ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೇಶ್ವರರು ಮನುಕುಲದ ಉದ್ಧಾರಕ: ಸಚಿವ ಸಿ.ಪುಟ್ಟರಂಗಶೆಟ್ಟಿ ಬಣ್ಣನೆ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
Last Updated 31 ಜನವರಿ 2019, 14:52 IST
ಅಕ್ಷರ ಗಾತ್ರ

ಚಾಮರಾಜನಗರ: ‘12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಶಿವಯೋಗಿ ಸಿದ್ದರಾಮೇಶ್ವರರು ಮನುಕುಲದ ಉದ್ಧಾರಕ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಬಣ್ಣಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣ ಅವರಂತೆ ಸಿದ್ದರಾಮೇಶ್ವರರು ಕೂಡ ಕಾಯಕಯೋಗಿಯಾಗಿದ್ದರು. ಅವರ ವಚನಗಳಲ್ಲಿ ಕಾಯಕಕ್ಕೆ ಸಂಬಂಧಿಸಿದ ಸಂದೇಶಗಳೇ ಕಂಡು ಬರುತ್ತವೆ’ ಎಂದರು.

‘ಕೆರೆ ಕಟ್ಟೆ , ಬಾವಿಗಳು ನಿರ್ಮಿಸುವುದು, ಬಡ ಬಗ್ಗರಿಗೆ ಸಹಾಯ, ಶೋಷಿತರನ್ನು ಮೇಲಕ್ಕೆತಲು ಜೀವನಪೂರ್ತಿ ದುಡಿದ ಸಿದ್ದರಾಮೇಶ್ವರರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದರು’ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಮಾತನಾಡಿ, ‘12ನೇ ಶತಮಾನ ಸಮಾನತೆಯ ಶತಮಾನ. ಬಸವಾದಿ ಶರಣರಿದ್ದ ಆ ಶತಮಾನವು ಮನುಕುಲಕ್ಕೆ ಮಾದರಿಯಾಗಿರುವಂತಹದ್ದು. ಆ ಕಾಲದಲ್ಲಿ ಜಾತಿ, ಮತ ವರ್ಣವನ್ನು ಕಿತ್ತೊಗೆದು ತಮ್ಮ ವಚನಗಳು, ಕಾರ್ಯದ ಮೂಲಕ ಮಾನವತಾವಾದದ ಸಂದೇಶವನ್ನು ಸಾರಿದ ಮಹಾನ್‌ ಮಾನವತಾವಾದಿ ಶಿವಯೋಗಿ ಸಿದ್ದರಾಮೇಶ್ವರರು’ ಎಂದು ಹೇಳಿದರು.

‘ಸಿದ್ದರಾಮೇಶ್ವರರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ್ದರೂ, ಬಸವಣ್ಣ ಅವರ ಪ್ರಭಾವದಿಂದ ಬಸವ ಕಲ್ಯಾಣಕ್ಕೆ ಬ‌ಂದಿದ್ದರು. ಅಲ್ಲಿ ವಚನಕಾರ ಚೆನ್ನಬಸವಣ್ಣವರನ್ನು ಗುರುವಾಗಿ ಸ್ವೀಕರಿಸಿದ್ದರು. ಅಲ್ಲಮಪ್ರಭು, ಚೆನ್ನಬಸವಣ್ಣ ಅವರ ನಂತರ ಅನುಭವ ಮಂಟಪದ ಅಧ್ಯಕ್ಷರಾಗಿದ್ದರು’ ಎಂದು ಹೇಳಿದರು.

‘ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ 1994 ವಚನಗಳು ಲಭ್ಯವಿವೆ. ಅವರು ಹೆಣ್ಣನ್ನು ಗೌರವಿಸುತ್ತಿದ್ದರು. ಸಮಾನತೆಯ ತತ್ವವನ್ನು ಪ್ರತಿಪಾದಿಸುತ್ತಿದ್ದರು. ಇದೆಲ್ಲವೂ ಅವರ ವಚನಗಳಲ್ಲಿ ಕಾಣಬಹುದಾಗಿದೆ’ ಎಂದರು.

ಭೋವಿ ಸಮಾಜವನ್ನು ಶ್ಲಾಘಿಸಿದ ಅವರು, ‘ಈ ಸಮಾಜಕ್ಕೆ ದೊಡ್ಡ ಪರಂಪರೆ ಇದೆ. 16 ಸಾವಿರ ಕೆರೆಗಳನ್ನು ಕಟ್ಟಿಸಿದ ಕೀರ್ತಿ ಭೋವಿ ಸಮಾಜಕ್ಕೆ ಸಲ್ಲುತ್ತದೆ. ಬಾಯಾರಿದವರಿಗೆ ನೀರುಣಿಸುವ ಸಮುದಾಯ ಇದು. ಕೃಷ್ಣದೇವರಾಯನ ಕೋಟೆ, ಕೆರೆಗಳನ್ನು ಕಟ್ಟಿಸಿದವರು ಇದೇ ಸಮಾಜದವರು’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೇಶ್‌, ಸದಸ್ಯರಾದ ಕೆರೆಹಳ್ಳಿ ನವೀನ್‌, ಮರಗದ ಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಜಿ. ಬಸವಣ್ಣ, ನಗರಸಭಾ ಸದಸ್ಯರಾದ ಭಾಗ್ಯ, ಚೆನ್ನಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹನುಮನರಸಯ್ಯ, ಭೋವಿ ಸಮುದಾಯದ ಮುಖಂಡರಾದ ಪರಮೇಶ್ವರ್, ರಾಮು, ಮಹದೇವಯ್ಯ, ವೆಂಕಟೇಶ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಚೆನ್ನಪ್ಪ ಇದ್ದರು.

ಇದಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದಿಂದ ಸಿದ್ದರಾಮೇಶ್ವರರ ಭಾವಚಿತ್ರದ ಮೆರಮಣಿಗೆ ನಡೆಯಿತು.

‘ಸಮಾಜದ ಅಭಿವೃದ್ಧಿಗೆ ಬದ್ಧ’

‘ಭೋವಿ ಸಮಾಜದ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಬದ್ಧವಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರವು ಸಮಾಜದ ಆರ್ಥಿಕ ಸ್ಥಿತಿಗಳನ್ನು ಮನಗಂಡು 2016ರಲ್ಲಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಿಗಮದ ಅಡಿಯಲ್ಲಿ ಸಮಾಜದವರಿಗಾಗಿ ವಿವಿಧ ಸಾಲ ಸೌಲಭ್ಯ ಹಾಗೂ ಇನ್ನಿತರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT