ಮಂಗಳವಾರ, ಜೂನ್ 2, 2020
27 °C
ಹಲವು ಷರತ್ತುಗಳ ಮೇಲೆ ಜಿಲ್ಲಾಧಿಕಾರಿ ಆದೇಶ, ನಿಟ್ಟುಸಿರು ಬಿಟ್ಟ ರೇಷ್ಮೆ ಬೆಳೆಗಾರರು

ಚಾಮರಾಜನಗರ: ರೇಷ್ಮೆ ಗೂಡಿನ ಮಾರುಕಟ್ಟೆ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ/ಸಂತೇಮರಹಳ್ಳಿ: ಕೊರೊನಾ ವೈರಸ್‌ ತಡೆಗೆ ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕೊಳ್ಳೇಗಾಲ ಮತ್ತು ಸಂತೇಮರಹಳ್ಳಿಯ ರೇಷ್ಮೆಗೂಡಿನ ಮಾರುಕಟ್ಟೆಗಳು ಪುನರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಬುಧವಾರ ಹಲವು ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸಿದ್ದು, ಗುರುವಾರ ಎರಡೂ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯಿತು.

ಮಾರುಕಟ್ಟೆಗಳು ಪುನರಾರಂಭಗೊಂಡಿರುವುದರಿಂದ ಜಿಲ್ಲೆಯ ನೂರಾರು ರೇಷ್ಮೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ರೈತರ ಹಿತದೃಷ್ಟಿಯಿಂದ ರೇಷ್ಮೆಗೂಡಿನ ಮಾರುಕಟ್ಟೆಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿತ್ತು. 

ಮೊದಲನೆಯ ದಿನ ಎರಡೂ ಮಾರುಕಟ್ಟೆಗಳಿಗೆ ಕೆಲ ರೈತರಷ್ಟೇ ರೇಷ್ಮೆಗೂಡುಗಳನ್ನು ತಂದಿದ್ದರು. 

ಕೊಳ್ಳೇಗಾಲದ ಮುಡಿಗುಂಡದಲ್ಲಿರುವ ಮಾರುಕಟ್ಟೆಗೆ 10 ಲಾಟ್‌ (710 ಕೆ.ಜಿ) ರೇಷ್ಮೆಗೂಡು ಬಂದಿತ್ತು. ಮಂಡ್ಯ, ರಾಮನಗರ, ಕನಕಪುರ, ಮಳವಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ರೈತರು ಬಂದಿದ್ದರು. ಕೆಜಿ ರೇಷ್ಮೆಗೂಡಿನ ಬೆಲೆ ₹290ರಿಂದ ₹380ರವರೆಗೆ ಮಾರಾಟವಾಯಿತು. 

‘ದಿಗ್ಬಂಧನದ ಕಾರಣದಿಂದ ರೈತರಿಗೆ ರೇಷ್ಮೆಗೂಡನ್ನು ಸರಿಯಾದ ಸಮಯದಲ್ಲಿ ತರಲು ಸಾಧ್ಯವಾದ ಕಾರಣ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ’ ಎಂದು ರೈತ ಕನಕಪುರದ ಶಿವಶಂಕರ್ ಹೇಳಿದರು. 

ಸಂತೇಮರಹಳ್ಳಿಯ ಮಾರುಕಟ್ಟೆಗೆ ಉಮ್ಮತ್ತೂರು ಹಾಗೂ ನಂಜನಗೂಡು ತಾಲ್ಲೂಕಿನ ಕಾಹಳ್ಳಿ ಗ್ರಾಮದ ರೈತರು ಎರಡು ಲಾಟ್‌ಗಳಷ್ಟು ರೇಷ್ಮೆ ಗೂಡು ತಂದಿದ್ದರು. ಐವರು ಸಿಲ್ಕ್ ರೀಲರ್‌ಗಳೂ (ರೇಷ್ಮೆನೂಲು ಬಿಚ್ಚುವವರು) ಇದ್ದರು.

ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ಗೂಡುಗಳನ್ನು ಇಡುವ ಗ್ಯಾಲರಿಯಲ್ಲಿ ರೈತರು ಹಾಗೂ ಸಿಲ್ಕ್ ರೀಲರ್‌ಗಳು ಅಂತರ ಕಾಪಾಡಿಕೊಂಡು ರೇಷ್ಮೆಗೂಡು ಹರಾಜಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ರೇಷ್ಮೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇಣುಕೇಶ್ ‌‘ಪ್ರಜಾವಾಣಿ’ಗೆ ತಿಳಿಸಿದರು.

ನಿಯಮಗಳ ಪಾಲನೆಗೆ ಸೂಚನೆ

ದಿನದ ವಹಿವಾಟು ಮುಗಿದ ನಂತರ ಕೊರೊನಾ ವೈರಸ್‌ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತಂತೆ ರೇಷ್ಮೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ರಾಚಪ್ಪ, ‘ಸೋಂಕು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಅಸ್ತ್ರ. ಇದನ್ನು ಗಮನದಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡಬೇಕು. ಮಾರುಕಟ್ಟೆಗೆ ಬರುವವರು ಕಡ್ಡಾಯವಾಗಿ ಮುಖಗವುಸು ಧರಿಸಬೇಕು ಮತ್ತು ಒಳಗಡೆ ಪ್ರವೇಶ ಮಾಡುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಬರಬೇಕು. ರೈತರು, ರೀಲರ್‌ಗಳು, ಸಿಬ್ಬಂದಿ ಬಿಟ್ಟು ಬೇರೆ ಯಾರೂ ಮಾರುಕಟ್ಟೆಗೆ ಪ್ರವೇಶಿಸಬಾರದು. ಅನವಶ್ಯಕವಾಗಿ ಒಳಗಡೆ ಬಂದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು