ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗಳು ಸಾರ್, ಗುಂಡಿಗಳು... ಸವಾರರೇ ಜೋಕೆ!

ಮಳೆ, ನೆರೆ ಪರಿಣಾಮ; ಜನರು ಹೈರಾಣ, ರಸ್ತೆ ದುರಸ್ತಿಗೆ ಸ್ಥಳೀಯರ ಒತ್ತಾಯ
Last Updated 15 ಸೆಪ್ಟೆಂಬರ್ 2022, 22:30 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿವೆ. ಬಹುತೇಕ ರಸ್ತೆಗಳಲ್ಲಿ ನೀರು ಹರಿದಿದೆ. ನೀರು ನಿಂತು ರಸ್ತೆಗಳು ಗುಂಡಿ ಬಿದ್ದಿದ್ದು, ಸವಾರರನ್ನು ಹೈರಾಣಾಗಿಸಿದೆ.

ಪಟ್ಟಣದ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಡುವೆಯೂ ಹಳ್ಳಗಳು ಕಣ್ಣು ಬಿಟ್ಟಿವೆ. ಗ್ರಾಮೀಣ ಹಾದಿಗಿಳಿದರೆ ಬರೀ ಗುಂಡಿಗಳೇ ಕಣ್ಣಿಗೆ ರಾಚುತ್ತವೆ. ಯಾವ ಕಡೆ ವಾಹನ ತಿರುಗಿಸಲು ಪ್ರಯತ್ನಿಸಿದರೂ ಅಲ್ಲೊಂದು ಗುಂಡಿ! ಇದರಿಂದ ವಾಹನ ಸವಾರರು, ಗ್ರಾಮೀಣ ಜನರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಮುಂದೆ ಗುಂಡಿಗಳು ಇವೆ ಎಂದು ಬರೆಸಬೇಕಾದ ತುರ್ತು ಎದುರಾಗಿದೆ.

ಬಿಳಿಗಿರಿರಂಗನಬೆಟ್ಟ– ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಹಲವಾರು ಗುಂಡಿ ಬಿದ್ದಿವೆ. ಡಾಂಬರು ರಸ್ತೆಯ ಮೇಲೆ ಮಣ್ಣು ಹರಡಿದೆ. ಹಳ್ಳ ಬಿದ್ದ ರಸ್ತೆಯಲ್ಲಿ ಸವಾರರು ಗಂಡಾಗುಂಡಿಯಿಂದ ವಾಹನ ಓಡಿಸಬೇಕಿದೆ. ಕಾರಿನ ತಳಭಾಗ ಹಳ್ಳಕ್ಕೆ ಸಿಲುಕಿ ವಾಹನಕ್ಕೆ ಹಾನಿಯೂ ಆಗುತ್ತಿದೆ.

ಕೆಲವೆಡೆ ಡಾಂಬರು ಕಿತ್ತು ಬಂದಿದ್ದು, ಅಪಘಾತಕ್ಕೆ ಆಹ್ವಾನಿಸುತ್ತಿದೆ. ಈ ದಾರಿಗಳಲ್ಲಿ ಸವಾರರು ಶಾಪ ಹಾಕುತ್ತಲೇ ವಾಹನ ಚಲಾಯಿಸುತ್ತಿದ್ದಾರೆ. ಬಿದ್ದು, ಎದ್ದು ಹೋಗುವವರು ಇದ್ದಾರೆ. ಜೋರಾಗಿ ವಾಹನ ಇಳಿಸಿದರೆ ಮತ್ತೊಂದು ಗಾಡಿಗೆ ಕೆಸರಿನ ಅಭಿಷೇಕವೂ ಆಗುತ್ತದೆ.

‘ಗ್ರಾಮೀಣ ಮತ್ತು ಪಟ್ಟಣದ ರಸ್ತೆ ಮದ್ಯದಲ್ಲಿ ಕುಳಿಗಳು ಬಿದ್ದಿವೆ. ಕಲ್ಲು ಕಿತ್ತು ಮೇಲೆ ಬಂದಿದೆ. ದ್ವಿಚಕ್ರ ವಾಹನ ಓಡಿಸುವುದೇ ಸವಾಲಾಗಿದೆ. ರಸ್ತೆ ನಿರ್ವಹಣೆ ಮಾಡುವ ಬಗ್ಗೆ ಯಾರಿಗೂ ಜವಾಬ್ದಾರಿ ಇಲ್ಲ. ಸಾರ್ವಜನಿಕರ ಪರದಾಟಕ್ಕೆ ಮುಕ್ತಿ ದೊರೆಯುವುದು ಯಾವಾಗ’ ಎಂದು ಕೊಮಾರನಪುರದ ನಂಜಯ್ಯ ಪ್ರಶ್ನಿಸಿದರು.

‘ರಸ್ತೆಯಲ್ಲಿ ನೋಡಿದಲ್ಲೆಲ್ಲ ಗುಂಡಿಗಳು ಬಿದ್ದಿವೆ. ಸೇತುವೆ ರಸ್ತೆ ಸವೆದು ಹೋಗಿದೆ. ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆ ನಿಂತ ಮೇಲಾದರೂ ರಸ್ತೆ ದುಃಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಿ ಜೀವ ಹಾನಿ ತಪ್ಪಿಸಲಿ’ ಎಂದು ಪಟ್ಟಣದ ಬಂಗಾರು ಆಗ್ರಹಿಸಿದರು.

ಸೇತುವೆ ಬಳಿ ಭೂ ಕುಸಿತ:ತಾಲ್ಲೂಕಿನ ಮದ್ದೂರು ಬಳಿಯ ಮಹದೇಶ್ವರ– ಮಹಾಲಕ್ಷ್ಮಿ ದೇವಾಲಯ ಸಂಪರ್ಕಿಸುವ ಸೇತುವೆ ಬಳಿ ಭೂ ಕುಸಿತ ಉಂಟಾಗಿದೆ. ಈ ಭಾಗದ ಗ್ರಾಮಗಳಿಗೆ ಸಂಚಾರ ನಿಷೇಧಿಸಲಾಗಿದೆ. ಆದರೂ, ಜನರ ಓಡಾಟ ನಿಂತಿಲ್ಲ.

‘ಸುವರ್ಣಾವತಿ ನದಿಯಲ್ಲಿ ನೆರೆ ನೀರು ಹರಿಯುತ್ತಿದ್ದು, ಸೇತುವೆಯ ಒಂದು ಪಾರ್ಶ್ವದಲ್ಲಿ ಭೂಭಾಗ ಕುಸಿದಿದೆ. ಈ ಸ್ಥಳದಲ್ಲಿ ಹಳದಿ ಟೇಪು ಸುತ್ತಿ ಅಪಾಯದ ಸೂಚನೆ ನೀಡಲಾಗಿದೆ. ಶೀಘ್ರ ದುರಸ್ತಿ ಕೈಗೊಳ್ಳದಿದ್ದರೆ ಸೇತುವೆಗೆ ಹಾನಿಯಾಗಲಿದೆ’ ಎಂದು ಮದ್ದೂರು ಸುಬ್ಬಣ್ಣ ಹೇಳಿದರು.

‘ದುರಸ್ತಿಗೆ ಅಂದಾಜು ಪಟ್ಟಿ ತಯಾರಿಕೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಕೆ.ಪಿ.ಆನಂದಪ್ಪನಾಯಕ, ‘ಜಡಿ ಮಳೆಯಿಂದ ಹದಗೆಟ್ಟಿರುವ ರಸ್ತೆಗಳ ದುರಸ್ತಿಗಾಗಿ ಅಂದಾಜು ಪಟ್ಟಿ ತಯಾರಿಸಲು ಜಿಲ್ಲಾಧಿಕಾರಿ ಮಾಹಿತಿ ಕೇಳಿದ್ದಾರೆ. ಲೋಕೋಪಯೋಗಿ ಸೇರಿದಂತೆಸಂಬಂಧಪಟ್ಟ ಇಲಾಖೆಗಳ ಎಂಜಿನಿಯರ್‌ಗಳಿಂದ ವರದಿ ಪಡೆಯುವಂತೆ ಈಗಾಗಲೇ ಸೂಚಿಸಿದ್ದಾರೆ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT