ಸೋಮವಾರ, ಆಗಸ್ಟ್ 2, 2021
26 °C
ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಲಹೆ

ಬಿಜೆಪಿಯ ಸುಳ್ಳು ಭರವಸೆಗಳನ್ನು ಜನರಿಗೆ ತಿಳಿಸಿ: ಕಾರ್ಯಕರ್ತರಿಗೆಧ್ರುವನಾರಾಯಣ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪಕ್ಷದ ಕಾರ್ಯಕರ್ತರು ಬಿಜೆಪಿ ಸರ್ಕಾರದ ಸುಳ್ಳು ಭರವಸೆಗಳನ್ನು ಜನಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು ಶನಿವಾರ ಹೇಳಿದರು. 

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲ ತಾಣ ವಿಭಾಗದ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸುವ ಕೆಲಸವನ್ನು ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಮಾಡಲಿದೆ. ಕಾರ್ಯಕರ್ತರು ಕೂಡ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಸುಳ್ಳು ಭರವಸೆಗಳನ್ನು ಜನರ ಗಮನಕ್ಕೆ ತಂದು, ಅವರು ಸರ್ಕಾರವನ್ನು ಎಚ್ಚರಿಸುವಂತೆ ಮಾಡಬೇಕು’ ಎಂದರು.  

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭವನ್ನು ಕೋವಿಡ್–19 ಕಾರಣಕ್ಕೆ ಸ್ವಲ್ಪ  ಮಾರ್ಪಾಡು ಮಾಡಲಾಗಿದೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು ಮೇಲೆ ಪಕ್ಷದ ಸಾಮಾಜಿಕ ಜಾಲತಾಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಸಾಮಾಜಿಕ ಜಾಲತಾಣ ರಾಜಕಾರಣದ ಮೇಲೆ ಅವಲಂಬಿತವಾಗಿದ್ದು, ಈಗಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಜನಪರ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ’ ಎಂದರು.

ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ವೀಕ್ಷಕ, ಸಾಮಾಜಿಕ ಜಾಲತಾಣ ಪ್ರಮುಖರನ್ನು ನೇಮಕ ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅವರು ಸಲಹೆ ನೀಡಿದರು.

ಅಭಿನಂದನೆ: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ವೇಣುಗೋಪಾಲ್ ಅವರು ಅಭಿನಂದನಾರ್ಹರು ಎಂದು ಅವರು ಹೇಳಿದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ,ವೀಕ್ಷಕರಾದ ಮಲ್ಲಾಜಮ್ಮ, ವಸಂತಿ ಶಿವಣ್ಣ, ಪಲ್ಲವಿ, ಅಕ್ಬರಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪದ್ಮಾಪುರುಷೋತ್ತಮ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಮುಖಂಡ ಸೈಯದ್ ‌ಆರೀಫ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್‌ಅಸ್ಗರ್, ಗುರುಸ್ವಾಮಿ ಇದ್ದರು.

‘ಬಿಜೆಪಿ ಅಪಪ್ರಚಾರ ವಿರುದ್ಧ ಧ್ವನಿಯಾಗಿ’

‘ಗ್ರಾಮಾಂತರ ಮಟ್ಟದಲ್ಲಿ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಮಾಡುತ್ತಿರುವ ಅಪ್ರಚಾರದ ವಿರುದ್ದ ಕಾರ್ಯಕರ್ತರು ಧ್ವನಿಯಾಗಬೇಕು. ಜನ ಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿ ಸಂಘಟನೆಗೆ ಮುಂದಾಗಬೇಕು’ ಎಂದು ಎಐಸಿಸಿ ವಕ್ತಾರೆ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಐಶ್ವರ್ಯ ಮಹದೇವ್ ಅವರು ಹೇಳಿದರು.

ಸಾಮಾಜಿಕ ಜಾಲತಾಣ ವಿಭಾಗದ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿಗಳಿಗೆ ಆಯೋಜನೆ ಮಾಡಿದ್ದ ಡಿಜಿಟಲ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಸರ್ಕಾರ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಲುಪಿದೆಯೇ ಎಂಬುದರ ಬಗ್ಗೆ ಸ್ಥಳೀಯವಾಗಿ ಸರ್ವೆ ಮಾಡಿ, ಫಲಾನುಭವಿಗಳನ್ನು ನೇರವಾಗಿ ಮಾತನಾಡಿಸುವ ಜೊತೆಗೆ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕು. ಸ್ಥಳಿಯ ಮಟ್ಟದಲ್ಲಿ ಇದರ ವಿರುದ್ದ ಜಾಗೃತಿ ಮೂಡಿಸಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಬೇಕು’ ಎಂದರು.

‘ಪ್ರಧಾನಿಗಳಾಗಿದ್ದ ಜವಾಹರ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಹಾಗೂ ಮನಮೋಹನ್ ಸಿಂಗ್ ಸೇರಿದಂತೆ ಅನೇಕ ನಾಯಕರು ದೇಶದ ಅಭಿವೃದ್ದಿಗಾಗಿ ಅನುಷ್ಠಾನದ ಮಾಡಿದ ನೂರಾರು ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು