ಶನಿವಾರ, ಜನವರಿ 18, 2020
21 °C
ಮಂಗಳೂರು ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಪ್ರಕರಣ

ಪೊಲೀಸ್‌ ಆಯುಕ್ತರ ವಜಾಕ್ಕೆ ಎಸ್‌ಡಿಪಿಐ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಹೋರಾಟ, ಪ್ರತಿಭಟನೆ ವೇಳೆ ಪೊಲೀಸರು ನಡೆಸಿರುವ ಗೋಲಿಬಾರ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಳ್ಳಲು ಅಲ್ಲಿನ ಪೊಲೀಸ್‌ ಆಯುಕ್ತರೇ ಕಾರಣ. ರಾಜ್ಯ ಸರ್ಕಾರ ತಕ್ಷಣ ಅವರನ್ನು ವಜಾಗೊಳಿಸಬೇಕು’ ಎಂದು ಎಸ್‌ಡಿಪಿಐ ಜಿಲ್ಲಾ ಘಟಕ ಆಗ್ರಹಿಸಿದೆ.

‘ಸಂವಿಧಾನ ವಿರೋಧಿ ಎನ್‌ಆರ್‌ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಈಗಾಗಲೇ ದೇಶದಾದ್ಯಂತ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಗೋಲಿಬಾರ್‌ ಮಾಡಿಸಿವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ಸೈಯದ್‌ ಆರೀಫ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

₹ 1 ಕೋಟಿ ಪರಿಹಾರ ನೀಡಿ: ಮಂಗಳೂರಿನಲ್ಲಿ ಗೋಲಿಬಾರ್ ನಡೆಸುವ ಸನ್ನಿವೇಶ ಇಲ್ಲದಿದ್ದರೂ ಪೊಲೀಸರು ಗೋಲಿಬಾರ್ ನಡೆಸಿರುವುದು ಖಂಡನೀಯ. ಅಲ್ಲಿನ ಪೊಲೀಸ್‌ ಆಯುಕ್ತ ಹರ್ಷ ಅವರನ್ನು ವಜಾಗೊಳಿಸಬೇಕು. ಮೃತಪಟ್ಟ ಇಬ್ಬರ ಕುಟುಂಬಕ್ಕೂ ₹ 1 ಕೋಟಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

₹ 25 ಲಕ್ಷ ಪರಿಹಾರ: ‘ಗೋಲಿಬಾರ್‌ ವೇಳೆ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ಗಾಯಾಳುಗಳಿಗೆ ₹ 25 ಲಕ್ಷ ಪರಿಹಾರ ನೀಡಬೇಕು ಮತ್ತು ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಏನಯ್ಯ ಯಾರೂ ಸಾಯುತ್ತಿಲ್ಲ’: ‘ಮಂಗಳೂರಿನ ಗಲಭೆ ವೇಳೆ ಮೂರ್ನಾಲ್ಕು ಪೊಲೀಸರು ಪರಸ್ಪರ ಮಾತನಾಡಿಕೊಳ್ಳುತ್ತಾರೆ, ‘ಏನಯ್ಯ ಎಷ್ಟು ಗುಂಡು ಹೊಡೆದರೂ ಯಾರೂ ಸಾಯುತ್ತಿಲ್ಲ’ ಎಂದು ಹೇಳಿಕೊಳ್ಳುವಂತಹ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಲ್ಲಿ ಪೊಲೀಸರ ಉದ್ದೇಶ ಏನಾಗಿತ್ತು’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಅಬ್ರಾರ್‌ ಅಹಮದ್‌ ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ನಗರಸಭಾ ಸದಸ್ಯರಾದ ಖಲೀಲ್‌ ಉಲ್ಲಾ, ತೌಸಿಯಾ ಬಾನು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು