ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ವಲಸೆ ಕಟ್ಟಡ ಕಾರ್ಮಿಕರಿಗಾಗಿ ‘ಶ್ರಮಿಕ ನಿವಾಸ’

Published 28 ಆಗಸ್ಟ್ 2023, 5:52 IST
Last Updated 28 ಆಗಸ್ಟ್ 2023, 5:52 IST
ಅಕ್ಷರ ಗಾತ್ರ

ಸೂರ್ಯನಾರಾಯಣ ವಿ.

ಚಾಮರಾಜನಗರ: ಜಿಲ್ಲೆಗೆ ಕೂಲಿ ಅರಸಿಕೊಂಡು ವಲಸೆ ಬರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಲು ಸುಸಜ್ಜಿತ ಮನೆಗಳು ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುತ್ತಿವೆ. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ‘ಶ್ರಮಿಕ ನಿವಾಸ’ ಎಂಬ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸುತ್ತಿದೆ.

₹4.57 ಕೋಟಿ ವೆಚ್ಚದ ಈ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಕೈಗಾರಿಕಾ ಪ್ರದೇಶದ 10.5 ಎಕರೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಕೆಲಸ  ಆರಂಭವಾಗಿದೆ. ಪಿಲ್ಲರ್‌ಗಳ ಕಾಮಗಾರಿ ನಡೆಯುತ್ತಿದೆ. 2024ರ ಡಿಸೆಂಬರ್‌ ವೇಳೆಗೆ ಮನೆಗಳು ಸಿದ್ಧವಾಗಲಿವೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕಾರ್ಮಿಕ ಕಲ್ಯಾಣ ಮಂಡಳಿಯ ಉಸ್ತುವಾರಿಯಲ್ಲೇ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ವಲಸೆ ಬರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರಯೋಜನವಾಗಲಿದೆ.
ಎಂ.ಸವಿತ, ಜಿಲ್ಲಾ ಕಾರ್ಮಿಕ ಅಧಿಕಾರಿ

ಮನೆ ಮತ್ತು ಡಾರ್ಮೆಟರಿ: ಮನೆಗಳು ಮಾತ್ರವಲ್ಲದೆ ಡಾರ್ಮೆಟರಿಗಳನ್ನೂ ನಿರ್ಮಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ ಮಾದರಿಯಲ್ಲಿ ಒಂದು ಮಲಗುವ ಕೋಣೆಯ (1ಬಿಎಚ್‌ಕೆ) 12 ಮನೆಗಳ ಎರಡು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 24 ಮನೆಗಳಿದ್ದು, ವಲಸೆ ಕಟ್ಟಡ ಕಾರ್ಮಿಕರ ಕುಟುಂಬಗಳು ವಾಸ್ತವ್ಯ ಹೂಡಬಹುದು. 

ಇದಲ್ಲದೇ ತಲಾ 80 ಕಾರ್ಮಿಕರಿಗೆ ಉಳಿದುಕೊಳ್ಳಬಹುದಾದ ಎರಡು ಡಾರ್ಮೆಟರಿಗಳನ್ನೂ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಎರಡು ಮಹಡಿಗಳನ್ನು ಡಾರ್ಮಿಟರಿಯಾಗಿ ರೂಪಿಸಲಾಗುತ್ತಿದೆ. ಒಟ್ಟು 160 ಮಂದಿ ಕಾರ್ಮಿಕರಿಗೆ ಇದರ ಪ್ರಯೋಜನ ಸಿಗಲಿದೆ. 

ಇದಲ್ಲದೆ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿ ಮತ್ತು ಭದ್ರತಾ ಸಿಬ್ಬಂದಿ ಕೊಠಡಿಗಳೂ ಕಟ್ಟಡದ ಭಾಗವಾಗಿರಲಿವೆ. 

ಬೆಂಗಳೂರು ಬಿಟ್ಟರೆ ಜಿಲ್ಲೆಯಲ್ಲಿ ಮಾತ್ರ: ‘ರಾಜಧಾನಿ ಬೆಂಗಳೂರಿನಲ್ಲಿ ವಲಸೆ ಕಟ್ಟಡ ಕಾರ್ಮಿಕರಿಗಾಗಿ ತಾತ್ಕಾಲಿಕ ವಸತಿ ವ್ಯವಸ್ಥೆ ಇದೆ.  ಅಲ್ಲಿ ಬಿಟ್ಟರೆ ಇಂತಹ ಸೌಲಭ್ಯವನ್ನು ಇಡೀ ರಾಜ್ಯದಲ್ಲೇ ಸದ್ಯ ನಮ್ಮ ಜಿಲ್ಲೆಯಲ್ಲಿ ಮಾತ್ರ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಸವಿತ ‘ಪ್ರಜಾವಾಣಿ’ಗೆ ತಿಳಿಸಿದರು. 

ಮೈಸೂರು ಜಿಲ್ಲೆಗೂ ಯೋಜನೆ ಮಂಜೂರಾಗಿದ್ದು, ಅಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.  

‘ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ದೂರದ ಊರುಗಳಿಂದ ಬರುತ್ತಿರುತ್ತಾರೆ. ಅವರಿಗೆ ಸಮರ್ಪಕ ವಸತಿ ವ್ಯವಸ್ಥೆ ಇರುವುದಿಲ್ಲ. ಖಾಲಿ ಜಾಗಗಳಲ್ಲಿ ಟಾರ್ಪಲ್‌ ಅಥವಾ ಗುಡಿಸಲು ಹಾಕಿ ಕುಟುಂಬ ಸಮೇತ ವಾಸವಿರುತ್ತಾರೆ. ಅಂತಹವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ‘ಶ್ರಮಿಕ ನಿವಾಸ’ ಯೋಜನೆಯನ್ನು ಸರ್ಕಾರ ರೂಪಿಸಿದೆ’ ಎಂದು ಸವಿತ ಹೇಳಿದರು. 

ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸದ್ಯ ಕೈಗಾರಿಕೆಗಳು ಬರುತ್ತಿದ್ದು, ಕಟ್ಟಡ ನಿರ್ಮಾಣ ಕಾರ್ಯಗಳು ಹೆಚ್ಚುತ್ತಿವೆ. ಹೊರ ಊರುಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಈ ಮನೆಗಳಿಂದ ಅನುಕೂಲವಾಗಲಿದೆ ಎಂಬುದು ಇಲಾಖೆಯ ಅಧಿಕಾರಿಗಳ ಹೇಳಿಕೆ. 

ಇದು ತಾತ್ಕಾಲಿಕ ವ್ಯವಸ್ಥೆ

‘ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶದ ಯೋಜನೆ ಇದಲ್ಲ. ಸ್ಥಳೀಯ ಕಟ್ಟಡ ಕಾರ್ಮಿಕರಿಗೂ ಅಲ್ಲ. ವಲಸೆ ಬಂದವರಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ. ವಲಸೆ ಕಾರ್ಮಿಕರು ಕೆಲಸದ ಉದ್ದೇಶಕ್ಕೆ ಬೇರೆ ಬೇರೆ ಕಡೆಗೆ ಹೋಗುತ್ತಾರೆ. ಕಾರ್ಮಿಕರು ಇಲ್ಲಿಂದ ಬೇರೆ ಕಡೆ ಹೋದಾಗ ಈ ಮನೆ ಮತ್ತು ಡಾರ್ಮೆಟರಿಗಳಲ್ಲಿ ಹೊಸ ಕಾರ್ಮಿಕರು ಆಶ್ರಯ ಪಡೆಯಲಿದ್ದಾರೆ. ವ್ಯವಸ್ಥೆಗೆ ಅಲ್ಪ ಪ್ರಮಾಣದ ಶುಲ್ಕವೂ ಇರುವ ಸಾಧ್ಯತೆ ಇದೆ’ ಎಂದು ಸವಿತ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT