ಲಾಹೋರ್: ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಭುಜದ ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ನಸೀಮ್ ಶಾ ಅಲಭ್ಯರಾಗಿದ್ದಾರೆ.
ನಸೀಂ ಬದಲಿಗೆ ಅನುಭವಿ ಮಧ್ಯಮ ವೇಗಿ ಹಸನ್ ಅಲಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ ಎಂದು ಪಾಕ್ ತಂಡ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.
20 ವರ್ಷದ ನಸೀಮ್ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಪಂದ್ಯದ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮೂರ್ನಾಲ್ಕು ತಿಂಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೂ ಲಭ್ಯವಾಗುವುದು ಅನುಮಾನ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್, ಬ್ಯಾಟರ್), ಅಬ್ರಾರ್ ಅಹ್ಮದ್ (ಸ್ಪಿನ್ನರ್), ಜಮಾನ್ ಖಾನ್ (ವೇಗದ ಬೌಲರ್) ಅವರನ್ನು ಮೀಸಲು ಆಟಗಾರರನ್ನಾಗಿ ಪ್ರಕಟಿಸಿದ್ದು, ವಿಶ್ವಕಪ್ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಇವರನ್ನು ಪರಿಗಣಿಸಲಾಗುತ್ತದೆ.
ಪಾಕಿಸ್ತಾನ ತಂಡವು ಸೆ.29ರಂದು ನ್ಯೂಜಿಲೆಂಡ್ ವಿರುದ್ಧ ಮತ್ತು ಅ.3ರಂದು ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅ.6ರಂದು ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೆಣಸಲಿದೆ.
ಪಾಕ್ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಕರ್ ಜಮಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಇಫ್ತಿಕಾರ್ ಅಹಮ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಆಘಾ ಸಲ್ಮಾನ್, ಶಾಹೀನ್ ಆಫ್ರಿದಿ, ಉಸಾಮಾ ಮೀರ್.
ಮೀಸಲು ಆಟಗಾರರು: ಮೊಹಮ್ಮದ್ ಹ್ಯಾರಿಸ್, ಅಬ್ರಾರ್ ಅಹ್ಮದ್, ಜಮಾನ್ ಖಾನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.