ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಎಸ್‌ಎಸ್‌ಎಲ್‌ಸಿ: ಅನುತ್ತೀರ್ಣರಿಗೆ ವಿಶೇಷ ತರಗತಿ, ಊಟ

ಜೂನ್‌ 7ರಿಂದ ಎಸ್ಎಸ್‌ಎಲ್‌ಸಿ ಪರೀಕ್ಷೆ-2 ಶುರು, ಇಂದಿನಿಂದ ಜೂನ್‌ 5ರವರೆಗೆ ರವರೆಗೆ ತರಗತಿ
Published : 15 ಮೇ 2024, 4:38 IST
Last Updated : 15 ಮೇ 2024, 4:38 IST
ಫಾಲೋ ಮಾಡಿ
Comments

ಚಾಮರಾಜನಗರ/ಯಳಂದೂರು: 2023–14ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–2 ಜೂನ್‌ 7ರಿಂದ 14ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರದಿಂದ ವಿಶೇಷ ತರಗತಿಗಳನ್ನು ನಡೆಸಲಿದೆ. ಜೂನ್‌ 5ರವರೆಗೂ ನಡೆಯಲಿದೆ.  

ಎರಡನೇ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾಗುವಂತೆ ಮಾಡಿ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸುವ ಗುರಿಯನ್ನು ಶಾಲಾ ಶಿಕ್ಷಣ ಇಲಾಖೆ ಹೊಂದಿದೆ. 

ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ಎಲ್ಲ ದಿನಗಳಲ್ಲೂ 6 ವಿಷಯಗಳಿಗೆ ತರಗತಿ ಆಯೋಜಿಸಿದೆ. ವಿಶೇಷ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮಕೈಗೊಳ್ಳಲಾಗಿದೆ.

ಎಲ್ಲ ವಿಷಯಗಳ ಶಿಕ್ಷಕರ ಹಾಜರಾತಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರತಿದಿನ 11 ಗಂಟೆಯೊಳಗೆ ಬಿಇಒ ಕಚೇರಿಗೆ ವರದಿ ಮಾಡಬೇಕು. ಅದೇ ವೇಳೆ ಎಲ್ಲ ತಾಲ್ಲೂಕುಗಳ ಮಕ್ಕಳ ಸಂಖ್ಯೆಯನ್ನು ಡಿಡಿಪಿಐ ಕಚೇರಿಗೆ ಕಳುಹಿಸಬೇಕಿದೆ. ಶಾಲೆಯೊಂದರಲ್ಲಿ 10 ಕ್ಕಿಂತ ಕಡಿಮೆ ಮಕ್ಕಳು ಅನುತ್ತೀರ್ಣಗೊಂಡಿದ್ದರೆ, ಆಯಾ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ವಿಶೇಷ ತರಗತಿ ನಡೆಸಬೇಕಿದೆ.

ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಗಣಿತ, 11 ರಿಂದ 12ರ ತನಕ ಪ್ರಥಮ ಭಾಷೆ, 12 ರಿಂದ 1 ವಿಜ್ಞಾನ, 1 ರಿಂದ 1.30ರ ಊಟದ ಸಮಯಕ್ಕೆ ನಿಗದಿಯಾಗಿದೆ. ಮಧ್ಯಾಹ್ನ 1.30 ರಿಂದ 2.30 ದ್ವಿತೀಯ ಭಾಷೆ, 2.30 ರಿಂದ 3.30 ಸಮಾಜ ವಿಜ್ಞಾನ ಹಾಗೂ 3.30 ರಿಂದ 4,30 ತೃತೀಯ ಭಾಷೆ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ.

ಶೇ 75 ಹಾಜರಾತಿ ಕೊರತೆಯಿಂದ ಪರೀಕ್ಷೆ-1 ಬರೆಯಲಾಗದೆ ವಂಚಿತರಾದವರು, 15 ವರ್ಷ ತುಂಬಿದ ಮಕ್ಕಳು ಪರೀಕ್ಷೆ-2 ಬರೆಯಲು ಈ ಬಾರಿ ಅವಕಾಶ ನೀಡಲಾಗಿದೆ. ಮೊದಲ ಪರೀಕ್ಷೆ ನೋಂದಣಿಯಾಗಿ ಪರೀಕ್ಷೆಗೆ ಗೈರು ಹಾಜರಾದವರು ಸಹ ಪರೀಕ್ಷೆ-2  ಮತ್ತು ಪರೀಕ್ಷೆ-3 ಬರೆಯಲು ಅವಕಾಶ ನೀಡಲಾಗಿದೆ. 

ಜಿಲ್ಲಾಧಿಕಾರಿ ಸಭೆ: ಈ ಮಧ್ಯೆ, ಬುಧವಾರದಿಂದ ನಡೆಯಲಿರುವ ವಿಶೇಷ ತರಗತಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದರು. ವಿಶೇಷ ತರಗತಿಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಸೂಚಿಸಿದರು. 

‘ಕಡಿಮೆ ಸಮಯವಿರುವುದರಿಂದ 2ನೇ  ಪರೀಕ್ಷಾ ಕಾರ್ಯಕ್ಕೆ ಸಿದ್ಧತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು 2ನೇ ಹಂತದ ಪರೀಕ್ಷೆಗೆ ಸಜ್ಜುಗೊಳಿಸಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ 2ನೇ ಪರೀಕ್ಷೆಯಿಂದ ಹೊರಗುಳಿಯಬಾರದು. ಮಕ್ಕಳಿಗೆ ಪರೀಕ್ಷಾ ಕೌಶಲ ಹಾಗೂ ಬರವಣಿಗೆ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.

‘ಮಕ್ಕಳ ಗಮನವನ್ನು ಕಲಿಕೆಯ ಆಸಕ್ತಿಯೆಡೆಗೆ ಸೆಳೆಯಬೇಕು. ಉತ್ತಮ ಫಲಿತಾಂಶ ಬಂದಿರುವ ವಿವಿಧ ಶಾಲೆಗಳ ಶಿಕ್ಷಕರನ್ನು ವಿಶೇಷ ತರಗತಿ ನಡೆಸಲು ನಿಯೋಜಿಸಬೇಕು’ ಎಂದು ಶಿಲ್ಪಾ ನಾಗ್‌ ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿದರು. 

ಸನ್ಮಾನ: ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಗುಂಡ್ಲುಪೇಟೆ ಆದರ್ಶ ಶಾಲೆಯ ವಿದ್ಯಾರ್ಥಿನಿ ರತ್ನಮ್ಮ ಹಾಗೂ ಆಕೆಯ ಪೋಷಕರನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಶಿವಮೂರ್ತಿ, ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

Cut-off box - 74 ಶಾಲೆಗಳಲ್ಲಿ ವಿಶೇಷ ತರಗತಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ ‘ಜಿಲ್ಲೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಚಾಮರಾಜನಗರ ತಾಲ್ಲೂಕಿನ 24 ಗುಂಡ್ಲುಪೇಟೆ 18 ಕೊಳ್ಳೇಗಾಲ 9 ಹನೂರು 19 ಮತ್ತು ಯಳಂದೂರಿನ 4 ಸೇರಿದಂತೆ ಒಟ್ಟು 74 ಶಾಲೆಗಳನ್ನು ಗುರುತಿಸಲಾಗಿದ್ದು ಇತರೆ ಶಾಲೆಗಳ ಸಮನ್ವಯದೊಂದಿಗೆ ತರಗತಿಗಳನ್ನು ನಡೆಸಲಾಗುವುದು. ಪರೀಕ್ಷೆ-1ರಲ್ಲಿ ಶೇ 50ಕ್ಕಿಂತ ಕಡಿಮೆ ಅಂಕ ಬಂದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT