ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ; ರಾಧಾಕೃಷ್ಣರ ವೇಷದಲ್ಲಿ ಕಂಗೊಳಿಸಿದ ಚಿಣ್ಣರು

ರಾಧಾ ಕೃಷ್ಣರ ವೇಷದಲ್ಲಿ ಕಂಗೊಳಿಸಿದ ಚಿಣ್ಣರು, ಪೋಷಕರ ಸಂಭ್ರಮ
Last Updated 19 ಆಗಸ್ಟ್ 2022, 15:58 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಸಂಭ್ರಮದಿಂದ ಆಚರಿಸಲಾಯಿತು.

ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತಾಲ್ಲೂಕಿನ ಹರದನಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯ ಸೇರಿದಂತೆ ಶ್ರೀಕೃಷ್ಣನ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಹಿಂದೂಗಳು ತಮ್ಮ ಮನೆಗಳಲ್ಲಿ ಸರಳವಾಗಿ ಅಷ್ಟಮಿ ಆಚರಣೆ ಮಾಡಿದರು.

ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಕೃಷ್ಣ, ರಾಧೆಯರ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸಿದರು.ಕೃಷ್ಣನ ವಿಗ್ರಹಗಳಿಗೆ ಪೂಜೆ ಸಲ್ಲಿಸಿ, ವಿವಿಧ ಚಕ್ಕುಲಿ, ಕೋಡುಬಳೆ ಮುಂತಾದ ತಿಂಡಿ, ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು. ಮಧ್ಯಾಹ್ನ ಸಿಹಿಯೂಟ ಸವಿದರು.

ನಗರದ ಜೋಡಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ವಿವಿ ಸಂಚಾಲಕಿ ದಾನೇಶ್ವರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜನ್ಮಾಷ್ಟಮಿ ಅಂಗವಾಗಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ರಾಧಾಕೃಷ್ಣರ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದರು. 17ಕ್ಕೂ ಹೆಚ್ಚು ಮಕ್ಕಳು ರಾಧೆ ಹಾಗೂ ಕೃಷ್ಣರ ವೇಷದಲ್ಲಿ ಮಿಂಚಿದರು.

ಶ್ರೀಕೃಷ್ಣನ ಉತ್ಸವ: ತಾಲ್ಲೂಕಿನ ಹರದನಹಳ್ಳಿಯ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು. ಶ್ರೀಕೃಷ್ಣ ಜನ್ಮದಿನದ ಅಂಗವಾಗಿ ಶ್ರೀಕೃಷ್ಣ ದೇವರ ಉತ್ಸವ ನೆರವೇರಿತು.

ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಹೊರಟ ಕೃಷ್ಣದೇವರ ಮೂರ್ತಿಯ ಉತ್ಸವ, ರಥದ ಬೀದಿ ಮಾರ್ಗವಾಗಿ ಕಲ್ಯಾಣಿ ಕೊಳದವರೆಗೆ ಸಾಗಿತು. ಅಲ್ಲಿ ಪೂಜೆ ನೆರವೇರಿಸಿ, ಪುನಃ ದೇವಸ್ಥಾನದವರೆಗೆ ಉತ್ಸವ ನಡೆಸಲಾಯಿತು. ನಂತರ ಪ್ರಸಾದ ವಿನಿಯೋಗ ನಡೆಯಿತು.ವಿವೇಕಾನಂದ ಪಾಠ ಶಾಲೆಯ ಮಕ್ಕಳು, ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT