ಮಂಗಳವಾರ, ಸೆಪ್ಟೆಂಬರ್ 28, 2021
25 °C
ಮೊದಲ, ಎರಡನೇ, ಮೂರನೇ ಸ್ಥಾನ... ಎಲ್ಲರೂ ವಿದ್ಯಾರ್ಥಿನಿಯರೇ

ಎಸ್ಸೆಸ್ಸೆಲ್ಸಿ ಫಲಿತಾಂಶ: ಮೂವರಿಗೆ 621 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮಟ್ಟಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೂವರು ವಿದ್ಯಾರ್ಥಿನಿಯರು ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಮೂವರೂ 625ಕ್ಕೆ ‌621 ‌ಅಂಕಗಳನ್ನು ಗಳಿಸಿದ್ದಾರೆ. 

ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅನುಷಾ ಕೆ.ಜೆ, ಚಾಮರಾಜನಗರದ ಜೆಎಸ್‌ಎಸ್‌ ಬಾಲಕಿಯರ ಪ್ರೌಢ ಶಾಲೆಯ ನಂದಿನಿ ಎ.ಎಸ್‌, ಹಾಗೂ ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಅನನ್ಯರಾಜ್‌ ಹೆಚ್ಚು ಅಂಕಗಳಿಸಿರುವ ಸಾಧಕರು.

619 ಅಂಕಗಳಿಸಿರುವ ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಧನಲಕ್ಷ್ಮಿ ಆರ್‌.ಪಗಡೆ ಎರಡನೇ ಸ್ಥಾನಗಳಿಸಿದ್ದರೆ, ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ಐಶ್ವರ್ಯಾ ಸಿ. ಎಂಬ ವಿದ್ಯಾರ್ಥಿನಿ 618 ಅಂಕಗಳಿಸಿ ಜಿಲ್ಲೆಗೆ ಮೂರನೇ ಸ್ಥಾನಗಳಿಸಿದ್ದಾರೆ. 

ಮೊದಲ ಮೂರೂ ಸ್ಥಾನಗಳನ್ನು ಗಳಿಸಿರುವವರು ವಿದ್ಯಾರ್ಥಿನಿಯರು ಎಂಬುದು ವಿಶೇಷ.

ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಕೋವಿಡ್‌ ಭಯದ ನಡುವೆಯೇ ಪೋಷಕರು ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.  

ನಿರೀಕ್ಷೆ ಇತ್ತು: ‘ಲಾಕ್ ಡೌನ್ ಇದ್ದರೂ ಶಿಕ್ಷಕರು ಉತ್ತಮ ಸಹಕಾರ ನೀಡಿದ್ದರಿಂದ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಮನೆಯಲ್ಲೂ ಹೆಚ್ಚಿನ ಪ್ರೋತ್ಸಹ ಇತ್ತು. ಪರೀಕ್ಷೆ ಚೆನ್ನಾಗಿ ಮಾಡಿದ್ದೆ. ಹಾಗಾಗಿ ಹೆಚ್ಚು ಅಂಕಗಳು ಬರುವ ನಿರೀಕ್ಷೆ ಇತ್ತು. ನನಗೆ ಪ್ರಾಣಿಗಳನ್ನು ಕಂಡರೆ ತುಂಬ ಪ್ರೀತಿ. ಹಾಗಾಗಿ, ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ಪಶು ವೈದ್ಯೆ ಆಗಬೇಕು ಎಂಬ ಬಯಕೆ ಇದೆ’ ಎಂದು 621 ಅಂಕಗಳನ್ನು ಗಳಿಸಿರುವ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅನುಷಾ ‘ಪ್ರಜಾವಾಣಿ’ಗೆ ತಿಳಿಸಿದರು. 

621 ಅಂಕಗಳನ್ನು ಗಳಿಸಿರುವ ಮತ್ತೊಬ್ಬ ವಿದ್ಯಾರ್ಥಿನಿ ಚಾಮರಾಜನಗರ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆಯ ನಂದಿನಿ. ಮೂಲತಃ ಅಟ್ಟುಗೂಳಿಪುರದವರಾದ ಆಕೆ, ನಗರದಲ್ಲಿ ಸೋದರ ಮಾವನ ಮನೆಯಲ್ಲಿದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. 

‘ಕೋವಿಡ್‌ ಕಾರಣದಿಂದ ಮನೆಯಲ್ಲೇ ಇದ್ದುದರಿಂದ ಅಭ್ಯಾಸ ಮಾಡುವುದಕ್ಕೆ ಹೆಚ್ಚು ಅನುಕೂಲ ಆಯಿತು. ರಾಜ್ಯ ಸರ್ಕಾರ ನಡೆಸಿದ ಆನ್‌ಲೈನ್‌ ತರಗತಿಗಳು ಕೂಡ ನೆರವಾದವು. ಶಿಕ್ಷಕರು ಹಾಗೂ ಮನೆಯಲ್ಲೂ ಉತ್ತಮ ಪ್ರೋತ್ಸಾಹ ನೀಡಿದರು. ಕೋವಿಡ್‌ ಹಾವಳಿ ನಡುವೆ ನಾನು ಪರೀಕ್ಷೆ ಬರೆಯುವಾಗ ಮನೆಯಲ್ಲಿ ಎಲ್ಲರೂ ಹೆದರಿದ್ದರು. ಹಾಗಿದ್ದರೂ ಧೈರ್ಯ ಮಾಡಿ ಬರೆದಿದ್ದೆ. ಉತ್ತಮ ಅಂಕ ಗಳಿಸಿರುವುದು ಸಂತಸ ನೀಡಿದೆ. ಪಿಯುಸಿಯಲ್ಲಿ ಪಿಸಿಎಂಬಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೇನೆ’ ಎಂದು ನಂದಿನಿ ತಿಳಿಸಿದರು. 

ಅತಿ ಹೆಚ್ಚು ಅಂಕ ಗಳಿಸಿರುವ ಮತ್ತೊಬ್ಬ ಸಾಧಕಿ ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಅನನ್ಯರಾಜ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಹಲವು ದಿನಗಳ ಕಾಲ ಆನ್‌ಲೈನ್ ತರಗತಿ ಕಲಿಕೆ ಕಷ್ಟವಾಯಿತು. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟಪಟ್ಟೆ. ಹಾಗಿದ್ದರೂ ಓದುವುದನ್ನು ಬಿಡಲಿಲ್ಲ. ಉತ್ತಮ ಅಂಕಗಳಿಸಲು ಇದು ನೆರವಾಯಿತು. ಹೆಚ್ಚು ಅಂಕ ಬರಬಹುದು ಎಂದು ಊಹಿಸಿದ್ದೆ. ವೈದ್ಯೆಯಾಗಬೇಕು ಎಂಬ ಆಸೆ ಇದೆ’ ಎಂದರು. 

ಶಾಸಕ ಎನ್‌.ಮಹೇಶ್‌ ಅಭಿನಂದನೆ

ಜಿಲ್ಲೆಗೆ ಹೆಚ್ಚು ಅಂಕಗಳಿಸಿದ ಕೊಳ್ಳೇಗಾಲ ತಾಲ್ಲೂಕಿನ ಅನನ್ಯರಾಜ್‌, ಐಶ್ವರ್ಯಾ, ಧನಲಕ್ಷ್ಮಿ ಅವರ ಮನೆಗೆ ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರು ಮಂಗಳವಾರ ಭೇಟಿ ನೀಡಿ, ಮೂವರೂ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

--------

ವೈದ್ಯೆಯಾಗುವ ಕನಸು ಇಟ್ಟುಕೊಂಡಿದ್ದೇನೆ. ಮುಂದೆ ಇನ್ನೂ ಹೆಚ್ಚು ಅಂಕಗಳಿಸಿ ಕಾಲೇಜು ಮತ್ತು ಉಪನ್ಯಾಸಕರಿಗೆ ಕೀರ್ತಿ ತರುತ್ತೇನೆ.
ಧನಲಕ್ಷ್ಮಿ, ವಾಸವಿ ವಿದ್ಯಾಕೇಂದ್ರ, ಕೊಳ್ಳೇಗಾಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.