ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲು ಕೈತಪ್ಪುವ ಆತಂಕದಲ್ಲಿ ರೈತರು

ಸಂತೇಮರಹಳ್ಳಿಯಲ್ಲಿ ಉದ್ದು, ಅಲಸಂದೆ, ಹೆಸರು ಬೆಳೆಗೆ ರೋಗ
Last Updated 22 ಜೂನ್ 2018, 14:28 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಮುಂಗಾರು ಮಳೆ ಉತ್ತಮವಾಗಿ ಆರಂಭಗೊಂಡಿದ್ದರಿಂದ ಹರ್ಷಗೊಂಡಿದ್ದ ಹೋಬಳಿ ವ್ಯಾಪ್ತಿಯ ರೈತರು ಇದೀಗ ತಮ್ಮ ಬೆಳೆಗಳಿಗೆ ಅಂಟಿರುವ ರೋಗದಿಂದ ಕಂಗಾಲಾಗಿದ್ದಾರೆ. ಬೆಳೆಗಳುಹೂಬಿಡುವ ಸಮಯದಲ್ಲಿಯೇ ಕಮರಿ ಹೋಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ.

ಈ ಬಾರಿ ಉತ್ತಮ ಮಳೆಯಾಗಿದ್ದರಿಂದರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರವೂ ಉತ್ತಮ ಮಳೆಯಾಗಿದ್ದರಿಂದ ಫಸಲು ಚೆನ್ನಾಗಿ ಬಂದಿದೆ. ಆದರೆ, ಬೆಳೆಗಳು ಹೂ ಬಿಟ್ಟು ಕಾಳು ಕಟ್ಟುವ ಸಮಯದಲ್ಲಿ ರೋಗ ಕಾಣಿಸಿಕೊಂಡಿರುವುದರಿಂದ ಫಸಲು ರೈತರ ಕೈಸೇರುವ ಲಕ್ಷಣಗಳು ಕಾಣುತ್ತಿಲ್ಲ.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 3,000 ಎಕರೆ ಪ್ರದೇಶದಲ್ಲಿ ಉದ್ದು, ಹೆಸರು, ಅಲಸಂದೆ ಮತ್ತು ಸೂರ್ಯಕಾಂತಿಯನ್ನು ಬಿತ್ತನೆ ಮಾಡಿದ್ದಾರೆ. ಉದ್ದು, ಹೆಸರು ಬೆಳೆಗಳಲ್ಲಿ ಹಳದಿ ನಂಜುರೋಗ ಕಾಣಿಸಿಕೊಂಡಿದೆ. ಅಲಸಂದೆ ಕಾಂಡವನ್ನು ಸಣ್ಣ ಕೀಟಗಳು ಆವರಿಸಿ ರಸ ಹೀರುತ್ತಿವೆ. ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಬೆಳೆಗಳಲ್ಲಿ ಕಾಳು ಬಿಡುವ ಲಕ್ಷಣಗಳು ಕಾಣುತ್ತಿಲ್ಲ.

ಹೋಬಳಿ ವ್ಯಾಪ್ತಿಯ ಕೆಂಪನಪುರ, ರೇಚಂಬಳ್ಳಿ, ಉಮ್ಮತ್ತೂರು, ಕುದೇರು, ದೇಮಹಳ್ಳಿ, ಹೆಗ್ಗವಾಡಿ, ಹೆಗ್ಗವಾಡಿಪುರ ಹಾಗೂ ದೇಶವಳ್ಳಿಗೆ ಸೇರಿದ ಜಮೀನುಗಳಲ್ಲಿ ವ್ಯಾಪಕವಾಗಿ ಈ ರೋಗಗಳು ಹರಡಿವೆ.

ಸಮಸ್ಯೆಯ ಪರಿಹಾರಕ್ಕಾಗಿ ರೈತರು ರೈತಸಂಪರ್ಕ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ಕೃಷಿ ಅಧಿಕಾರಿಗಳು ಕೃಷಿ ವಿಜ್ಞಾನಿಗಳೊಂದಿಗೆ ಜಮೀನುಗಳಿಗೆ ತೆರಳಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.

ಒಂದು ಎಕರೆಯಲ್ಲಿ ಬೆಳೆ ತೆಗೆಯಲು ₹10 ಸಾವಿರದಿಂದ ₹15 ಸಾವಿರದವರೆಗೆ ಖರ್ಚಾಗಿದೆ. ಕೃಷಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಸರ್ಕಾರದಿಂದ ಪ್ರತಿ ಎಕರೆಗೆ ನಷ್ಟ ಪರಿಹಾರ ತುಂಬಿ ಕೊಡಬೇಕು ಎಂದು ರೈತರಾದ ರಾಜಣ್ಣ, ಚೌಡಯ್ಯ ಒತ್ತಾಯಿಸಿದ್ದಾರೆ.

ರೋಗ ನಿಯಂತ್ರಿಸಬಹುದು

ಹಳದಿ ನಂಜುರೋಗವು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತದೆ. ಒಂದು ಗಿಡ ಹಳದಿ ಬಣ್ಣದಲ್ಲಿಕಾಣಿಸಿಕೊಂಡಾಗ ಆ ಗಿಡವನ್ನು ಕಿತ್ತುಹಾಕಬೇಕು. ಜಮೀನಿನ ತುಂಬ ರೋಗ ಹರಡಿದ್ದರೆ 1 ಲೀಟರ್ ನೀರಿಗೆ ಅರ್ಧ ಎಂಎಲ್ ಹಿಮಿಡಾ ಕ್ಲೋಪಿಡ್ ರಾಸಾಯನಿಕವನ್ನು ಬೆರೆಸಿ ಬೆಳೆಗಳಿಗೆ ಸಿಂಪಡಿಸಿದಾಗ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಈ ಕೆಲಸವನ್ನು ರೈತರು ತಕ್ಷಣ ಮಾಡಬೇಕು ಎಂದು ಕೀಟತಜ್ಞ ಶಿವರಾಯನಾವಿ ಸಲಹೆ ನೀಡಿದರು.

ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT