ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸ ಪ್ರಸಾದ್‌ ಬರೀ ರಾಜಕಾರಣಿಯಲ್ಲ, ವಿಚಾರವಾದಿ–ಮೂಡ್ನಾಕೂಡು ಚಿನ್ನಸ್ವಾಮಿ

Published 15 ಮೇ 2024, 4:41 IST
Last Updated 15 ಮೇ 2024, 4:41 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶ್ರೀನಿವಾಸ ಪ್ರಸಾದ್‌ ಅವರು ಯಾವ ಪಕ್ಷದಲ್ಲೇ ಇದ್ದರೂ ಸ್ವಾಭಿಮಾನಿಯಾಗಿದ್ದರು. ತಮ್ಮತನ ಉಳಿಸಿಕೊಂಡಿದ್ದರು. ಅವರು ಬಿಜೆಪಿ ಸೇರಿದ್ದರೂ, ಬಲಪಂಥೀಯರಾಗಿರಲಿಲ್ಲ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಮಂಗಳವಾರ ಹೇಳಿದರು.

ಅಂಬೇಡ್ಕರ್‌ ಸಂಘಟನೆಗಳ ಒಕ್ಕೂಟ ಮತ್ತು ವಿ.ಶ್ರೀನಿವಾಸ ಪ್ರಸಾದ್‌ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚಕ್ರವರ್ತಿ ವಿ.ಶ್ರೀನಿವಾಸ ಪ್ರಸಾದ್‌ ನಿಮಗಿದೋ ನಮ್ಮ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ರಾಜ್ಯ ರಾಜಕಾರಣದಲ್ಲಿ ದಲಿತ ಸಮುದಾಯದಲ್ಲಿ ಬಸವಲಿಂಗಪ್ಪ ನಂತರದ ದೊಡ್ಡ ನೇತಾರ ಶ್ರೀನಿವಾಸಪ್ರಸಾದ್‌. ಅಧಿಕಾರ ಮದ ಅವರ ತಲೆಗೆ ಹೋಗಲಿಲ್ಲ. ದೊಡ್ಡ ನಾಯಕರಾಗಿದ್ದರೂ ಜನ ಸಂಪರ್ಕದಲ್ಲಿ ಇದ್ದರು. ಅಂಬೇಡ್ಕರ್‌ವಾದಿಯಾಗಿದ್ದ ಅವರು ಜೀವನಪೂರ್ತಿ ಬುದ್ಧ, ಬಸವಣ್ಣನವರ ತತ್ವಗಳನ್ನು ಪಾಲಿಸಿದವರು’ ಎಂದು ಸ್ಮರಿಸಿದರು. 

‘ಶ್ರೀನಿವಾಸ ಪ್ರಸಾದ್‌ ಕೇವಲ ರಾಜಕಾರಣಿ ಅಲ್ಲ. ವಿಚಾರವಾದಿಯಾಗಿದ್ದರು. ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಓದಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿರುವ ಹಲವರು ರಾಜಕಾರಣಿಗಳಿದ್ದಾರೆ. ಆದರೆ, ಅವರು ಮಾತನಾಡುವಾಗ ಬರೀ ರಾಜಕೀಯವನ್ನೇ ಮಾತನಾಡುತ್ತಾರೆ. ಶ್ರೀನಿವಾಸ ಪ್ರಸಾದ್ ಅವರ ಭಾಷಣದಲ್ಲಿ ಸ್ಪಷ್ಟತೆ ಇತ್ತು. ವಿಚಾರವಾದ ಇರುತ್ತಿತ್ತು’ ಎಂದು ಹೇಳಿದರು.   

‘ಸಮಾಜದಲ್ಲಿರುವ ಅಸಮಾನತೆ ಮತ್ತು ಅಸ್ಪೃಶ್ಯತೆ ಪ್ರಸಾದ್‌ ಅವರನ್ನು ಬಹುವಾಗಿ ಕಾಡಿತ್ತು. ಅಸ್ಪೃಶ್ಯತೆ ದೂರವಾಗಿಸಲು ಹೋರಾಟ ನಡೆಯುತ್ತಿಲ್ಲವಲ್ಲ ಎಂದು ಪ್ರಸಾದ್ ಹೇಳುತ್ತಿದ್ದರು. ದೇವಸ್ಥಾನಕ್ಕೆ ಹೋಗುವುದನ್ನು ಬಿಡಿ, ಬುದ್ಧನಕಡೆಗೆ ಹೋಗಬೇಕು ಎಂದು ಅವರು ಹೇಳುತ್ತಿದ್ದರು’ ಎಂದು ಚಿನ್ನಸ್ವಾಮಿ ನೆನಪಿಸಿದರು. 

‘ಇಡೀ ದಲಿತ ಜನಾಂಗ ಬೌದ್ಧ ಧರ್ಮಕ್ಕೆ ಮತಾಂತರವಾಗಿರಬೇಕು ಎಂದು ಅವರ ಅಭಿಪ್ರಾಯವಾಗಿತ್ತು. ದೇಶದಲ್ಲಿರುವ ಶೇ 25 ದಲಿತರು ಬೌದ್ಧ ಧರ್ಮಕ್ಕೆ ಬಂದರೆ ನಮಗೂ ಒಳಿತು ಸಮಾಜಕ್ಕೂ ಒಳಿತು ಎಂದು ನಂಬಿದ್ದ ಅವರು ‘ಬುದ್ಧನೆಡೆಗೆ ಮರಳಿ ಮನೆಗೆ’ ಅಂದೋಲನ ರೂಪಿಸಿದ್ದರು’ ಎಂದು ಹೇಳಿದರು. 

‘ಶುದ್ಧ ಚಾರಿತ್ರ್ಯ ಹೊಂದಿದ್ದ ಅವರು ನೇರವಾದ ನುಡಿಗಳಲ್ಲಿ ಜನರನ್ನು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಅವರು ಪ್ರೇರಕರು ಮಾತ್ರವಲ್ಲ, ಮಾರ್ಗದರ್ಶಕರಾಗಿದ್ದರು. ಅವರ ಎಲ್ಲ ಮಾತುಗಳು ಸ್ಪಷ್ಟತೆಯಿಂದ ಕೂಡಿರುತ್ತಿದ್ದವು. ಡಾ.ಬಿ.ಆರ್‌.ಅಂಬೇಡ್ಕರ್ ನಮಗೆ ರಾಜಕೀಯ ನಾಯಕರಲ್ಲ; ಆಧ್ಯಾತ್ಮಿಕ ನಾಯಕ. ಶ್ರೀನಿವಾಸ ಪ್ರಸಾದ್ ಕೂಡ ಅಂಬೇಡ್ಕರ್ ಅವರಂತೆ ನಮಗೆ ಆಧ್ಯಾತ್ಮಿಕ ನಾಯಕ’ ಎಂದು ಆನಂದ್‌ ಹೇಳಿದರು. 

‘50 ವರ್ಷಗಳ ರಾಜಕೀಯ ಜೀವನದಲ್ಲಿ ಪ್ರಸಾದ್‌ ಅವರು ಒಂದು ವಿವಿಯಷ್ಟು ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಅವರು ಇನ್ನಷ್ಟು ಮಾಡಬಹುದಿತ್ತು. ಆದರೆ ಅವರು ಬೌದ್ಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು’ ಎಂದು ಬಣ್ಣಿಸಿದರು. 

ನಿವೃತ್ತ ಐಎಫ್‌ಎಸ್‌ ಅಧಿಕಾರಿ, ಬಿಜೆಪಿ ಮುಖಂಡ ಆರ್‌.ರಾಜು ಮಾತನಾಡಿದರು. ಕೊಳ್ಳೇಗಾಲದ ಚೇತವನ ಬೌದ್ಧ ವಿಹಾರದ ಮನೋರಖ್ಖಿತ ಬಂತೇಜಿ ಅಶೀರ್ವಚನ ನೀಡಿದರು.

ಶ್ರೀನಿವಾಸಪ್ರಸಾದ್ ಅಪ್ತರಾದ ಎಂ.ವೆಂಕಟಪತಿ ತಿರುಪ್ಪೂರ್, ನಗರಸಭಾ ಸದಸ್ಯ ಆರ್.ಎಂ. ರಾಜಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಅಭಿಮಾನಿ ಬಳಗದ ನಗರಸಭಾ ಮಾಜಿ ಸದಸ್ಯ ಬಸವರಾಜು, ರಂಗವಾಹಿನಿ ಅಧ್ಯಕ್ಷ ನರಸಿಂಹಮೂರ್ತಿ ಇತರರು ಇದ್ದರು. 

‘ತಂದೆಯ ಹಾದಿಯಲ್ಲಿ ಸಾಗುವೆ’

ಶ್ರೀನಿವಾಪ್ರಸಾದ್ ಹಿರಿಯ ಮಗಳು ಪ್ರತಿಮಾ ಪ್ರಸಾದ್ ಮಾತನಾಡಿ ‘ಚಾಮರಾಜನಗರ ನನ್ನ ತಂದೆಗೆ ರಾಜಕೀಯವಾಗಿ ಶಕ್ತಿ ನೀಡಿದ ಜಿಲ್ಲೆ. ಅವರಿಗೆ ಜಿಲ್ಲೆಯ ಜನರ ಬಗ್ಗೆ ಅಪಾರವಾದ ಪ್ರೀತಿ ಇತ್ತು. ಅವರ ಪಾರ್ಥೀವ ಶರೀರವನ್ನು ಇಲ್ಲಿಗೆ ತರಬೇಕಾಗಿತ್ತು. ವೈದ್ಯಕೀಯ ಕಾರಣದಿಂದಾಗಿ ಇದು ಸಾಧ್ಯವಾಗಲಿಲ್ಲ. ನಮ್ಮ ಕುಟುಂಬದ ಪರವಾಗಿ ಕ್ಷಮೆ ಕೋರುತ್ತೇನೆ. ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಮ್ಮ ಮನೆತನದ ಮೇಲಿರಲಿ. ನಮ್ಮ ತಂದೆಯವರ ಹಾದಿಯಲ್ಲಿ ನಾನು ಸಾಗಬೇಕೆಂದುಕೊಂಡಿದ್ದೇನೆ. ನಿಮ್ಮೆಲ್ಲರ ಆರ್ಶೀವಾದ ನಮ್ಮ ಮೇಲಿರಲಿ’ ಎಂದು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT