ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದ ರಾಮಸಮುದ್ರದಲ್ಲಿ ಆರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: ಆರೋಪ

Last Updated 1 ಏಪ್ರಿಲ್ 2021, 15:54 IST
ಅಕ್ಷರ ಗಾತ್ರ

ಚಾಮರಾಜನಗರ: ‘ಖಾಲಿ ನಿವೇಶನ ಹಾಗೂ ಒತರೆ ಜಾಗದ ವಿಚಾರಗಳಿಗೆ ರಾಮಸಮುದ್ರದ ಪರಿಶಿಷ್ಟ ಜಾತಿ ಬಡಾವಣೆಯ ಯಜಮಾನರು ಬಡಾವಣೆಯ ಆರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಬಡಾವಣೆ ನಿವಾಸಿ ರವಿ ಅವರು ಗುರುವಾರ ದೂರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿವೇಶನದ ಎಲ್ಲ ದಾಖಲೆಗಳು ನಮ್ಮ ಕುಟುಂಬದ ಹೆಸರಿನಲ್ಲಿದೆ. ಹಾಗಿದ್ದರೂ, ಇದರ ಒಂದು ಭಾಗವನ್ನು ನಮ್ಮ ದೊಡ್ಡಪ್ಪ ಅವರಿಗೆ ನೀಡಬೇಕು ಎಂದು ಯಜಮಾನವರು 2019ರಲ್ಲಿ ಪಂಚಾಯಿತಿಯಲ್ಲಿ ಆದೇಶ ಮಾಡಿದ್ದಾರೆ. ಇದನ್ನು ಒಪ್ಪದಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದುವರೆಗೂ ಸಹಿಸಿಕೊಂಡು ಬಂದಿದ್ದೆವು. ಆದರೆ ಮಾರ್ಚ್‌ 22ರಂದು ನನ್ನ ತಮ್ಮನ ಮದುವೆ ಇತ್ತು. ಆದರೆ, ನಮ್ಮ ಕುಟುಂಬದವರು ಸ್ನೇಹಿತರನ್ನು ಬರಲು ಯಜಮಾನರು ಬಿಡಲಿಲ್ಲ. ಆಮಂತ್ರಣ ಕೊಡಲು ಬಂದವರಿಗೂ ದಂಡ ವಿಧಿಸಿದ್ದಾರೆ. ಮದುವೆಗೆ ಹೋದರೆ ಉಳಿದವರಿಗೂ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದಾರೆ. ಜಾಗ ಬಿಟ್ಟುಕೊಟ್ಟು ದಂಡ ಕಟ್ಟಿದರೆ ಸೇರಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ’ ಎಂದು ದೂರಿದರು.

‘12 ಮಂದಿ ಯಜಮಾನರಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕುಟುಂಬದವರು, ಸಂಬಂಧಿಕರು, ಬೀದಿಯವರು ಮೃತಪಟ್ಟರೆ ಅವರ ಸಮಾಧಿಗೆ ಹೋಗುವುದಕ್ಕೂ ಅವಕಾಶ ನೀಡುತ್ತಿಲ್ಲ. ಬಹಿಷ್ಕಾರ ಹಾಕಿರುವ ಸಂಬಂಧ ಪೊಲೀಸರಿಗೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ದೂರು ನೀಡಲಾಗಿದೆ. ನಮ್ಮ ಕುಟುಂಬ ಮಾತ್ರ ಅಲ್ಲ. ನಿವೇಶನದ ವಿಚಾರವಾಗಿ ಪುಟ್ಟರಂಗಯ್ಯ, ನಂಜಯ್ಯ, ಮಹದೇವಯ್ಯ, ಪುಟ್ಟನಂಜಮ್ಮ, ಶಿವಣ್ಣ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ’ ಎಂದು ರವಿ ಹಾಗೂ ಅವರ ತಮ್ಮ ಕಿರಣ್‌ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರವಿ ಅವರ ತಂದೆ ಗುಂಡಯ್ಯ, ತಾಯಿ ಚೆನ್ನಬಸಮ್ಮ, ಹೇಮಂತ್, ವರಲಕ್ಷ್ಮಿ ಇದ್ದರು.

ಅವರೇ ದೂರವಾಗಿದ್ದಾರೆ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮುದಾಯದ ಯಜಮಾನ ಚೆನ್ನಂಜಯ್ಯ ಅವರು, ‘ಪಂಚಾಯಿತಿಯಲ್ಲಿ ಜಮೀನಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಅವರು ತೋರಿಸಿದ್ದಾರೆ. ಕೊಟ್ಟ ಮಾತಿನಂತೆಯೇ ಜಾಗದ ಪಾಲನ್ನು ನೀಡುವಂತೆ ಸಲಹೆ ನೀಡಿದ್ದೆವು. ಅದನ್ನು ಒಪ್ಪದ ಅವರು ಸಮಾಜದಿಂದ ದೂರ ಹೋಗಿದ್ದಾರೆ. ನಾವು ಬಹಿಷ್ಕಾರ ಹಾಕಿಲ್ಲ. ಅವರೇ ದೂರ ಹೋದ ಮೇಲೆ ಅವರ ಕುಟುಂಬದ ಮದುವೆಗೆ ಹೋಗುವುದು ಸರಿಯಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT