ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಗಂಧದ ಮರದ ಕಳ್ಳರು, ಮಧ್ಯವರ್ತಿಗಳ ಜಾಲ ಸಕ್ರಿಯ

ಮಲೆ ಮಹದೇಶ್ವರ ವನ್ಯಧಾಮ: ವರ್ಷದ ಅವಧಿಯಲ್ಲಿ ಆರು ಕಳ್ಳತನದ ಪ್ರಕರಣ, ತಮಿಳುನಾಡಿನವರೂ ಭಾಗಿ
Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ಹನೂರು: ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಿಂದ ಇಲ್ಲಿವರೆಗೆ ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧ ಕಳ್ಳತನದ ಆರು ಪ್ರಕರಣಗಳು ನಡೆದಿದ್ದು, 15ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಲ್ಲಿ ಸ್ಥಳೀಯರ ಜೊತೆಗೆ ನೆರೆಯ ತಮಿಳುನಾಡಿನವರೂ ಇದ್ದಾರೆ. ಮೂವರು ಮಹಿಳಾ ಆರೋಪಿಗಳೂ ಇರುವುದು ಅಧಿಕಾರಿಗಳನ್ನು ಅಚ್ಚರಿಯಲ್ಲಿ ಕೆಡವಿದೆ. ಶ್ರೀಗಂಧ ಕಳ್ಳತನ ಮಾಡುವ, ಅದನ್ನು ಮಾರಾಟ ಮಾಡುವ ಮಧ್ಯವರ್ತಿಗಳ ದೊಡ್ಡ ಜಾಲವೊಂದು ಗಡಿ ಜಿಲ್ಲೆ ಹಾಗೂ ಸುತ್ತಮುತ್ತಸಕ್ರಿಯವಾಗಿರುವುದು ಈ ಪ್ರಕರಣಗಳಿಂದ ದೃಢ‍ಪಟ್ಟಿದೆ.

ದಾಖಲಾಗಿರುವ ಪ್ರಕರಣಗಳಲ್ಲಿ ಒಂದಕ್ಕೊಂದು ಸಂಬಂಧವಿದೆಯೇ, ಆರೋಪಿಗಳ ನಡುವೆ ಸಂಪರ್ಕವಿದೆಯೇ ಎನ್ನುವ ನಿಟ್ಟಿನಲ್ಲೂ ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಒಂದರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಅದನ್ನು ಬಹಿರಂಗ ಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಏಳು ವನ್ಯಜೀವಿ ವಲಯಗಳ ಪೈಕಿ ಕೊಳ್ಳೇಗಾಲ ಬಫರ್ ವಲಯದಲ್ಲಿ ಮೂರು ಪ್ರಕರಣ, ಪಿ.ಜಿ.ಪಾಳ್ಯ ವಲಯದಲ್ಲಿ ಎರಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಒಂದು ಪ್ರಕರಣ ವರದಿಯಾಗಿವೆ.

ಇತ್ತೀಚೆಗೆ ಅಂದರೆ ಏಪ್ರಿಲ್‌ 22ರಂದುಕೊಳ್ಳೇಗಾಲದ ಭರಚುಕ್ಕಿ ಬಳಿ ದಾಳಿ ನಡೆಸಿ 24 ಕೆ.ಜಿ ಗಂಧವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರೆಲ್ಲರೂ ತಮಿಳುನಾಡಿನವರಾಗಿದ್ದು, ಮೂರು ಮಹಿಳೆಯರು ಇದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗಂಧದ ಕಳ್ಳತನ ಮಾಡಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಇಬ್ಬರನ್ನು ಬಂಧಿಸಲಾಗಿತ್ತು. ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಇದರಲ್ಲಿ 16 ಕೆ.ಜಿ ಗಂಧ ಹಾಗೂ ನಾಲ್ವರನ್ನು ಬಂಧಿಸಲಾಗಿತ್ತು.

ಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ನಾಮದಳ್ಳಿ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಮೂಲದ ವ್ಯಕ್ತಿಗಳು ಗಂಧದ ಮರ ಕಡಿಯುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ತಿಳಿಯುತ್ತಿದ್ದಂತೆ ಆರೋಪಿಗಳು ನಾಲ್ಕು ಕೆಜಿ ಗಂಧವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳೀಯರೇ ಮದ್ಯವರ್ತಿಗಳು: ಎರಡು ಪ್ರಕರಣಗಳನ್ನು ಬಿಟ್ಟು ಉಳಿದ ಪ್ರಕರಣಗಳಲ್ಲಿ ಗಂಧದ ಮಾರಾಟಕ್ಕೆ ಸ್ಥಳೀಯರೇ ಮಧ್ಯವರ್ತಿಗಳಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ಕೊಳ್ಳೇಗಾಲ ಹಾಗೂ ಹನೂರು ಭಾಗದ ಕೆಲವರು ಕಳ್ಳರಿಂದ ಶ್ರೀಗಂಧ ಖರೀದಿಸಿ ಬೇರೆ ಕಡೆಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿಯೂ ತನಿಖೆಯಿಂದ ಬಯಲಾಗಿದೆ.

ಮಧ್ಯವರ್ತಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೇಳುತ್ತಾರೆ ಅಧಿಕಾರಿಗಳು.

‘ಕೊಳ್ಳೇಗಾಲದಲ್ಲಿ ನಡೆದ ಪ್ರಕರಣದ ಎಂಟು ಆರೋಪಿಗಳ ಪೈಕಿ ಇಬ್ಬರಿಗೆ ಕೋವಿಡ್ ದೃಢಪಟ್ಟಿದ್ದರಿಂದ ತನಿಖೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಮಧ್ಯವರ್ತಿಗಳ ವಿಳಾಸ ಹಾಗೂ ಅವರ ವ್ಯವಹಾರದ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಕ್ಷ ಗಂಧದ ಗಿಡ ನೆಡುವ ಕಾರ್ಯಕ್ರಮ

ಈ ಮಧ್ಯೆ, ಮಲೆಮಹದೇಶ್ವರ ವನ್ಯಧಾಮದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಲು ನಿರ್ಧರಿಸಿರುವ ಅರಣ್ಯ ಇಲಾಖೆ, ಗಂಧದ ಗಿಡಗಳನ್ನು ನಡೆತ್ತಿದೆ.

ಅರೆಪಾಳ್ಯ ಗ್ರಾಮದ ಬಳಿಯ ಗುಡ್ಡ ಮತ್ತು ಬೆಳತ್ತೂರು ಗುಡ್ಡದಲ್ಲಿ ಶ್ರೀ ಚಂದನವನ ಯೋಜನೆಯಡಿ ಈಗಾಗಲೇ 1 ಲಕ್ಷ ಗಂಧದ ಸಸಿಗಳನ್ನು ನೆಡಲಾಗಿದೆ.

10 ತಿಂಗಳುಗಳಿಂದ ಈ ಯೋಜನೆ ಚಾಲ್ತಿಯಲ್ಲಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಗಿಡಗಳ ಪೋಷಣೆಗೆ ಶ್ರಮಿಸುತ್ತಿದೆ. ನಾಲ್ಕೈದು ವರ್ಷದವರೆಗೆ ಅವುಗಳ ಸಂಪೂರ್ಣ ಬೆಳವಣಿಗೆಯ ಜವಾಬ್ದಾರಿಯನ್ನು ಆಯಾ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT