ಗುರುವಾರ , ಅಕ್ಟೋಬರ್ 1, 2020
27 °C

ರಾಮ ಮಂದಿರಕ್ಕೆ ಭೂಮಿಪೂಜೆ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ನಡೆಯಲಿರುವ ಭೂಮಿಪೂಜೆ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲೆಯ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. 

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಈ ಸಂಬಂಧ ಎಲ್ಲ ದೇವಾಯಗಳಿಗೂ ಸೂಚನೆ ನೀಡಿದ್ದಾರೆ. ಖಾಸಗಿ ದೇವಾಲಯಗಳಲ್ಲೂ ಪೂಜೆ ನಡೆಸಬೇಕು ಎಂದು ಅವರು ಸುತ್ತೋಲೆಯಲ್ಲಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುವ ಸಂದರ್ಭದಲ್ಲೇ ದೇವಾಲಯಗಳಲ್ಲೂ ಪೂಜೆ ನಡೆಯಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅದರಂತೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಪೂಜೆ ನಡೆಸಲು ಸಿದ್ಧತೆ ನಡೆದಿದೆ.

‘ಸರ್ಕಾರದ ಸೂಚನೆಯಂತೆ ಮಲೆ ಮಹದೇಶ್ವರಸ್ವಾಮಿಗೆ ಪೂಜೆ ನಡೆಯಲಿದೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ರಾಮಮಂದಿರಗಳಲ್ಲಿ ವಿಶೇಷಪೂಜೆ: ಮಂದಿರ ನಿರ್ಮಾಣದ ಭೂಮಿ ಪೂಜೆ ಸಾಂಗವಾಗಿ ನೆರವೇರಲೆಂದು ಪ್ರಾರ್ಥಿಸಿ ಚಾಮರಾಜನಗರದ ಶಂಕರಪುರದಲ್ಲಿರುವ ಶ್ರೀರಾಮ ಮಂದಿರ ಹಾಗೂ ಅಗ್ರಹಾರ ಬೀದಿಯಲ್ಲಿರುವ ಪಟ್ಟಾಭಿರಾಮಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಲಿವೆ. ಪಟ್ಟಾಭಿರಾಮಮಂದಿರದಲ್ಲಿ ಶ್ರೀರಾಮ ತಾರಕ ಹೋಮ ನಡೆಯಲಿದೆ. 

ಭೂಮಿಪೂಜೆ ಕಾರ್ಯಕ್ರಮವನ್ನು ಹಿಂದೂಗಳು ಹಬ್ಬದಂತೆ ಸಂಭ್ರಮಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಈಗಾಗಲೇ ಕರೆ ನೀಡಿದೆ. ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಬೇಕು. ದೇವರಿಗೆ ದೀಪ ಹಚ್ಚಿ, ರಾಮತಾರಕ ಮಂತ್ರ ಜಪಿಸಬೇಕು ಎಂದು ಅದರ ಮುಖಂಡರು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು