ಭಾನುವಾರ, ಜನವರಿ 24, 2021
19 °C

ಪಾಕಿಸ್ತಾನ ಪರ ಘೋಷಣೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದಕ್ಷಿಣ ಕನ್ನಡದ ಉಜಿರೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ನೈಜ ಆರೋಪಿಯನ್ನು ಬಂಧಿಸಿ ಅಮಾಯಕರನ್ನು ಬಿಡುಗಡೆಗೊಳಿಸಿ ಪ್ರಕರಣ ವಾಪಸ್ ಪಡೆಯುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ನಗರದ ಲಾರಿ ನಿಲ್ದಾಣದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಅಲ್ಲಿಂದ ಡೀವಿ‌ಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕಲೀಲ್ ‌ಉಲ್ಲಾ ಅವರು ಮಾತನಾಡಿ, ‘ಡಿ.30ರಂದು ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದ ದಿನ ಉಜಿರೆಯ ಮತಕೇಂದ್ರದ ಹೊರಗಡೆ ಪಾಕಿಸ್ತಾನ ಪರ ಘೋಷಣೆಯನ್ನು ಕೂಗಲಾಗಿದೆ ಎಂದು ಒಂದು ಮಾಧ್ಯಮ ವರದಿ ಮಾಡುತ್ತಲೇ ರಾಜ್ಯದಾದ್ಯಂತ ಬಿಜೆಪಿ ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಪೋಲಿಸರು ಅಮಾಯಕರನ್ನು ಬಂಧಿಸಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದು, ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಅಮಾಯಕನ್ನು ಬಂಧಿಸಿದ್ದಾರೆ’ ಎಂದು ಆರೋಪಿಸಿದರು. 

‘ಎಸ್‌ಡಿಪಿಐ ಕಾರ್ಯಕರ್ತರು ತಾವು ಘೋಷಣೆ ಕೂಗಿಲ್ಲ ಎಂಬುದನ್ನು ದಾಖಲೆ ಸಮೇತ ನೀಡಿದ್ದರೂ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಅದ್ಯಾವುದನ್ನೂ ಪರಿಗಣಿಸಿಲ್ಲ. ಆದರೆ ಇದೀಗ ಬಿಜೆಪಿಗರೇ ಪಾಕಿಸ್ತಾನದ ಪರ ಘೋಷಣೆ ಕೂಗುವ ವಿಡಿಯೋ ವೈರಲ್ ಆಗುತ್ತಿದ್ದು ಸಂಘಿಗಳ ನಿಜ ಬಣ್ಣ ಬಯಲಾಗುತ್ತಿದೆ. ಆದ್ದರಿಂದ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ನಿಜವಾದ ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಮೀಉಲ್ಲಾ, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ನಗರಸಭಾ ಸದಸ್ಯ ಮೊಹಮ್ಮದ್‌ಅಮೀಕ್, ಮುಖಂಡರಾದ ಸಿ.ಎಸ್.ಸೈಯದ್‌ಆರೀಫ್, ಪಿ.ಸಂಘಸೇನಾ, ಸಿ.ಎಂ.ಶಿವಣ್ಣ, ಪಿಎಫ್‌ಐನ  ಕಫೀಲ್‌ಅಹಮದ್, ಇಸ್ರಾರ್, ಕಿಜರ್‌ಅಹಮದ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.