ಭಾನುವಾರ, ಜುಲೈ 3, 2022
27 °C
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ: ಐವರಿಗೆ 621 ಅಂಕಗಳು, 620 ಪಡೆದ ಏಳು ಸಾಧಕರು

ಚಾಮರಾಜನಗರ: ದಾಖಲೆಯ ಶೇ 92.13 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಚಾಮರಾಜನಗರ: 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಶೇ 92.13ರಷ್ಟು ಫಲಿತಾಂಶ ದಾಖಲಿಸಿ ದಾಖಲೆ ಬರೆದಿದ್ದಾರೆ. 

ಐವರು ವಿದ್ಯಾರ್ಥಿನಿಯರು 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೊದಲಿಗರಾಗಿದ್ದು, ಏಳು ವಿದ್ಯಾರ್ಥಿಗಳು 620 ಅಂಗಳನ್ನು ಗಳಿಸಿ ಎರಡನೇ ಸ್ಥಾನಗಳಿಸಿದ್ದಾರೆ. 

ಮೊದಲ ಸ್ಥಾನ ಗಳಿಸಿದವರಲ್ಲಿ ನಾಲ್ವರು ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರು ಎಂಬುದು ವಿಶೇಷ. ಮತ್ತೊಬ್ಬಳು ಅನುದಾನಿತ ಶಾಲೆಯ ವಿದ್ಯಾರ್ಥಿನಿ. ಎರಡನೇ ಸ್ಥಾನಗಳಿಸಿರುವ ಎಲ್ಲರೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು. 

ಗುಂಡ್ಲುಪೇಟೆಯ ಯಡವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಅನುಷಾ, ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ದೇವಿ ಕೆ.ವಿ.ಎನ್‌, ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪಾರ್ವತಮ್ಮ, ಗುಂಡ್ಲುಪೇಟೆ ಆದರ್ಶ ಶಾಲೆಯ ಸಿಂಚನ ಡಿ.ಎಲ್. ಹಾಗೂ ಚಾಮರಾಜನಗರ ತಾಲ್ಲೂಕಿನ ಮರಿಯಾಲದ ಮುರುಘ ರಾಜೇಂದ್ರಸ್ವಾಮಿ ಪ್ರೌಢಶಾಲೆಯ ಸ್ಫೂರ್ತಿ ಅವರು 621 ಅಂಕಗಳನ್ನು ಪಡೆದ ಸಾಧಕರು. 

ಕಲ್ಪುರದವರಾದ ಸ್ಫೂರ್ತಿ ಅವರ ತಂದ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಪಾರ್ವತಮ್ಮ ಅವರ ತಂದೆ ಬಡ ಕೃಷಿಕ. ಸಿಂಚನ ತಾಯಿ, ಸೋದರ ಮಾವನ ಆಶ್ರಯದಲ್ಲಿ ಬೆಳೆದ ವಿದ್ಯಾರ್ಥಿನಿ. ಸ್ಫೂರ್ತಿ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದರೆ ಉಳಿದವರೆಲ್ಲ ಇಂಗ್ಲಿಷ್‌ ಮಾಧ್ಯಮದವರು. 

620 ಅಂಕಗಳನ್ನು ಪಡೆದವರಲ್ಲಿ ಗುಂಡ್ಲುಪೇಟೆಯ ಸೇಂಟ್‌ ಜಾನ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳಿದ್ದಾರೆ. ಚಂದನ ಎಸ್‌.ಬಿ, ಜಿ.ವರ್ಷಿಣಿ ಹಾಗೂ ದೀಕ್ಷಿತ್‌ ಜಿ.ಆರ್‌. ಉಳಿದಂತೆ ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ –ಅನುಷಾ ಎನ್., ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರ ಅನುಷಾ ಡಿ.ವಿ, ಚಾಮರಾಜನಗರದ ಸಂತ ಜೋಸೆಫ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ಜೀವನ್‌, ಸೇವಾಭಾರತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ತನುಪ್ರಿಯಾ ಅವರು 620 ಅಂಕಗಳಿಸಿ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ದಾಖಲೆಯ ಫಲಿತಾಂಶ: ಜಿಲ್ಲೆಯು ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ರಾಜ್ಯಮಟ್ಟದಲ್ಲಿ ‘ಎ’ ಶ್ರೇಣಿ ಪಡೆದಿರುವ ಜಿಲ್ಲೆಗಳ ಪಟ್ಟಿಯಲ್ಲಿ ಸೇರಿದೆ. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದರಿಂದ ಎಲ್ಲ ಜಿಲ್ಲೆಗಳಂತೆ ಜಿಲ್ಲೆಯಲ್ಲೂ ಶೇ 100ರಷ್ಟು ಫಲಿತಾಂಶ ಬಂದಿತ್ತು. ಆದರೆ, ಪರೀಕ್ಷೆ ನಡೆದು ಇಷ್ಟು ಹೆಚ್ಚಿನ ಪ್ರಮಾಣದ ಫಲಿತಾಂಶ ಬಂದಿರುವುದು ಇದೇ ಮೊದಲು. 

ಮುಂಚೂಣಿಯಲ್ಲಿ ಹೆಣ್ಣುಮಕ್ಕಳು: ಕಳೆದ ಸಾಲಿನ ಪರೀಕ್ಷೆಗೆ ಜಿಲ್ಲೆಯಲ್ಲಿ 11,547 ವಿದ್ಯಾರ್ಥಿಗಳು (5,818 ಗಂಡು ಹಾಗೂ 5,729 ಹೆಣ್ಣು ಮಕ್ಕಳು) ಹಾಜರಾಗಿದ್ದರು. ಈ ಪೈಕಿ 10,638 ಮಂದಿ ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 5,219 ಗಂಡು ಮಕ್ಕಳು ಹಾಗೂ  5,519 ಹೆಣ್ಣುಮಕ್ಕಳು. ಬಾಲಕರ ಫಲಿತಾಂಶ ಶೇ 89.70ರಷ್ಟು ದಾಖಲಾಗಿದ್ದರೆ, ಶೇ 94.59ರ‌ಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 

ತಾಲ್ಲೂಕುವಾರು: ಎಂದಿನಂತೆ ಈ ಬಾರಿಯೂ ಹನೂರು ತಾಲ್ಲೂಕು ಮೊದಲ ಸ್ಥಾನದಲ್ಲಿದ್ದರೆ (ಶೇ 96.89), ಯಳಂದೂರು (ಶೇ 95.75) ಎರಡನೇ ಸ್ಥಾನ, ಕೊಳ್ಳೇಗಾಲ (ಶೇ 95.06) ಮೂರನೇ ಸ್ಥಾನ ಪಡೆದಿದೆ. ಯಾವಾಗಲೂ ಕೊನೆಯ ಸ್ಥಾನ ಬರುತ್ತಿದ್ದ ಗುಂಡ್ಲುಪೇಟೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ (ಶೇ 90.62) ದಾಖಲಾಗಿದೆ. ಶೇ 87.70ರಷ್ಟು ಫಲಿತಾಂಶ ದಾಖಲಿಸಿರುವ ಚಾಮರಾಜನರ ತಾಲ್ಲೂಕು ಕೊನೆಯ ಸ್ಥಾನದಲ್ಲಿದೆ.   

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ. 92.50ರಷ್ಟು ಹಾಗೂ ನಗರ ಪ್ರದೇಶ ವಿದ್ಯಾರ್ಥಿಗಳು ಶೇ 91.49 ರಷ್ಟು ತೇರ್ಗಡೆಯಾಗಿದ್ದಾರೆ.  

ಸರ್ಕಾರಿ ಶಾಲೆಗಳ 5,889 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,333 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 90.56ರಷ್ಟು ಫಲಿತಾಂಶ ದಾಖಲಾಗಿದೆ. ಅನುದಾನಿತ ಶಾಲೆಗಳ 2,844 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 2,591 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ. 91.10ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳ 2,814 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,714 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 96.45ರಷ್ಟು ಫಲಿತಾಂಶ ಬಂದಿದೆ.

52 ಶಾಲೆಗಳಲ್ಲಿ ಶೇ 100 ಫಲಿತಾಂಶ

ಜಿಲ್ಲೆಯಲ್ಲಿ 52 ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. 

22 ಸರ್ಕಾರಿ ಶಾಲೆ, ಆರು ಅನುದಾನಿತ ಹಾಗೂ 24 ಖಾಸಗಿ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ 13 ಶಾಲೆಗಳು (7 ಸರ್ಕಾರಿ , ಒಂದು ಅನುದಾನಿತ ಹಾಗೂ 5 ಖಾಸಗಿ), ಗುಂಡ್ಲುಪೇಟೆ ತಾಲ್ಲೂಕಿನ 6 ( 4 ಸರ್ಕಾರಿ, ತಲಾ ಒಂದೊಂದು ಅನುದಾನಿತ, ಖಾಸಗಿ) ಹನೂರಿನ 12 (ತಲಾ 6 ಸರ್ಕಾರಿ ಹಾಗೂ ಖಾಸಗಿ), ಕೊಳ್ಳೇಗಾಲದ 14 ( 2 ಸರ್ಕಾರಿ, 3 ಅನುದಾನಿತ ಹಾಗೂ 6 ಖಾಸಗಿ) ಹಾಗೂ ಯಳಂದೂರು ತಾಲ್ಲೂಕಿನ 7 ( 3 ಸರ್ಕಾರಿ, 1 ಅನುದಾನಿತ ಹಾಗೂ 3) ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. 

––

‘ಶೈಕ್ಷಣಿಕ ಭವಿಷ್ಯದ ದಿಕ್ಸೂಚಿ’ 

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಇತಿಹಾಸದಲ್ಲಿ ಹಿಂದೆದೂ ಸಾಧಿಸದ ರೀತಿಯಲ್ಲಿ ಶೇ 92.13ರಷ್ಟು ಫಲಿತಾಂಶ ಪಡೆದು ಅಭೂತಪೂವ೯ ಸಾಧನೆ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವುದು ಖುಷಿಯ ಸಂಗತಿ. ಭವಿಷ್ಯದಲ್ಲಿ ಜಿಲ್ಲೆಯು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದೆ ಎಂಬುದನ್ನು ಸಾಬೀತು ಪಡಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

ಈ ಗಣನೀಯ ಸಾಧನೆಗೆ ಕಾರಣರಾದ ಜಿಲ್ಲೆಯ ವಿದ್ಯಾಥಿ೯ ವೃಂದ, ಶಿಕ್ಷಕ -ಶಿಕ್ಷಕಿಯರು, ಪೋಷಕರು, ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿದ್ಯಾಥಿ೯ಗಳ ವಿಜಯಯಾತ್ರೆ ಹೀಗೆ ಮುಂದುವರಿಯಲಿ ಮತ್ತು ಜಿಲ್ಲೆಗೆ ಹಾಗೂ ನಾಡಿಗೆ ಕೀತಿ೯ ತರುವಂತಾಗಲಿ. ಅನುತ್ತೀಣ೯ರಾದ ವಿದ್ಯಾಥಿ೯ಗಳು ನಿರಾಶೆ ಹೊಂದದೆ ಪೂರಕ ಪರೀಕ್ಷೆಯಲ್ಲಿ ಮತ್ತಷ್ಟು ಪರಿಶ್ರಮದಿಂದ ಪರೀಕ್ಷೆ ಬರೆದು ಯಶಸ್ವಿಯಾಗುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಹೇಳಿಕೆಯಲ್ಲಿ ಅವರು ಹಾರೈಸಿದ್ದಾರೆ. 

––

ಡಿಡಿಪಿಐ, ಬಿಇಒಗಳು, ಶಿಕ್ಷಕರ ಸಹಕಾರದಿಂದ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಕೂಡ ಚೆನ್ನಾಗಿ ಬರೆದಿದ್ದಾರೆ. ಪೋಷಕರ ಸಹಕಾರವೂ ಚೆನ್ನಾಗಿತ್ತು
ಕೆ.ಎಂ.ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಸಿಇಒ

––

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲಾದ ಅತ್ಯಂತ ಉತ್ತಮ ಫಲಿತಾಂಶ ಇದು. ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ
ಎಸ್‌.ಎನ್‌.ಮಂಜುನಾಥ್‌, ಡಿಡಿಪಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.