ಬುಧವಾರ, ಜೂನ್ 3, 2020
27 °C
ಮಲೆ ಮಹದೇಶ್ವರ ವನ್ಯಧಾಮ: ತನಿಖೆ ಚುರುಕುಗೊಳಿಸಿದ ಅರಣ್ಯ ಇಲಾಖೆ

ಹನೂರು: ಗಂಧದ ಮರ ಕಳ್ಳತನದ ಸುತ್ತ ಅನುಮಾನ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ನಡೆದ ಗಂಧದ ಮರಗಳ ಕಳ್ಳತನ ಪ್ರಕರಣದ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ಚುರುಕುಗೊಳಿಸಿದೆ. 

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯ ಎರಡನೇ, ಮೂರನೇ, ಐದನೇ, ಆರನೇ, ಎಂಟನೇ ಹಾಗೂ 10ನೇ ತಿರುವುಗಳಲ್ಲಿದ್ದ ಏಳರಿಂದ 12 ವರ್ಷಗಳಷ್ಟು ವಯಸ್ಸಿನ ಏಳು ಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಲಾಗಿತ್ತು. ಶ್ರೀಗಂಧ ಕಳ್ಳರು ಒಂದೆರಡು ಮರಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರೆ, ಉಳಿದವುಗಳನ್ನು ಹೊತ್ತೊಯ್ದಿದ್ದರು. ಐದಾರು ದಿನಗಳ ಬಳಿಕ ಕಳ್ಳತನ ನಡೆದಿರುವುದು ಪತ್ತೆಯಾಗಿತ್ತು. 

ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯರಸ್ತೆಯಲ್ಲೇ ಮರಗಳು ಕಳ್ಳತನವಾಗಿರುವುದರಿಂದ ಈ ಪ್ರಕರಣ ಹಲವರ ಹುಬ್ಬೇರುವಂತೆ ಮಾಡಿದೆ. ರಸ್ತೆ ಬದಿಯಲ್ಲೇ ನಡೆದಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಳ್ಳತನ ನಡೆದಿರುವುದು ಯಾಕೆ ಗೊತ್ತಾಗಲಿಲ್ಲ? ಲಾಕ್‌ಡೌನ್‌ ಅವಧಿಯಲ್ಲಿ ವಾಹನಗಳ ಹಾಗೂ ಜನರ ಸಂಚಾರ ಇಲ್ಲದಿರುವುದರಿಂದ ಸಿಬ್ಬಂದಿ ಕರ್ತವ್ಯ ಪಾಲನೆಯಲ್ಲಿ ಎಡವಿದರೇ? ಅಥವಾ ಅವರ ಪಾತ್ರವೂ ಇದೆಯೇ ಎಂಬ ಪ್ರಶ್ನೆಗಳನ್ನು ಪರಿಸರ ಪ್ರೇಮಿಗಳು ಕೇಳುತ್ತಿದ್ದಾರೆ.  

ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಮಂಗಳವಾರ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಘಟನೆ ನಡೆದ ಸ್ಥಳಕ್ಕೆ ಮಹಜರು ನಡೆಸಿ ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿದ್ದು, ಇದರ ಆಧಾರದ ಮೇಲೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಅಧಿಕಾರಿಗಳು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಈಚೆಗೆ ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡು ಗಂಡಾನೆ ಸೇರಿದಂತೆ ಮೂರು ಆನೆಗಳು ಮೃತ‍ಪಟ್ಟಿದ್ದವು. ಗಂಡಾನೆಗಳು ಮೃತಪಟ್ಟು 20 ದಿನಗಳ ನಂತರ ಅವುಗಳ ಅವಶೇಷ ಪತ್ತೆಯಾಗಿದ್ದವು. ಇದರ ತನಿಖೆಯಲ್ಲಿ ಅರಣ್ಯಾಧಿಕಾರಿಗಳು ನಿರತರಾಗಿದ್ದರು. ಸುಡು ಬೇಸಿಗೆಯಾಗಿರುವುದರಿಂದ ಸಿಬ್ಬಂದಿ ಬೆಂಕಿ ಕಾವಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರವು ಇಲ್ಲ. ಈ ಸಮಯವನ್ನು ನೋಡಿಕೊಂಡು ಮರಗಳ್ಳರು ಗಂಧದ ಮರಗಳನ್ನು ಕದ್ದಿದ್ದಾರೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಪ್ರಕರಣದಲ್ಲಿ ಸಿಬ್ಬಂದಿಯ ಪಾತ್ರ ಇರುವ ಸಾಧ್ಯತೆಯನ್ನು ಹಿರಿಯ ಅಧಿಕಾರಿಗಳು ತಳ್ಳಿ ಹಾಕುತ್ತಾರೆ. ಸಿಬ್ಬಂದಿಗೆ ಮರ ಕಡಿಯಬೇಕೆಂದಿದ್ದರೆ, ಕಾಡೊಳಗೆ ಇರುವ ದೊಡ್ಡ ಮರವನ್ನೇ ಕಡಿಯಬಹುದಿತ್ತು. ಪ್ರಯೋಜನಕ್ಕೆ ಬಾರದ ಸಣ್ಣ ಗಿಡಗಳನ್ನು ಕಡಿಯುತ್ತಿರಲಿಲ್ಲ. ಈ ಭಾಗದಲ್ಲೆಲ್ಲ ಸಿಬ್ಬಂದಿಯೇ ಗಸ್ತು ತಿರುಗುತ್ತಿರುತ್ತಾರೆ. ಹಾಗಾಗಿ, ಅವರು ಕಡಿಯುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ ಅವರು.

ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ಹೀಗೆ ಮಾಡಿರುವ ಸಾಧ್ಯತೆಯೂ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಸಮಗ್ರ ತನಿಖೆ–ಡಿಸಿಎಫ್‌

‘ಗಂಧದ ಮರಗಳ್ಳರ ಬಗ್ಗೆ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಇದರ ಆಧಾರದ ಮೇಲೆ ಕಾರ್ಯಚರಣೆ ಆರಂಭಿಸಿದ್ದೇವೆ. ಸಾಮಾನ್ಯವಾಗಿ ಕಳ್ಳತನವಾದಂತಹ ಗಾತ್ರದ ಮರಗಳು ಯಾವ ಉಪಯೋಗಕ್ಕೂ ಬರುವುದಿಲ್ಲ. ಹೀಗಾದರೂ ಮರಗಳನ್ನು ಕಡಿದಿರುವ ಉದ್ದೇಶ ಏನಿರಬಹುದು ಎಂಬುದರ ಬಗ್ಗೆ ಬಗ್ಗೆ ತನಿಖೆ ನಡೆಸಲು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಆದೇಶಿಸಲಾಗಿದೆ. ಮರಗಳನ್ನು ಕಡಿದ ಬಳಿಕ ಅವುಗಳ ಗುರುತು ಪತ್ತೆಯಾಗಬಾರದು ಎಂದು ಮರದ ಬುಡಕ್ಕೆ ಬಂಡೆ ಕಲ್ಲುಗಳು ಹಾಗೂ ಮಣ್ಣು ಹಾಕಿ ಮುಚ್ಚಲಾಗಿತ್ತು. ಇದರಿಂದಾಗಿ ಇಲಾಖೆಗೆ ಮಾಹಿತಿ ಸಂಗ್ರಹಿಸಲು ತಡವಾಯಿತು ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

---

ಸಿಬ್ಬಂದಿ ಇಲ್ಲದಿರುವ ಸಮಯ ನೋಡಿ ಮರಗಳ್ಳರು ಈ ಕೆಲಸ ಮಾಡಿದ್ದಾರೆ. ಕೆಲವರ ಮೇಲೆ ಸಂಶಯ ಇದೆ. ಆರೋಪಿಗಳನ್ನು ಶೀಘ್ರ ಬಂಧಿಸುತ್ತೇವೆ
ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು