ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಶೇ 37ರಷ್ಟು ಸೂರ್ಯಗ್ರಹಣ ಗೋಚರ

ಗಗನ ಕುತೂಹಲಿಗಳಿಂದ ವೀಕ್ಷಣೆ, ನಗರ, ಗ್ರಾಮೀಣ ಭಾಗಗಳಲ್ಲಿ ನೀರಿನಲ್ಲಿ ಒನಕೆ ಇಟ್ಟ ಜನ
Last Updated 21 ಜೂನ್ 2020, 15:02 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಆಗಸದಲ್ಲಿ ಭಾನುವಾರ ಪಾರ್ಶ್ವ ಸೂರ್ಯಗ್ರಹಣ ಗೋಚರವಾಯಿತು.ಬೆಳಿಗ್ಗೆ 10.11ಕ್ಕೆ ಗ್ರಹಣ ಸ್ಪರ್ಶವಾಗಿ, ಮಧ್ಯಾಹ್ನ 1.27ಕ್ಕೆ ಕೊನೆಗೊಂಡಿತು.

ಖಗೋಳದ ಬಗ್ಗೆ ಆಸಕ್ತಿ ಹೊಂದಿರುವವರು ಸೌರ ಕನ್ನಡಕಗಳ ಮೂಲಕ ನಭದ ಕೌತುಕವನ್ನು ಕಣ್ತುಂಬಿಕೊಂಡರು. ಮೋಡಗಳ ಕಣ್ಣಮುಚ್ಚಾಲೆ, ಗ್ರಹಣ ವೀಕ್ಷಣೆಗೆ ಅಡ್ಡಿ ಉಂಟು ಮಾಡಿತು.

ನಗರದ ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌, ತನ್ನ ಕಚೇರಿಯಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಸೌರ ಕನ್ನಡಗಳ ಮೂಲಕ ಹಲವರು ವೀಕ್ಷಣೆ ಮಾಡಿದರು.

‘ಜಿಲ್ಲೆಯಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರವಾಗಿದ್ದು, ಬೆಳಿಗ್ಗೆ 11.44ಕ್ಕೆ ಗರಿಷ್ಠ ಪ್ರಮಾಣದಲ್ಲಿ ಗ್ರಹಣ ಕಂಡು ಬಂದಿದೆ. ಶೇ 37ರಷ್ಟು ಗ್ರಹಣ ಗೋಚರವಾಗಿದೆ’ ಎಂದು ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌ ಸಂಸ್ಥಾಪಕ, ಭೌತವಿಜ್ಞಾನ ಪ್ರಾಧ್ಯಾಪಕ ಎಸ್‌.ಅಭಿಷೇಕ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊರ ಬಾರದ ಜನ: ಸೂರ್ಯಗ್ರಹಣದ ಕಾರಣದಿಂದಾಗಿ ನಗರ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆ ಇತ್ತು. ಗ್ರಹಣ ಸ್ಪರ್ಶಕ್ಕೆ ಮೊದಲೇ ದೇವಸ್ಥಾನಗಳಲ್ಲಿ ಪೂಜೆಗಳು ನಡೆದವು. ಗ್ರಹಣದ ವೇಳೆ ಬಾಗಿಲು ಹಾಕಲಾಗಿತ್ತು.

ಸಂಪ್ರದಾಯವಾದಿಗಳು ಗ್ರಹಣ ಆಗುವುದಕ್ಕೆ ಮೊದಲೇ ಬೆಳಗಿನ ಉಪಾಹಾರ ಸೇವಿಸಿದರು. ಮಧ್ಯಾಹ್ನ ಗ್ರಹಣ ಬಿಟ್ಟ ನಂತರ ಸ್ನಾನ ಮಾಡಿ ಮಧ್ಯಾಹ್ನದ ಅಡುಗೆ ಸಿದ್ಧಪಡಿಸಿ ಊಟ ಮಾಡಿದರು.

ಒನಕೆ ಶಾಸ್ತ್ರ: ಚಾಮರಾಜನಗರ ಶಂಕರಪುರ ಬಡಾವಣೆ, ಹರದನಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಜನರು, ಕಂಚು/ಸ್ಟೀಲಿನ ಬಟ್ಟಲಿನಲ್ಲಿ ನೀರು ಹಾಕಿ ಅದರಲ್ಲಿ ಒನಕೆಯನ್ನು ನೆಟ್ಟಗೆ ನಿಲ್ಲಿಸಿದ್ದರು.

ಒನಕೆಯನ್ನು ನಿಲ್ಲಿಸಿದರೆ ಗ್ರಹಣ ಸಂದರ್ಭದಲ್ಲಿ ಮನೆ, ಊರಿಗೆ ಯಾವುದೇ ಕೇಡು ಉಂಟಾಗುವುದಿಲ್ಲ ಎಂಬುದು ಜನರ ನಂಬಿಕೆ. ಒನಕೆಯ ಮೂಲ ಗ್ರಹಣ ಆರಂಭ ಹಾಗೂ ಅಂತ್ಯವಾಗುವ ಸಮಯವನ್ನು ನಿರ್ಧರಿಸುತ್ತಾರೆ. ಗ್ರಹಣ ಆರಂಭವಾದ ನಂತರವಷ್ಟೇ ಒನಕೆ ನೆಟ್ಟಗೆ ನಿಲ್ಲುತ್ತದೆ, ಗ್ರಹಣ ಮುಕ್ತಾಯವಾದಾಗ ಅದು ನೆಲಕ್ಕೆ ಬೀಳುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT