ಬುಧವಾರ, ನವೆಂಬರ್ 25, 2020
18 °C
ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದ ಜಾತ್ರೆಗೆ ಈ ಬಾರಿ ನಿರ್ಬಂಧ, ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತ

ಮಹದೇಶ್ವರ ಬೆಟ್ಟದಲ್ಲಿ ಭಾನುವಾರದಿಂದ ಸರಳ ದಸರಾ ಜಾತ್ರೆ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ದಸರಾ ಜಾತ್ರೆಗೆ ಭಾನುವಾರ ಚಾಲನೆ ಸಿಗಲಿದೆ. ಕೋವಿಡ್‌ ಕಾರಣದಿಂದ ಅತ್ಯಂತ ಸರಳವಾಗಿ, ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿ ಈ ಬಾರಿ ಜಾತ್ರೋತ್ಸವ ನಡೆಯಲಿದೆ. 

ಕೋವಿಡ್‌ ಕಾರಣದಿಂದ ಜಾತ್ರೆ ಸಂದರ್ಭದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆಯುತ್ತಿದ್ದರು. ಈ ವರ್ಷ ಅಂತಹ ಚಿತ್ರಣ ಕಂಡು ಬರಲು ಸಾಧ್ಯವಿಲ್ಲ. 

ತಾಳಬೆಟ್ಟದಲ್ಲಿ ತಡೆ: ಶನಿವಾರ ಸಂಜೆ ಏಳು ಗಂಟೆಯಿಂದ ಮಂಗಳವಾರ (ಅ.27) ಬೆಳಿಗ್ಗೆ 7 ಗಂಟೆಯವರೆಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತಾಳಬೆಟ್ಟದಲ್ಲೇ ಬ್ಯಾರಿಕೇಡ್‌ ಹಾಕಲಾಗಿದ್ದು, ಭಕ್ತರನ್ನು ತಡೆಯಲಾಗುತ್ತದೆ. ಭದ್ರತೆಗಾಗಿ ಶನಿವಾರವೇ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 

ಭಕ್ತರಿಗೆ ನಿರಾಸೆ: ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರೆಗಳೆಂದರೆ ಲಕ್ಷಾಂತರ ಭಕ್ತರಿಗೆ ಹಬ್ಬ. ಜಾತ್ರೆಗೂ ಎರಡು ದಿನಗಳ ಮೊದಲೇ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ನಾಲ್ಕೈದು ದಿನಗಳ ಅವಧಿಯಲ್ಲಿ ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ. ಮಾದಪ್ಪನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಕೋಟ್ಯಂತರ ರೂಪಾಯಿ ಕಾಣಿಕೆ ಹಾಕಿ, ವಿವಿಧ ಸೇವೆಗಳನ್ನು ಮಾಡಿ ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯವನ್ನೂ ತರುತ್ತಾರೆ. 

ದಸರಾ ಜಾತ್ರೆಯ ಸಂದರ್ಭದಲ್ಲಿ ಆಯುಧಪೂಜೆಯ ದಿನದಂದು ತಮ್ಮ ಹೊಸ ವಾಹನಗಳನ್ನು ಬೆಟ್ಟಕ್ಕೆ ತಂದು ಪೂಜೆ ಮಾಡಿಸುತ್ತಾರೆ. ಸಡಗರ ಸಂಭ್ರಮದಿಂದ ರಾತ್ರಿಯಿಡಿ ನಿದ್ದೆಗೆಟ್ಟು ಮಾದೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಬಹುತೇಕ ಭಕ್ತರು ದಸರಾ ದಿನದಂದೇ ದೂರದಲ್ಲಿರುವ ನಾಗಮಲೆ ಕ್ಷೇತ್ರಕ್ಕೆ ತೆರಳಿ ಮಾದೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ. ವಿಜಯ ದಶಮಿಯಂದು ಸಂಜೆ ನಡೆಯುವ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಸ್ವಾಮಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಮೂರ್ನಾಲ್ಕು ದಿನಗಳ ಕಾಲ ಇಡೀ ಬೆಟ್ಟದಲ್ಲಿ ಉಘೇ ಮಾದೇಶ್ವರ ಉಘೇ, ಎಂಬ ಘೋಷಣೆ ಮಾರ್ದನಿಸುತ್ತದೆ. ಆದರೆ, ಈ ವರ್ಷ ಕೋವಿಡ್‌–19 ಭಕ್ತರ ಸಂಭ್ರಮಕ್ಕೆ ಪೂರ್ಣ ವಿರಾಮ ಹಾಕಿದೆ. 

ಜಾತ್ರೆ ಸಮಯದಲ್ಲಿ ಬೆಟ್ಟದಲ್ಲಿನ ನೂರಾರು ವ್ಯಾಪಾರಿಗಳು ಉತ್ತಮವಾಗಿ ವ್ಯಾಪಾರ ಕಂಡು ಆರ್ಥಿಕವಾಗಿ ಸಬಲರಾಗುತ್ತಿದ್ದರು. ಕೆಎಸ್‌ಆರ್‌ಟಿಸಿ ಕೂಡ ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಿ ಉತ್ತಮ ಆದಾಯಗಳಿಸುತ್ತಿತ್ತು. ಈ ವರ್ಷ ಯಾವುದೂ ಇಲ್ಲದಂತಾಗಿದೆ. 

‘ನಾವು ಮಾದೇಶ್ವರ ಸ್ವಾಮಿಯ ಆರಾಧಕರಾಗಿದ್ದು, ತಲೆ ಮಾರುಗಳಿಂದಲೂ ನಮ್ಮ ಜಮೀನಿನಲ್ಲಿ ಬೆಳೆದಿರುವಂತಹ ದವಸ ಧಾನ್ಯಗಳನ್ನು ದಸರಾ ಜಾತ್ರಾ ಮಹೋತ್ಸವದ ಸಮಯದಲ್ಲಿ ಮಾದೇಶ್ವರ ಬೆಟ್ಟಕ್ಕೆ ತೆರಳಿ ಅರ್ಪಿಸುತ್ತಿದ್ದೆವು. ಕೋವಿಡ್ ಕಾರಣದಿಂದ ನಮ್ಮ ಸೇವೆಗೆ ತಡೆಯಾಗಿದೆ. ಸ್ವಾಮಿಗೆ ಮುಡಿಪಿಟ್ಟರೆ ನಮ್ಮ ಹೊಲ ಗದ್ದೆಗಳಲ್ಲಿ ಸುಗಮವಾಗಿ ಯಥೇಚ್ಛವಾಗಿ ದವಸ ಧಾನ್ಯಗಳನ್ನು ಬೆಳೆಯುತಿದ್ದೆವು. ಈ ತಡೆಯಿಂದಾಗಿ ನಮ್ಮಲ್ಲಿ ತಳಮಳ ಶುರುವಾಗಿದ್ದು, ಮನೆಯಲ್ಲಿಯೇ ಧಾನ್ಯಗಳನ್ನು ಸ್ವಾಮಿಗಾಗಿ ಮೀಸಲಿಡುತ್ತಿದ್ದೇವೆ’ ಎಂದು ಒಡೆಯರ ಪಾಳ್ಯದ ಹುತ್ತೂರಿನ ಗ್ರಾಮಸ್ಥರಾದ ಶಿವು ಹಾಗೂ ಚಿಕ್ಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಉಯ್ಯಾಲೋತ್ಸವ: ನವರಾತ್ರಿ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ಉಯ್ಯಾಲೋತ್ಸವ ನಡೆಯುತ್ತದೆ. ಈ ವರ್ಷ ಕೋವಿಡ್‌ನಿಂದಾಗಿ ಎಲ್ಲರಿಗೂ ಇದರಲ್ಲಿ ಭಾಗವಹಿಸಲು ಆಗಿಲ್ಲ. 

ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆ

ಜಾತ್ರೆಯ ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ನವರಾತ್ರಿಯ ಒಂಬತ್ತನೇ ದಿನವಾದ ಭಾನುವಾರ, ಮೈಸೂರು ಮಹಾರಾಜರು ಸ್ವಾಮಿಗೆ ನೀಡಿರುವ ವಜ್ರ ವೈಢೂರ್ಯ ಹಾಗೂ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಸಂಜೆ ಉಯ್ಯಾಲೋತ್ಸವ ನಡೆಯಲಿದೆ. ವಿಜಯ ದಶಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಸಂಜೆ ಏಳು ಗಂಟೆಗೆ ದೊಡ್ಡ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ’ ಎಂದು ಹೇಳಿದರು. 

ಕೋವಿಡ್‌ ಕಾರಣದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಸ್ಥಳೀಯರು 50–60 ಜನರಷ್ಟೇ ಭಾಗವಹಿಸಬಹುದು. ಮಂಗಳವಾರ ಏಳು ಗಂಟೆಯವರೆಗೆ ಭಕ್ತರಿಗೆ ನಿರ್ಬಂಧಿಸಲಾಗಿದೆ.  ಆ ಬಳಿಕ ದರ್ಶನಕ್ಕೆ ಅವಕಾಶ ಇದೆ. ಆ ದಿನ ಭಕ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಈಗಾಗಲೇ ನಾವು ಎಲ್ಲ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.