ಕಾಡಹಳ್ಳಿ ಕುಮಾರ್ ಚಂದ್ರಶೇಖರ್ ಕುಲಗಾಣ ಶಾಂತಮೂರ್ತಿ ಸುಂದರರಾಜ್ ಹೇಮಂತ್ ಮಂಜುನಾಥ್‌ಗೌಡ ಸುದರ್ಶನಗೌಡ ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್ ಇತರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT